ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಕಾರ್ಯಕ್ರಮ ಭಾನುವಾರ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಕಾರ್ಯಕ್ರಮ ಭಾನುವಾರ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ನಂತರ ಮಾತನಾಡಿ, ಕೊಡಗು ಜಿಲ್ಲೆಯನ್ನು ಕೊಡಗನ್ನಾಗಿಯೇ ಉಳಿಸಿಕೊಳ್ಳಲು ಸ್ಥಳೀಯರು ಯಾರೂ ಹೊರ ಜಿಲ್ಲೆಯವರಿಗಗೆ ಕೃಷಿ ಜಮೀನನ್ನು ಮಾರುವುದು ಬೇಡ. ನಮ್ಮ ಹಿರಿಯರಿಂದ ಬಂದ ಭೂಮಿ ನಮ್ಮ ಜನಾಂಗದ ಹೆಗ್ಗುರುತಾಗಿದೆ. ಕೊಡಗು ಜಿಲ್ಲೆ ಸ್ವರ್ಗ. ನಾವು ಈ ಸ್ವರ್ಗದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದರು.ಕೊಡವ ಜನಾಂಗದ ಆಚಾರ, ವಿಚಾರ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ಆ ಕೆಲಸವನ್ನು ಸ್ಥಳೀಯ ಕೊಡವ ಸಮಾಜ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಎಸ್. ಸುರೇಶ್ ನಂಜಪ್ಪ ಮಾತನಾಡಿ, ನಮ್ಮ ಆಚಾರ ವಿಚಾರಗಳನ್ನು ಪರಿಚಯಿಸುತ್ತಿರುವ ಕೊಡವ ಸಮಾಜ ಎಲ್ಲ ಕಾರ್ಯಕ್ರಮಗಳಲ್ಲೂ ತಮ್ಮ ಕುಟುಂಬದೊಂದಿಗೆ ಸಮಾಜಬಾಂಧವರು ಪಾಲ್ಗೊಂಡಲ್ಲಿ ಮಾತ್ರ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಕಲಿಸಿಲು ಸಾಧ್ಯ. ಸಮಾಜದ ಏಳೀಗೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ, ಅವರ ಮುಂದಿನ ಜೀವನಕ್ಕೆ ಒಳ್ಳೆಯ ಮಾರ್ಗ ತೋರಿಸುವ ಕೆಲಸ ನಮ್ಮಿಂದಾಗಬೇಕು ಎಂದರು.ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಮಾತಂಡ ಸಿ. ಕಾರ್ಯಪ್ಪ ಮಾತನಾಡಿ, ಸಮಾಜಬಾಂಧವರು ಇಂದು ಕಾಫಿ ಉತ್ತಮ ಬೆಲೆ ಇದೆ ಎಂದು ಸರ್ಕಾರಿ ನೌಕರಿಯತ್ತ ಮುಖಮಾಡುತ್ತಿಲ್ಲ. ಮುಂದಿನ ಒಂದೆರಡು ವರ್ಷಗಳಲ್ಲಿ ಬ್ರೆಜಿಲ್‌ನಲ್ಲಿ ಉತ್ತಮ ಕಾಫಿ ನಿರೀಕ್ಷೆ ಇದ್ದು, ಭಾರತದ ಕಾಫಿ ಬೆಲೆ ಕಳೆದುಕೊಳ್ಳಲಿದೆ. ಆದುದ್ದರಿಂದ ನಾವು ಉನ್ನತ ಸರ್ಕಾರಿ ನೌಕರಿ ಪಡೆಯುವತ್ತ ಗಮನಹರಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಕೊಡಗಿನ ಜನರು ಕೇವಲ ಸೇನೆ ಮತ್ತು ಕ್ರೀಡೆಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಎಲ್ಲರಿಗೂ ಗೌರವ ಕೊಡುವುದು ಮತ್ತು ಸಾಧನೆಗೈಯುವುದು ನಮ್ಮ ರಕ್ತದಲ್ಲಿಯೇ ಬಂದಿದೆ ಎಂದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಕುಟ್ಟಪ್ಪ, ಕಾರ್ಯದರ್ಶಿ ಅನಿಲ್ ಇದ್ದರು.

ಗರ್ವಾಲೆ ಗ್ರಾಮದ ಬೋಟ್ಲಪ್ಪ ತಂಡದಿಂದ ಬೊಳಕಾಟ್, ಮುವತ್ತೊಕ್ಲು ನಾಗಂಡ ತಂಡದಿಂದ ಉಮ್ಮತ್ತಾಟ್ ನಡೆಯಿತು. ಸಮಾಜದ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಸೇರಿದಂತೆ ವಾರ್ಷಿಕ ಪರೀಕ್ಷೆಯಲ್ಲಿ ಶೇ. 70ಕ್ಕಿಂತಲೂ ಅಧಿಕ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.