. ಮಳೆಯಾಗುವ ನಿರೀಕ್ಷೆಯಿದ್ದು, ಬಿತ್ತನೆ ಮಾಡಿದ ಬೆಳೆಗಳನ್ನು ನಾಶಪಡಿಸುವಂತಹ ದುಡುಕಿನ ನಿರ್ಧಾರಗಳನ್ನು ರೈತರು ಕೈಗೊಳ್ಳಬೇಡಿ, ಸರ್ಕಾರ ನಿಮ್ಮೊಂದಿಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ರೈತರಲ್ಲಿ ಮನವಿ ಮಾಡಿದರು.

ಬ್ಯಾಡಗಿ: ಮಳೆಯಾಗುವ ನಿರೀಕ್ಷೆಯಿದ್ದು, ಬಿತ್ತನೆ ಮಾಡಿದ ಬೆಳೆಗಳನ್ನು ನಾಶಪಡಿಸುವಂತಹ ದುಡುಕಿನ ನಿರ್ಧಾರಗಳನ್ನು ರೈತರು ಕೈಗೊಳ್ಳಬೇಡಿ, ಸರ್ಕಾರ ನಿಮ್ಮೊಂದಿಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ರೈತರಲ್ಲಿ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕೃತಿಯ ಜೊತೆ ನಿರಂತರ ಹೋರಾಟ ನಡೆಯುತ್ತಿದೆ. ನಾನು ಸಹ ಕೃಷಿಕ ಕುಟುಂಬದಿಂದ ಬಂದವನಿದ್ದೇನೆ. ರೈತರ ನೋವು ನನಗೂ ಅರ್ಥವಾಗುತ್ತದೆ, ಆದರೆ ಸಮರ್ಪಕವಾಗಿ ಮಳೆಯಾಗಿಲ್ಲ ಎನ್ನುವ ಕಾರಣಕ್ಕೆ ಹತಾಶ ಮನೋಭಾವನೆಯಿಂದ ಬಿತ್ತನೆ ಮಾಡಿದ ಬೆಳೆಗಳನ್ನು ನಾಶಪಡಿಸುವಂತಹ ದುಡುಕಿನ ನಿರ್ಧಾರ ಕೈಗೊಳ್ಳದೇ ಮಳೆಯಾಗಲಿದೆ ಎಂಬ ಆಶಾಭಾವನೆಯಿಂದ ನಾವೆಲ್ಲರೂ ಬದುಕೋಣ ಎಂದು ಸರ್ಕಾರದ ಪರವಾಗಿ ಅಭಯ ನೀಡಿದರು.

ಪರಿಹಾರ ಕೊಡಿಸುವುದಕ್ಕೂ ಸಿದ್ಧ: ಮಳೆ ನಮ್ಮ ಯಾರ ಕೈಯಲ್ಲೂ ಇಲ್ಲ, ಹವಾಮಾನ ವೈಪರೀತ್ಯದಿಂದ ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 40ರಷ್ಟು ಕೊರತೆಯಾಗಿದೆ ಎಂಬ ವರದಿಗಳಿವೆ. ಈಗಾಗಲೇ ಮಧ್ಯಂತರ ಪರಿಹಾರಕ್ಕೆ ರೈತಪರ ಸಂಘಟನೆಗಳಿಂದ ಒತ್ತಡ ಬರುತ್ತಿದ್ದು, ಸದರಿ ವಿಷಯವನ್ನೂ ಸರ್ಕಾರದ ಮಟ್ಟದಲ್ಲಿ ನಾವೆಲ್ಲರೂ ಚರ್ಚಿಸಲಿದ್ದು, ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಗಮನಕ್ಕೆ ತರುವ ಮೂಲಕ ಪರಿಹಾರ ಕೊಡಿಸಲೂ ಬದ್ಧರಿದ್ಧೇವೆ. ಅಲ್ಲಿಯವರೆಗೂ ರೈತರು ತಾಳ್ಮೆ ಕಳೆದುಕೊಳ್ಳದಂತೆ ಮನವಿ ಮಾಡಿದರು.ಅಧಿಕಾರಿಗಳಿಗೆ ಖಡಕ್ ಸೂಚನೆ: ಬಿತ್ತನೆ ಮಾಡಿದ ಬೆಳೆಗಳನ್ನು ರೈತರು ನಾಶಪಡಿಸುತ್ತಿದ್ದರೂ ಸಹ ರೈತರ ಹೊಲಗಳಿಗೆ ಸೌಜನ್ಯಕ್ಕೂ ತಾಲೂಕಾಡಳಿತ ಭೇಟಿ ನೀಡಿ ಸಾಂತ್ವನ ಹೇಳಿಲ್ಲವೆಂದು ವಿಪಕ್ಷಗಳು ಆರೋಪಿಸುತ್ತಿವೆ, ಅಧಿಕಾರಿಗಳಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದು ಪರಿಸ್ಥಿತಿಯ ಲಾಭ ಪಡೆಯಲು ಬಿಡದಂತೆ ಕೃಷಿಕರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲು ನಾನು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ದಾನಪ್ಪ ಚೂರಿ, ಬಸವರಾಜ ಸವಣೂರ, ದುರ್ಗೆಶ ಗೋಣೆಮ್ಮನವರ, ಖಾದರಸಾಬ್ಸೇ ದೊಡ್ಮನಿ ಸೇರಿದಂತೆ ಇನ್ನಿತರರಿದ್ದರು.