ಸಾರ್ವಜನಿಕರು ಸಲ್ಲಿಸುವ ಅರ್ಜಿ ಪರಿಶೀಲಿಸಿ, ನಿಯಮಾನುಸಾರ ಸಾಧ್ಯವಾದಷ್ಟು ಸಕಾಲದಲ್ಲಿ ವಿಲೇವಾರಿ ಮಾಡಬೇಕು.
ಕಂಪ್ಲಿ: ಸರ್ಕಾರಿ ಸೇವೆ ಜನರ ಮನೆ ಬಾಗಿಲಿಗೆ ತಲುಪಿಸುವ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವಾ ಆಂದೋಲನ ಶನಿವಾರ ಇಲ್ಲಿನ ಮಾರುತಿ ನಗರದ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜೂಗಲ ಮಂಜುನಾಯಕ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸುವುದು ಸರಿಯಲ್ಲ. ಜನರು ತಮ್ಮ ಕೆಲಸಗಳಿಗಾಗಿ ಪದೇಪದೇ ಕಚೇರಿಗಳಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.ಸಾರ್ವಜನಿಕರು ಸಲ್ಲಿಸುವ ಅರ್ಜಿ ಪರಿಶೀಲಿಸಿ, ನಿಯಮಾನುಸಾರ ಸಾಧ್ಯವಾದಷ್ಟು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಯಾವುದಾದರೂ ಅರ್ಜಿಯಲ್ಲಿ ತಾಂತ್ರಿಕ ಅಥವಾ ಕಾನೂನು ತೊಂದರೆಗಳಿದ್ದರೆ, ಅರ್ಜಿದಾರರಿಗೆ ಸ್ಪಷ್ಟವಾಗಿ ಮಾಹಿತಿ ನೀಡಿ ಮುಂದಿನ ಕ್ರಮದ ಕುರಿತು ತಿಳಿಸಬೇಕು. ಜನರಿಗೆ ಸರ್ಕಾರಿ ಸೇವೆ ಪಡೆಯುವಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಅನಗತ್ಯ ವಿಳಂಬವಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು.
ಆಂದೋಲನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತ್ಯೇಕವಾಗಿ ಹಾಜರಿದ್ದು, ಸಾರ್ವಜನಿಕರಿಂದ ಸಮಸ್ಯೆ, ಬೇಡಿಕೆ ಹಾಗೂ ವಿವಿಧ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಅರ್ಜಿ ಸ್ವೀಕರಿಸಿದರು. ಪುರಸಭೆ, ಪೊಲೀಸ್, ಜೆಸ್ಕಾಂ, ಐಸಿಡಿಎಸ್, ತಾಪಂ, ಕೃಷಿ ಮತ್ತು ತೋಟಗಾರಿಕೆ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಆರೋಗ್ಯ, ಅಬಕಾರಿ, ಕಂದಾಯ, ಸರ್ವೇ ಹಾಗೂ ಕಾರ್ಮಿಕ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ 25ಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಲಾಯಿತು.ಸ್ಥಳದಲ್ಲೇ ಅರ್ಜಿದಾರರ ಅಹವಾಲು ಆಲಿಸಿದ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ್, ಎಡಿ ಕೆ.ಎಸ್.ಮಲ್ಲನಗೌಡ, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಎಇಇ ಎ.ಶ್ರೀನಿವಾಸ್, ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್, ಪಶು ವೈದ್ಯಾಧಿಕಾರಿ ಡಾ. ಕೆ.ಯು.ಬಸವರಾಜ, ಭೂದಾಖಲೆಗಳ ನಿರ್ದೇಶಕ ನರಸಪ್ಪ, ಸಿಡಿಪಿಒ ಮೋಹನ್ ಕಾಳಾಪುರ, ಡಿಟಿ ಎಸ್.ಡಿ.ರಮೇಶ್, ಶಿಕ್ಷಕ ಮುದಕಪ್ಪ ನೆಲಜೇರಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.