ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸಬೇಡಿ

| Published : Sep 23 2025, 01:03 AM IST

ಸಾರಾಂಶ

ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಚ್ಚು ಉಪಯೋಗವಾಗಿದೆ. ಇದನ್ನು ಯಾರೂ ವಿರೋಧಿಬಾರದು ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಯಳಂದೂರು

ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಚ್ಚು ಉಪಯೋಗವಾಗಿದೆ. ಇದನ್ನು ಯಾರೂ ವಿರೋಧಿಬಾರದು ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಜಾತಿಗಣತಿಗೆ ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿರುವ ಸೋಮವಾರ ತಮ್ಮ ಮನೆಯಿಂದ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಈ ಹಿಂದೆಯೇ ಕಾಂತರಾಜು ವರದಿಯನ್ನು ಸಲ್ಲಿಸಲಾಗಿತ್ತು. ಆದರೆ ಇದು ಅಂಗೀಕಾರವಾಗಿಲ್ಲ. ಈಗ ಈ ವಿಷಯ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ವಾಸಿಸುವ ಪ್ರತಿಯೊಂದ ಜನಾಂಗದವರು, ಸಾಮಾಜಿಕವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ಸೇರಿದಂತೆ ಇತರೆ ವಿಷಯಗಳಲ್ಲಿ ಈ ಸಮಾಜಗಳು ಯಾವ ಹಂತದಲ್ಲಿದೆ ಎಂಬುದನ್ನು ಅರಿಯಲು ಇದೊಂದು ಉತ್ತಮ ಮಾದ್ಯಮವಾಗಿ ಕೆಲಸ ಮಾಡಲಿದೆ.

ರಾಜ್ಯದಲ್ಲಿರುವ ಅನೇಕ ಸಮಾಜಗಳಿಗೆ ತಮ್ಮ ಜಾತಿ ಯಾವುದು ಎಂಬುದರ ಬಗ್ಗೆ ಅರಿವೇ ಇಲ್ಲ. ನಾನು ಈ ಹಿಂದೆ ಹಿಂದುಳಿದ ವರ್ಗಗಳ ಸಚಿವನಾಗಿದ್ದಾಗ ಈ ಬಗ್ಗೆ ಅನೇಕ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಅನೇಕ ಜಾತಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿವೆ. ಇವರ ಅಭಿವೃದ್ಧಿ ದೃಷ್ಟಿಯಿಂದ ಇವರಿಗೆ ಸಂವಿಧಾನದಡಿಯಲ್ಲಿ ಸಿಗುವ ಎಲ್ಲಾ ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಈ ಗಣತಿ ಮಹತ್ತರ ಪಾತ್ರವನ್ನು ವಹಿಸಿದೆ. ಹಾಗಾಗಿ ಎಲ್ಲರೂ ಇದಕ್ಕೆ ಸಹಕಾರವನ್ನು ನೀಡಬೇಕು. ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಎಲ್ಲರೂ ಸರಿಯಾದ ಮಾಹಿತಿಯನ್ನು ನೀಡಬೇಕು. ರಾಜ್ಯ ಸರ್ಕಾರ ನಡೆಸುತ್ತಿರುವ ಈ ಮಹತ್ವದ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು. ಎಲ್ಲಾ ಜಾತಿ, ಧರ್ಮ, ವರ್ಗದ ಜನರಿಗೂ ಇದರಿಂದ ಅನುಕೂಲವಾಗಲಿದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ದಿಲೀಪ್‌ಕುಮಾರ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಒಟ್ಟು ೧೬೩ ಗಣತಿದಾರರು ಇದಕ್ಕೆ ನೇಮಕವಾಗಿದ್ದಾರೆ. ೨೬ ಸಾವಿರ ಕುಟುಂಬಗಳು ತಾಲೂಕಿನಲ್ಲಿವೆ. ೧೬ ಸೂಪರ್‌ವೈಸರ್‌ಗಳು ೬ ಜನ ಮಾಸ್ಟರ್ ಟ್ರೈನರ್ಸ್‌ಗಳನ್ನು ನೇಮಕ ಮಾಡಲಾಗಿದೆ. ಅ.೦೭ ರವರೆಗೆ ಗಣತಿ ನಡೆಯಲಿದೆ. ಇದಕ್ಕಾಗಿ ಪೃಥ ಸಮೀಕ್ಷಾ-ಪಥ ಎಂಬ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.ಇದಕ್ಕೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಆದರೆ ಸೋಮವಾರ ಸಂಜೆಯಾದರೂ ಈ ಆ್ಯಪ್‌ನಲ್ಲಿ ತಾಂತ್ರಿಕ ದೋಷ ಇರುವ ಕಾರಣ ಸಮೀಕ್ಷೆಗೆ ತೊಡಕಾಗಿದ್ದು ಇದು ಸರಿಪಟ್ಟನಂತರ ಸಮೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಸಿಆರ್‌ಪಿ ರೇಚಣ್ಣ, ವಿಸ್ತರಣಾಧಿಕಾರಿ ವಿನೋದ್, ಸಿ. ಸೋಮಣ್ಣ, ಲಕ್ಷ್ಮಿ, ಬಿಳಿಗಿರಿ, ಸತೀಶ್, ಶಿವರಾಮು, ಸೌಮ್ಯ ಸೇರಿದಂತೆ ಅನೇಕರು ಇದ್ದರು.