ದುಶ್ಚಟಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ಳಬೇಡಿ

| Published : Jun 24 2025, 12:32 AM IST

ಸಾರಾಂಶ

ಹಡಪದ ಸಮಾಜ, ಬಸವಣ್ಣನವರ ಕಾಯಕ ನಂಬಿಕೆ, ಶ್ರಮಿಕ ಸಮಾಜ, ಮಕ್ಕಳ ಶಿಕ್ಷಣಕ್ಕೆ ಮುಂದಾಗಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶರಣ ಹಡಪದ ಸಮಾಜ ಬಸವಣ್ಣವರ ಆದರ್ಶಗಳನ್ನು ಅಳವಡಿಸಿಕೊಂಡು ಕಾಯಕವನ್ನೇ ನಂಬಿ ಬದುಕುತ್ತಿರುವ ಶ್ರಮಿಕ ಸಮಾಜ. ಕಾಯಕದ ಜತೆಗೆ ಆಧುನಿಕತೆಗೆ ಹೊಂದಿಕೊಂಡು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಲು ಸಮಾಜ ಬಾಂಧವರು ಮುಂದಾಗಬೇಕು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಭಾನುವಾರ ನಡೆದ ಹಡಪದ ಅಪ್ಪಣ್ಣ ಗುರುಪೀಠದ ಲಿಂ.ಬಸವಪ್ರಿಯ ಹಡಪದ ಅಪ್ಪಣ್ಣ ಸ್ವಾಮೀಜಿ 17ನೇ ಪುಣ್ಯಸ್ಮರಣೆ ಹಾಗೂ ಎಸ್‌ಎಸ್‌ಎಲ್‌ಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳುಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ವೈಮನಸ್ಸು ಮಾಡಿಕೊಂಡು ಕೋರ್ಟ್‌ ಕಚೇರಿ ಅಲೇದಾಡದೇ ಸಮಸ್ಯೆಗಳಿದ್ದರೆ ಇತ್ಯರ್ಥ ಮಾಡಿಕೊಂಡು ಸಮಾಜದ ಏಳೆಗೆಯಲ್ಲಿ ಮುಂದುವರೆಯಬೇಕು ಎಂದು ಹೇಳಿದರು.ತಂಗಡಗಿ ಗ್ರಾಮದಲ್ಲಿ ಹಡಪದ ಅಪ್ಪಣ್ಣನವರ ಕುರುಹುಗಳಿದ್ದು ಕೂಡಲೇ ಈ ಸ್ಥಳವನ್ನು ಅಭಿವೃದ್ಧಿ ಪಡೆಸಲು ವಿಶೇಷ ಅನುದಾನ ಕೊಡಬೇಕು ಎಂದು ಸಚಿವ ಶಿವರಾಜ ತಂಗಡಿಯವರಿಗೆ ತಿಳಿಸಿದ್ದೇನೆ. ಜತೆಗೆ ಮಠದ ಅಭಿವೃದ್ಧಿಗೆ ಶಾಸಕರ ವಿಶೇಷ ನಿಧಿಯಲ್ಲಿ ₹ 10 ಲಕ್ಷ ನೀಡುತ್ತೇನೆ. ಮುಂದೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವುದಾಗಿ ತಿಳಿಸಿದರು.ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಇಂದು ಎಲ್ಲ ಕಡೆ ಸಣ್ಣ ಸಮಾಜದವರನ್ನು ತುಳಿಯಲಾಗುತ್ತಿದೆ. ಹಾಗಂತ ಯಾರೂ ಕೈಕಟ್ಟಿ ಕುಳಿತುಕೊಳ್ಳದೇ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು. ಹಡಪದ ಜನಾಂಗದ ಆರ್ಥಿಕ ಬೆಳವಣಿಗೆಗೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ಲಿಂ.ಬಸವಪ್ರಿಯ ಅಪ್ಪಣ್ಣನವರ ಗದ್ದುಗೆಯನ್ನು ದೇವಸ್ಥಾನವನ್ನಾಗಿ ಅಭಿವೃದ್ಧಿಪಡಿಸಲು ವೈಯಕ್ತಿಕವಾಗಿ ಒಂದು ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸಿದ್ದರಾಮಯ್ಯನವರ ಅವಧಿಯಲ್ಲಿ ಹಡಪದ ಅಪ್ಪಣ್ಣ ಗುರುಪೀಠದ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು. ಸಮಾಜದ ಪೀಠಾಧಿಪತಿ ಅನ್ನದಾನಿಭಾರತಿ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ತಂಗಡಗಿಯಲ್ಲಿ ಹಡಪದ ಅಪ್ಪಣ್ಣನವರ ಮಠವಿಲ್ಲದೇ ಬರಿ ಗುಡಿಸಿಲಿನಲ್ಲಿ ಇದ್ದೇವು. ಅಂದಿನ ಕಾಲದಲ್ಲಿ ಮಠದ ಅಭಿವೃದ್ಧಿಗೆ ಹಣ ನೀಡುವ ಮೂಲಕ ಅಭಿವೃದ್ಧಿ ಕಾಣುವಂತೆ ಮಾಡಿದ್ದು ಶಾಸಕ ಸಿ.ಎಸ್.ನಾಡಗೌಡರು. ಅವರ ಸಹಕಾರಕ್ಕೆ ಈ ಸಮಾಜ ಸದಾ ಋಣಿಯಾಗಿರುತ್ತದೆ ಎಂದರು. ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ತಿ, ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿದರು. ಮಹಾಂತೇಶ ಮಠದ ಗುರುಮಹಾಂತ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಟ್ರಸ್ಟ್‌ ಗೌರವಾಧ್ಯಕ್ಷ ಎಂ.ಎಸ್.ನಾವಿ, ನೌಕರರ ಸಂಘದ ಪಕಾಶ ಹಡಪದ, ಜಿಲ್ಲಾಧ್ಯಕ್ಷ ವಿ.ಜಿ.ಕತ್ನಳ್ಳಿ, ನಿಂಗಪ್ಪ ನಾವಿ, ಮಹಾಂತೇಶ ಮೂಲಿಮನಿ, ನಾಗೇಶ ನಾಗೂರ, ಓಂಕಾರ ನಾವಿ, ಸೋಮನಗೌಡ ಪಾಟೀಲ ನಡಹಳ್ಳಿ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ ಸೇರಿ ಹಲವರು ಇದ್ದರು.