ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಯ ಮಾರಾಟ ಸಂದರ್ಭದಲ್ಲಿ ಉದಾಸೀನತೆ ಬೇಡ. ಕೆಲವೊಂದು ಖಾಸಗಿ ತೂಕದ ಯಂತ್ರಗಳಲ್ಲಿ ಸಾಕಷ್ಟು ಸಮಸ್ಯೆ ಇರುವ ಬಗ್ಗೆ ಆಗಿಂದಾಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಸರ್ಕಾರಿ ತೂಕದ ಯಂತ್ರದಲ್ಲೇ ತೂಕ ಮಾಡಿಸಿದರೆ ಒಳ್ಳೆಯದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಒಂದು ಕ್ವಿಂಟಾಲ್ ರಾಗಿಗೆ ಮಾರುಕಟ್ಟೆ ಬೆಲೆಗಿಂತ ೧೫೦೦ರು. ಹೆಚ್ಚು ಹಣವನ್ನು ಸರ್ಕಾರ ನೀಡುತ್ತಿದೆ. ಆದ್ದರಿಂದ ರೈತರು ದಲ್ಲಾಳಿಗಳಿಗೆ ರಾಗಿಯನ್ನು ಮಾರಾಟ ಮಾಡದೆ ರಾಗಿ ಖರೀದಿ ಕೇಂದ್ರದಲ್ಲಿ ಗುಣಮಟ್ಟದ ರಾಗಿಯನ್ನು ಮಾರಾಟ ಮಾಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರಸಕ್ತ ಸಾಲಿನ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಪ್ರತಿ ವರ್ಷಕ್ಕಿಂತ ಈ ವರ್ಷ ಎರಡು ತಿಂಗಳ ಮುಂಚಿತವಾಗಿ ರಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಅಂತೆಯೇ ಮಾರಾಟಗಾರ ರೈತರ ನೋಂದಣಿಯನ್ನೂ ಸಹ ಮುಂಚಿತವಾಗಿಯೇ ಆರಂಭಿಸಲಾಗಿತ್ತು. ಆದಾಗ್ಯೂ ರಾಗಿ ಒಕ್ಕಣೆ ಮಾಡುವಾಗಲೇ ಮಧ್ಯವರ್ತಿಗಳಿಗೆ ರಾಗಿ ಮಾರಾಟ ಮಾಡುವ ಮೂಲಕ ಕೆಲ ರೈತರು ದಲ್ಲಾಳಿಗಳಿಗೆ ಸಹಕರಿಸುತ್ತಿರುವ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿದೆ. ಖರೀದಿ ಕೇಂದ್ರಕ್ಕೆ ರೈತರು ಮಾರಾಟ ಮಾಡುವ ರಾಗಿಯನ್ನೇ ಪಡಿತರ ಪದಾರ್ಥದ ರೂಪದಲ್ಲಿ ಮತ್ತೆ ಕಾರ್ಡ್‌ದಾರರಿಗೆ ಪೂರೈಸಲಾಗುವುದು. ಆದ್ದರಿಂದ ರೈತರು ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿಯನ್ನು ತರಬೇಕು ಎಂದರು.

ತೂಕದಲ್ಲಿ ನಿಖರತೆ ಇರಲಿ:

ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಯ ಮಾರಾಟ ಸಂದರ್ಭದಲ್ಲಿ ಉದಾಸೀನತೆ ಬೇಡ. ಕೆಲವೊಂದು ಖಾಸಗಿ ತೂಕದ ಯಂತ್ರಗಳಲ್ಲಿ ಸಾಕಷ್ಟು ಸಮಸ್ಯೆ ಇರುವ ಬಗ್ಗೆ ಆಗಿಂದಾಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಸರ್ಕಾರಿ ತೂಕದ ಯಂತ್ರದಲ್ಲೇ ತೂಕ ಮಾಡಿಸಿದರೆ ಒಳ್ಳೆಯದು. ತೂಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಇಲಾಖೆಯೇ ಹೊಣೆಯಾಗುವುದರಿಂದ ತೂಕದಲ್ಲಿ ನಿಖರತೆ ಇರಬೇಕು ಎಂದರು.

ರೈತರ ಸಹಕಾರ ಅತಿ ಮುಖ್ಯ:

ಮುಕ್ತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಉತ್ತಮ ಗುಣಮಟ್ಟದ ರಾಗಿಗೆ ೩೫೦೦ರು. ಸಿಗುವ ಮಾಹಿತಿ ಇದೆ. ಆದರೆ, ಸರ್ಕಾರಿ ಖರೀದಿ ಕೇಂದ್ರದ ಮೂಲಕ ಮಾರಾಟವಾಗುವ ಪ್ರತಿ ಕ್ವಿಂಟಾಲ್ ರಾಗಿಗೆ ೪೯೦೦ರು. ನಿಗದಿ ಪಡಿಸಿರುವುದರಿಂದ ಮುಕ್ತ ಮಾರುಕಟ್ಟೆಯ ಬೆಲೆಗಿಂತ ರೈತರನ್ನು ಉತ್ತೇಜಿಸುವ ಉದ್ದೇಶದಿಂದ ಹೆಚ್ಚು ಬೆಲೆ ನೀಡಲಾಗುತ್ತಿದೆ. ಹಾಗಾಗಿ ರೈತರು ಮಧ್ಯವರ್ತಿಗಳಿಂದ ಮೋಸ ಹೋಗಬಾರದು. ಸರ್ಕಾರದ ಉದ್ದೇಶ ಸಾಕಾರಗೊಳ್ಳಲು ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಹಸೀಲ್ದಾರ್ ಜಿ.ಆದರ್ಶ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ ನಿರ್ದೇಶಕಿ ರೇವತಿ ಬಾಯಿ, ಕಾರ್ಯದರ್ಶಿ ಸರ್ವಜ್ಞ, ಆಹಾರ ಇಲಾಖೆಯ ಶಿರಸ್ತೆದಾರ್ ಶ್ರೀನಿವಾಸ್, ಆಹಾರ ನಿರೀಕ್ಷಕ ಅನಿಲ್‌ಕುಮಾರ್ ಇತರರಿದ್ದರು.