ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ: ಅರುಣಕುಮಾರ

| Published : Jul 20 2024, 12:48 AM IST

ಸಾರಾಂಶ

ದೇಶದ ದೊಡ್ಡ ದೊಡ್ಡ ಮಹಾತ್ಮರು, ಮಹನೀಯರು, ಸಾಧಕರೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದವರಾಗಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ, ಹಿರಿಯ ವಕೀಲ ಎಲ್.ಎಚ್.ಅರುಣಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಮಕ್ಕಳ ಸುರಕ್ಷತಾ ಜಾಲಬಂಧ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದೇಶದ ದೊಡ್ಡ ದೊಡ್ಡ ಮಹಾತ್ಮರು, ಮಹನೀಯರು, ಸಾಧಕರೆಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದವರಾಗಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ, ಹಿರಿಯ ವಕೀಲ ಎಲ್.ಎಚ್.ಅರುಣಕುಮಾರ ಎಂದು ಹೇಳಿದರು.

ನಗರದ ಗಾಂಧಿ ನಗರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಬ್ರೆಡ್ಸ್‌ ಸಂಸ್ಥೆ ಬೆಂಗಳೂರು, ಡಾನ್ ಬಾಸ್ಕೋ ದಾವಣಗೆರೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ಸುರಕ್ಷತಾ ಜಾಲಬಂಧ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಸುರಕ್ಷತೆ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಒಗ್ಗೂಡಬೇಕಿದೆ ಎಂದರು.

ಡಾನ್ ಬಾಸ್ಕೋ ಸಂಸ್ಥೆಯು ಶಿಕ್ಷಣ ಪ್ರಗತಿಯಂಥ ವಿಷಯಗಳನ್ನು ಗಂಭೀರ ಪರಿಗಣಿಸಿ, ದಾವಣಗೆರೆಯನ್ನು ಮಕ್ಕಳಸ್ನೇಹಿ ಮಹಾನಗರವಾಗಿಸಲು ಚೈಲ್ಡ್ ಸೇಫ್ಟ್‌ ನೆಟ್‌ (ಮಕ್ಕಳ ಸುರಕ್ಷತಾ ಜಾಲಬಂಧ) ಯೋಜನೆ ರೂಪಿಸಿದೆ. ಅಲ್ಲದೆ, ಅನುಷ್ಠಾನ ಸಮಂಜಸ ಕಾರ್ಯವಾಗಿದೆ ಎಂದು ಅರುಣಕುಮಾರ ಶ್ಲಾಘಿಸಿದರು.

ಸಂಸ್ಥೆಯ ಫಾದರ್ ರೆಜಿ ಜೇಕಬ್‌ ಮಾತನಾಡಿ, ಮಕ್ಕಳ ರಕ್ಷಣೆ ಮತ್ತು ಸುರಕ್ಷೆಗಾಗಿ ಜಿಲ್ಲಾದ್ಯಂತ ಎಲ್ಲರನ್ನೂ ಒಳಗೊಂಡ ಸುರಕ್ಷತಾ ಪರದೆಯನ್ನು ಬಿಗಿಗೊಳಿಸಬೇಕಾಗಿದೆ. ಡೆಂಘೀಯಿಂದ

ರಕ್ಷಣೆ ಪಡೆಯಲು ಹೇಗೆ ಎಲ್ಲರೂ ಸೊಳ್ಳೆ ಪರದೆ ಬಳಸುತ್ತೇವೆಯೋ ಅದೇ ರೀತಿ ಮಕ್ಕಳ ಸುರಕ್ಷತೆಗೂ ಒಂದು ಸುರಕ್ಷತಾ ಪರದೆಯನ್ನು ಗಟ್ಟಿಗೊಳಿಸೋಣ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಡುವ ಕೆಲಸ ಆಗಬೇಕಿದೆ ಎಂದರು.

ಬಾಷಾ ನಗರ ಆಸ್ಪತ್ರೆಯ ಡಾ.ರೇಖಾ, ಸುಧಾ, ಜಯಮ್ಮ, ಏಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್.ಬಾಬಣ್ಣ, ಮುಖ್ಯ ಶಿಕ್ಷಕರಾದ ಆರ್.ಯು.ಸೋಮಶೇಖರ, ಪಾರ್ವತಮ್ಮ, ಸಿಎಸ್‌ಎನ್ ಯೋಜನೆಯ ಸಂಯೋಜಕ ಬಿ.ಮಂಜಪ್ಪ, ಎಂ.ಹೊನ್ನಪ್ಪ, ಎಚ್.ನಾಗರಾಜ ಇತರರು ಇದ್ದರು.

- - - -19ಕೆಡಿವಿಜಿ3, 4:

ದಾವಣಗೆರೆ ಗಾಂಧಿ ನಗರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ಸುರಕ್ಷತಾ ಜಾಲಬಂಧ ಯೋಜನೆ ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್‌.ಅರುಣಕುಮಾರ ಉದ್ಘಾಟಿಸಿದರು. ಫಾದರ್ ರೆಜಿ ಜೇಕಬ್‌ ಇತರರು ಇದ್ದರು.