ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಯಲಿಯೂರು ಗ್ರಾಮದ ಭತ್ತ ಖರೀದಿ ಕೇಂದ್ರ ಹಾಗೂ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಯಲಿಯೂರು ಗ್ರಾಮದಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ತೆರೆಯಲಾಗಿರುವ ಭತ್ತ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಡೀಸಿ, ಪರಿಶೀಲನೆ ನಡೆಸಿ, ಖರೀದಿ ಕೇಂದ್ರದಲ್ಲಿರುವ ಮೂಲ ಸೌಕರ್ಯಗಳು, ನೋಂದಣಿ ಕುರಿತು ಮಾಡಿಕೊಂಡಿರುವ ವ್ಯವಸ್ಥೆಗಳು ಹಾಗೂ ಕಾರ್ಯವೈಖರಿಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದರು. ಭತ್ತ ಖರೀದಿಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಖರೀದಿ ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ ಉಪಸ್ಥಿತರಿದ್ದರು.
ನಂತರ ತಾಲೂಕು ಕಚೇರಿಯ ವಿವಿಧ ಶಾಖೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿಗಳನ್ನು ಸ್ವೀಕರಿಸಿ ಕಾನೂನು ರೀತ್ಯ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕಡತ ವಿಲೇವಾರಿ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿಯಾಗಬೇಕು. ವಿನಃ ಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು ಎಂದು ತಾಕೀತು ಮಾಡಿದರು.
ಸಹಾಯವಾಣಿ, ಗ್ರಾಮ ಆಡಳಿತಾಧಿಕಾರಿಗಳ ಕೆಲಸ ಪ್ರಮುಖವಾಗಿದೆ. ಅವರು ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರ ನೀಡಲು ತೊಂದರೆಯಾಗುತ್ತಿರುವುದು ಕಂಡುಬಂದಿದೆ. ಆನ್‌ಲೈನ್ ಮೂಲಕ ಗ್ರಾಮ ಆಡಳಿತಾಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯನ್ನು ಕಂದಾಯ ನಿರೀಕ್ಷಕರ ಲಾಗ್ ಇನ್‌ಗೆ ವರ್ಗಾಯಿಸಲಾಗಿದೆ ಎಂದರು.ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುರ್ತಾಗಿ ಆದಾಯ ಅಥವಾ ಜಾತಿ ಪ್ರಮಾಣ ಪತ್ರ ಬೇಕಿದ್ದಲ್ಲಿ ನೀಡಲು ಸಹಾಯವಾಣಿಯನ್ನು ಸಹ ತೆರೆಯಲಾಗಿದೆ. ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ಇದೇ ವೇಳೆ ಕಡತಗಳ ಗಣಕೀಕರಣ ಕೆಲಸಗಳನ್ನು ಸಹ ಪರಿಶೀಲಿಸಿದರು.
ಕನ್ನಡಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ:ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು, ಜಿಲ್ಲೆಯಲ್ಲಿ ಯಶಸ್ವಿಯಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವ ಸವಿನೆನಪಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದರಿಂದ ನಗರದ ಹೊರವಲಯದ ಕಲ್ಲಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಕನ್ನಡ ಭವನ ನಿರ್ಮಾಣ ಸಂಬಂಧ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ, ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅವರಿಂದ ಅಗತ್ಯ ಸಲಹೆಗಳನ್ನು ಪಡೆದರು. ಈ ವೇಳೆ ಅಧಿಕಾರಿಗಳು ಉಪಸ್ಥಿತರಿದ್ದರು.ಇದೇ ವೇಳೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 6 ತಿಂಗಳಿಂದ ಮುಷ್ಕರ ನಡೆಸುತ್ತಿರುವ ಗ್ರಾಮಾಡಳಿತಾಧಿಕಾರಿಗಳ ಮನವಿ ಸ್ವೀಕರಿಸಿದ ಡೀಸಿ ಡಾ.ಕುಮಾರ, ಈ ಸಂಬಂಧ ರಾಜ್ಯ ಮಟ್ಟದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಅವರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.