ಕನ್ನಡಪ್ರಭ ವಾರ್ತೆ ಹೊಸದುರ್ಗ

ಹಣಕ್ಕಿಂತ ಆರೋಗ್ಯವೇ ಶ್ರೇಷ್ಠವಾಗಿದ್ದು ಆಲಸ್ಯತನದಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಿಟಿಗ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಆರೋಗ್ಯವಿದ್ದರೆ ಹಣ, ಅಧಿಕಾರವನ್ನು ಹಿಡಿಯಬಹುದು ಆರೋಗ್ಯವಿಲ್ಲದ ವ್ಯಕ್ತಿ ಉತ್ಸಾಹ ಕಳೆದುಕೊಂಡು ಖಿನ್ನತೆಗೆ ಒಳಗಾಗುತ್ತಾರೆ ಇಂದಿನ ಯುವ ಪೀಳಿಗೆ ಮೊಬೈಲ್ ಗಿಳಿಯಿಂದ ಸಾಮಾಜಿಕ ಜಾಲತಾಣಗಳಿಂದ ಹೊರಬಂದು ವ್ಯಾಯಮ, ವಾಯು ವಿಹಾರ, ಕರಾಟೆ ಕುಸ್ತಿ ಕ್ರೀಡೆಗಳಲ್ಲಿ ತೊಡಗಿಸಿ ಕೊಂಡಾಗ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಮಾನಸಿಕ ಬಲವನ್ನು ಸಂಪಾದಿಸಲು ಸಾಧ್ಯವಾಗುತ್ತದೆ ಎಂದರು.ವೈದ್ಯರೆಂದರೆ ದೇಹದ ಬಾಧೆಗಳನ್ನು ಹಾಗೂ ಕಾಯಿಲೆಗಳನ್ನು ದೂರ ಮಾಡುವ ಶ್ರೇಷ್ಠ ಸೇವಕರು ವೈದ್ಯರನ್ನು ಗೌರವದಿಂದ ಪ್ರೀತಿಯಿಂದ ಕಾಣುವ ಮೂಲಕ ಅವರ ವೃತ್ತಿಗೆ ಗೌರವಿಸಬೇಕು ಹಾಗೂ ವೈದ್ಯರು ಕೂಡ ತಾಯಿತನದ ಅಂತಃಕರಣದಿಂದ ರೋಗಿಗಳನ್ನು ನೋಡಿದಾಗ ಬೇಗ ಗುಣಮುಖರಾಗಲು ಸಾಧ್ಯ. ಸಿಡುಕು ಕೋಪಗಳ ಮೂಲಕ ರೋಗಿಗಳಿಗೆ ಭಯಪಡಿಸದೆ ಪ್ರೀತಿ ವಿಶ್ವಾಸದ ಮೂಲಕ ಭರವಸೆಯ ಮಾತುಗಳನ್ನಾಡಿ ಧೈರ್ಯ ತುಂಬಿದರೆ ರೋಗಗಳು ದೂರವಾಗುತ್ತವೆ. ವೈದ್ಯರೆಂದರೆ ದೇವರೆಂದು ನಂಬಿರುವ ಸಮಾಜಕ್ಕೆ ದೇವರಾಗಿ ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.ಸಮಾರಂಭವನ್ನು ಉದ್ಘಾಟಿಸಿದ ಡಾ.ಸತೀಶ್ ಮಾತನಾಡಿ ಮಠಗಳು ಈ ರೀತಿಯಾದ ಸತ್ಸಂಗ ಸುಜ್ಞಾನ ಸಂಗಮ ಹಾಗೂ ಧಾರ್ಮಿಕ ಸಭೆ ಸಮಾರಂಭವನ್ನು ಮಾಡುವ ಮೂಲಕ ಸಮಾಜದ ಕೊಳೆಯನ್ನು ತೊಳೆದು ಸರ್ವರು ನಮ್ಮವರೆಂದು ಪ್ರೀತಿಸುವ ವಾತಾವರಣ ನಿರ್ಮಾಣವಾಗುತ್ತಿದೆ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.

ಮಕ್ಕಳ ತಜ್ಞ ಡಾ.ರವಿ ಮಾತನಾಡಿ ಗುರುಗಳು ಸಮಾಜಕ್ಕೆ ಪ್ರತಿಯೊಬ್ಬ ವ್ಯಕ್ತಿಗೆ ಮಾರ್ಗದರ್ಶನ ಮಾಡುವವರು ಹಾಗೆಯೇ ವೈದ್ಯರ ಕರ್ತವ್ಯ ಸಮಾಜಕ್ಕೆ ಅನಾರೋಗ್ಯವಾದಾಗ ದಾರಿ ತಪ್ಪಿದಾಗ ಮಾರ್ಗದರ್ಶನ ಮಾಡುವುದು ಗುರುಗಳ ಕರ್ತವ್ಯ. ವೈದ್ಯ ವೃತ್ತಿಯೂ ಕೂಡ ವಾಣಿಜ್ಯ ರೂಪ ಪಡೆದಿರುವುದು ವಿಷಾದನೀಯ ಎಂದರು.

ಡಾ ಕೃಪೇಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾ ನಿಧಿ, ಡಾ ಅಜಯ್‌, ಡಾ ಪುನಿತ್‌, ಡಾ ಪೂಜಾ, ಡಾ ಹರ್ಷಿತಾ, ಡಾ ಉಷಾ ಆನಂದಮೂರ್ತಿ ಮತ್ತಿತರರು ಹಾಜರಿದ್ದರು. ಇದೆ ವೇಳೆ ಪ್ರತಿಭಾವಂತ ವಿದ್ಯಾರ್ಥಿ ವಿಭೂಷಣ್ ರವರನ್ನು ಸನ್ಮಾನಿಸಲಾಯಿತು.