ಸಾರಾಂಶ
ಯಲ್ಲಾಪುರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕುರಿತಾಗಿ ಶಾಸಕ ಶಿವರಾಮ ಹೆಬ್ಬಾರ ಟೀಕಿಸಿರುವುದನ್ನು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಖಂಡಿಸಿದ್ದು, ಚುನಾವಣೆ ಸಂದರ್ಭದಲ್ಲಿ ಟೀಕೆ ಸಾಮಾನ್ಯ. ಆದರೆ ಚುನಾವಣೆ ಮುಗಿದ ಬಳಿಕ ಜನಪ್ರತಿನಿಧಿಗಳು ಅಭಿವೃದ್ಧಿಗೆ ಮಹತ್ವ ನೀಡಬೇಕು ಎಂದಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರಿಪ್ರಕಾಶ ಕೋಣೆಮನೆ ಅವರು, ಚುನಾವಣೆ ಮುಗಿದ ನಂತರ ಪಕ್ಷಾತೀತವಾಗಿ ಕೇಂದ್ರ, ರಾಜ್ಯ, ಪಕ್ಷದ ಬೆಂಬಲ ಪಡೆದು ಶಾಸಕರು, ಸಂಸದರು ಒಂದಾಗಿ ಪರಸ್ಪರ ಅಭಿವೃದ್ಧಿಗೆ ಮಹತ್ವ ನೀಡಿ, ಕಾರ್ಯನಿರ್ವಹಿಸುವ ಬದಲಿಗೆ ಕೀಳುಶಬ್ದಗಳ ಮೂಲಕ ಟೀಕಿಸಿರುವುದು ಸರಿಯಲ್ಲ ಎಂದರು.ಕಾಗೇರಿ ಅವರ ಕುರಿತಾಗಿ ಹೆಬ್ಬಾರ ಅವರು ಆಡಿರುವ ಕುಹಕದ ಮಾತುಗಳು ಸರಿಯಲ್ಲ. ಶಿವರಾಮ ಹೆಬ್ಬಾರ ತಾಂತ್ರಿಕವಾಗಿ ಬಿಜೆಪಿ ಶಾಸಕರೇ. ಅವರು ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಬೇಕಾಗಿದೆ. ಕೇಂದ್ರ ಸರ್ಕಾರದ ಸಹಕಾರ ಪಡೆಯುವಲ್ಲಿ ಕಾಗೇರಿ ಅವರ ಜತೆ ಕೈಜೋಡಿಸಬೇಕು. ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದ ಅವರು, ಶಿವರಾಮ ಹೆಬ್ಬಾರ ಯಾವುದೇ ಪಕ್ಷದಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಂತ್ರರು. ಅಲ್ಲದೇ, ಮುಖ್ಯಮಂತ್ರಿ ಅಂಕೋಲಾಕ್ಕೆ ಬಂದ ಸಂದರ್ಭದಲ್ಲಿ ಭಾಗಿಯಾಗಿ ಕ್ಷೇತ್ರದ ಬಗ್ಗೆ ಬೇಡಿಕೆ ಸಲ್ಲಿಸುವುದು ಅವರ ಕರ್ತವ್ಯ. ಆ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಎಲ್ಲ ಶಾಸಕರೂ ಹೋಗಲೇಬೇಕು. ಕಾಗೇರಿ ಅವರ ಕುರಿತಾದ ಟೀಕೆ ಇಡೀ ಜಿಲ್ಲೆಗೆ ಅವಮಾನ ಉಂಟುಮಾಡಿದೆ. ಇದನ್ನು ಮುಂದುವರಿಸಿದರೆ ನಾವು ಜನರ ಮುಂದೆ ಸತ್ಯಾಸತ್ಯತೆಯನ್ನು ಬಿಚ್ಚಿಡಬೇಕಾಗುತ್ತದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ಕಡೆ ಮುಖ ಹಾಕಿರುವುದು ಹೆಬ್ಬಾರ್ ಅವರ ಅನೈತಿಕತೆಗೆ ಸಾಕ್ಷಿಯಾಗಿದೆ. ಹೆಬ್ಬಾರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಾಮರ್ಥ್ಯವಿದ್ದರೆ ಮರು ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.ಬಿಜೆಪಿಯ ಜಿಲ್ಲಾ ಮುಖ್ಯಸ್ಥ ಉಮೇಶ ಭಾಗ್ವತ, ಯಲ್ಲಾಪುರ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಮುಂಡಗೋಡ ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ, ಹಿರಿಯ ಬಿಜೆಪಿ ಮುಖಂಡರಾದ ಗಣಪತಿ ಬೋಳಗುಡ್ಡೆ, ಸುಬ್ಬಣ್ಣ ಬೋಳ್ಮನೆ ಸುದ್ದಿಗೋಷ್ಠಿಯಲ್ಲಿದ್ದರು.