ಗದಗ: ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಸುಂದರ ಶಾಂತಿಯ ತೋಟವಾಗಿದೆ. ಭಾರತ ಎಂಬ ಪವಿತ್ರ ಶಬ್ದದಲ್ಲೇ ವಿಶೇಷವಾದ ಆಧ್ಯಾತ್ಮಿಕತೆಯ ಶಕ್ತಿಯಿದೆ ಎಂದು ಮುಂಡರಗಿ ಅನ್ನದಾನೀಶ್ವರ ಮಠದ ಡಾ. ಅನ್ನದಾನೀಶ್ವರ ಸ್ವಾಮಿಗಳು ಹೇಳಿದರು.
ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಸನಾತನ ಸಂಸ್ಕೃತಿಯು ಅತ್ಯಂತ ಶ್ರೇಷ್ಠ ಹಾಗೂ ವಿಶಾಲವಾದುದಾಗಿದ್ದು, ಇಂತಹ ಉನ್ನತ ಹಿಂದುತ್ವದ ತತ್ವಗಳನ್ನು ಮುಂದಿನ ಪೀಳಿಗೆಗೆ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಸವಣ್ಣನವರು ಶೈವ ಧರ್ಮದಿಂದಲೇ ಹಿಂದುತ್ವವನ್ನು ಕಂಡಿದ್ದರು. ನಾವೆಲ್ಲರೂ ಧರ್ಮ ಮತ್ತು ಶರಣರ ಉಪದೇಶಗಳನ್ನು ಕಲಿತು, ಅದರಲ್ಲಿನ ಸತ್ಸಂಸ್ಕೃತಿಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಇದೇ ವೇಳೆ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳ ಕಾರ್ಯವನ್ನು ಶ್ಲಾಘಿಸಿದ ಮುಂಡರಗಿ ಶ್ರೀಗಳು, ಕಾಡಸಿದ್ದೇಶ್ವರ ಶ್ರೀಗಳ ಮಠದಲ್ಲಿ ಎಲ್ಲ ಜಾತಿಯ ಗೋವುಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಲಾಗುತ್ತಿದೆ. ಅವರು ಪ್ರಸ್ತುತ ದಿನಗಳಲ್ಲಿ ಭೂಮಿಯ ಫಲವತ್ತತೆಯನ್ನು ಕಾಪಾಡುವ ಸಾವಯವ ಕೃಷಿಗೆ ಅತಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಭೂಮಿತಾಯಿಯ ಗುಣಮಟ್ಟವನ್ನು ಉತ್ತಮವಾಗಿ ಇಡಲು ಸಾಧ್ಯವಿದ್ದು, ರೈತರ ಸರ್ವಾಂಗೀಣ ಬೆಳವಣಿಗೆಯಲ್ಲಿ ಕಾಡಸಿದ್ದೇಶ್ವರ ಶ್ರೀಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಚಂದ್ರು ಬಾಳಿಹಳ್ಳಿಮಠ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿಯ ಗೌರವಾಧ್ಯಕ್ಷ ವಸಂತಗೌಡ ಪೊಲೀಸಪಾಟೀಲ ಸ್ವಾಗತಿಸಿದರು. ಐತಿಹಾಸಿಕ ಸಮಾವೇಶದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 300ಕ್ಕೂ ಹೆಚ್ಚಿನ ಶ್ರೀಗಳು ಉಪಸ್ಥಿತರಿದ್ದು ಆಶೀರ್ವದಿಸಿದರು. ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ವಿ. ಸಂಕನೂರ, ಪ್ರಮುಖ ಮುಖಂಡರಾದ ರಾಜು ಖಾನಪ್ಪನವರ, ಕಿರಣ ಭೂಮಾ ಉಪಸ್ಥಿತರಿದ್ದರು. ವಿ.ಕೆ. ಗುರುಮಠ ಮತ್ತು ಶಿವಲಿಂಗ ಶಾಸ್ತ್ರಿ ಸಿದ್ದಾಪೂರ ನಿರೂಪಿಸಿದರು.ಡಾ. ಉಪಾಧ್ಯ ಅವರು ರಚಿಸಿರುವ ಬಸವ ಶೈವದಲ್ಲಿ ಹಿಂದುತ್ವ (ಭಾಗ-2) ಹಾಗೂ ಬೆಂಗಳೂರಿನ ಡಾ. ಸಿ. ಶಿವಕುಮಾರ ಅವರು ರಚಿಸಿರುವ ವಚನಾನುಸಂಧಾನ ಎಂಬ ಎರಡು ಮಹತ್ವದ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.ಕನ್ನೇರಿ ಮಠಕ್ಕೆ ಭೇಟಿ ನೀಡಿ: ಸಿ.ಸಿ. ಪಾಟೀಲ ಮನವಿ
ಗದಗ: ಸನಾತನ ಸಂಸ್ಕೃತಿಯಲ್ಲಿ ಮಕ್ಕಳನ್ನು ಬೆಳೆಸಲು ಇಚ್ಛಿಸುವವರು ಒಮ್ಮೆ ಕಾಡಸಿದ್ದೇಶ್ವರ ಶ್ರೀಗಳ ಮಠಕ್ಕೆ ಭೇಟಿ ನೀಡಬೇಕು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಮನವಿ ಮಾಡಿದರು.ನಗರದ ವಿಡಿಎಸ್‌ಟಿ ಮೈದಾನದಲ್ಲಿ ಭಾನುವಾರ ಸಂಜೆ ಹಿಂದೂ ಸರ್ವ ಸಮಾಜಗಳ ಒಕ್ಕೂಟದ ವತಿಯಿಂದ ಬಸವಾದಿ ಶಿವಶರಣರ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಹಿಂದೂ ಸಮಾವೇಶ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಎಲ್ಲ ತಳಿಯ ಗೋವುಗಳನ್ನು ಅವರು ಸಂರಕ್ಷಣೆ ಮಾಡುತ್ತಿದ್ದಾರೆ. ರೈತರಿಗೆ ವಿಶೇಷ ತರಬೇತಿ ನೀಡುತ್ತಿರುವುದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸುತ್ತಿದ್ದಾರೆ. ಇದರ ಲಾಭವನ್ನು ಯುವ ಜನತೆ ಪಡೆದುಕೊಳ್ಳಬೇಕು ಎಂದರು.