ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಬುಧವಾರ ಶಾಸಕ ಟಿ.ರಘುಮೂರ್ತಿ ಕೇಕ್ ಕತ್ತರಿಸಿ ತಮ್ಮ ಜನ್ಮ ದಿನ ಆಚರಿಸಿಕೊಂಡರು. ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಅಹೋಬಲ ಟಿವಿಎಸ್ ನ ಅರುಣ್ ಇದ್ದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇದುವರೆಗೆ ಕಾದೂ, ಕಾದೂ ಸಾಕಾಗಿದೆ. ಇನ್ಮೇಲೆ ಆ ಕೆಲಸ ಮಾಡೋಲ್ಲ. ಬೇಗ ಮಿನಿಸ್ಟರ್ ಆಗಿ ಬನ್ನಿ.ಶಾಸಕ ಟಿ.ರಘುಮೂರ್ತಿ ಅವರಿಗೆ ಕೋಟೆ ನಾಡಿನ ಜನತೆ ಮನದಾಳದಿಂದ ಮಾಡಿಕೊಂಡ ಅರಿಕೆಯಿದು. 64ನೇ ಜನ್ಮದಿನದ ಹಿನ್ನಲೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರ ದನಿ ಇದೇ ಆಗಿತ್ತು.
ಹಿರಿ ತಲೆಗಳು ಶೀಘ್ರ ಮಂತ್ರಿಗಿರಿ ಪ್ರಾಪ್ತಿರಸ್ತು ಎಂದು ಆಶೀರ್ವಾದ ಮಾಡಿದರೆ, ಕಿರಿಯರಂತೂ ಭಾವಿ ಮಿನಿಸ್ಟರ್ ರಘು ಅಣ್ಣ ಅಂತಲೇ ಜಯಘೋಷ ಹಾಕಿದರು.ನಂತರ ಕೇಕ್ ಕಟ್ ಮಾಡಿ ಜನ್ಮದಿನ ಆಚರಿಸಿಕೊಂಡ ಶಾಸಕ ಟಿ.ರಘುಮೂರ್ತಿ, ಜನರ ಅಭಿಮಾನಕ್ಕೆ ಭಾವಕರಾದರು. ಈ ವೇಳೆ ಮಾತನಾಡಿದ ಅವರು, ಜನರ ಆರ್ಶೀವಾದದಿಂದ ಮೂರು ಬಾರಿ ಶಾಸಕನಾಗಿ ಆರಿಸಿ ಬಂದಿರುವ ನನಗೆ ಋಣತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಜನರಿಂದ ಆಯ್ಕೆಯಾಗಿ ಹೋಗಿರುವ ನಾವುಗಳು ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಜೊತೆಗೆ ಅಧಿಕಾರದಲ್ಲಿ ಇರುವಾಗ ಜಿಲ್ಲೆಯ ಸಮಸ್ಯೆಗಳನ್ನು ಅರಿತು ಕೆಲಸ ಮಾಡಬೇಕಿದೆ. ಚಳ್ಳಕೆರೆ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಗೆ ನೀರು ಹರಿಯುವ ಕಾಲ ಸನ್ನಿಹಿತವಾಗಿದೆ. ಈಗಾಗಲೆ 11 ಸಾವಿರ ಕೋಟಿ ರು. ಖರ್ಚಾಗಿದೆ. 23 ಸಾವಿರ ಕೋಟಿ ರು. ಯೋಜನೆ ಇದಾಗಿದ್ದು, ಗೋನೂರುವರೆಗೂ ನೀರು ತರುತ್ತೇವೆ. ಚಳ್ಳಕೆರೆ, ಪಾವಗಡ, ಮೊಳಕಾಲ್ಮುರುವಿಗೂ ನೀರು ತೆಗೆದುಕೊಂಡು ಹೋಗಬೇಕೆಂಬುದು ನಮ್ಮ ಆಸೆ. ಈ ಸಂಬಂಧ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿರವರ ಜೊತೆ ಚರ್ಚಿಸಿದ್ದೇವೆ. ಜಿಲ್ಲೆ, ಜಾತಿವಾರು ಹಾಗೂ ನನ್ನ ಅಭಿವೃದ್ಧಿ ಕೆಲಸವನ್ನು ಪರಿಗಣಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಮಂತ್ರಿ ಮಂಡಲದಲ್ಲಿ ನನಗೆ ಸಚಿವ ಸ್ಥಾನ ಸಿಗಬಹುದೆಂಬ ನಂಬಿಕೆಯಿದೆ. ಜಿಲ್ಲೆಯ ಜನರ ಹಾಗೂ ರೈತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ರೈತರಿಗೆ ಸರ್ಕಾರದಿಂದ ಏನೇನು ನೆರವು ಕೊಡಿಸಬಹುದೋ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆಂದರು.
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಮಾತನಾಡಿ, ಚಳ್ಳಕೆರೆಯ ಭಗೀರಥ ಶಾಸಕ ಟಿ.ರಘುಮೂರ್ತಿಗೆ ಈ ಬಾರಿ ಸಚಿವ ಸ್ಥಾನ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದೇವೆ. ಚಳ್ಳಕೆರೆಯಲ್ಲಿ ವಿಶಾಲವಾದ ರಸ್ತೆಗಳಾಗಿವೆ. ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಣ್ಣ ನೀರಾವರಿ ಯೋಜನೆ ಸಚಿವರಾದರೆ ಜಿಲ್ಲೆಯ ರೈತರ ಬದುಕು ಹಸನಾಗುತ್ತದೆ ಎಂದರು.ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಅಹೋಬಲ ಟಿವಿಎಸ್‌ನ ಅರುಣ್ ಜಿಲ್ಲಾ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಶಬ್ಬೀರ ಭಾಷಾ, ಕಾಟಿಹಳ್ಳಿ ಕರಿಯಣ್ಣ ಹಾಜರಿದ್ದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಎಲ್ಇಡಿ ಮೂಲಕ ಗಣ್ಯರ ಮತ್ತು ವಿವಿಧ ಮಠಾಧೀಶರು ಶಾಸಕರ ಬಗ್ಗೆ ಆಡಿರುವ ಸಂದೇಶದ ದ್ವನಿ ಮುದ್ರಿಕೆಯನ್ನು ಅಳವಡಿಸಲಾಗಿತ್ತು. ಇಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮ ದಿನಾಚರಣೆ ಆಚರಿಸಿಕೊಂಡ ರಘುಮೂರ್ತಿಯವರು ಅಭಿಮಾನಿಗಳ ಪ್ರೀತಿಗೆ ಶರಣೆಂದರು. ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ ಶಿವಕುಮಾರ್ ನೇತೃತ್ವದಲ್ಲಿ ರಘುಮೂರ್ತಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅವರ ವಿವಿಧ ಅಭಿವೃದ್ಧಿ ಕಾರ್ಯಗಳ ಭಿತ್ತಿಚಿತ್ರಗಳು ಅನಾವರಣಗೊಂಡಿದ್ದವು. ಪಟಾಕಿ ಸಿಡಿಸಿ ಸಂಭ್ರಮಿಸಿ ಶಾಸಕರನ್ನು ವೇದಿಕೆಗೆ ಕರೆತರಲಾಯಿತು. ಕಾಂಗ್ರೆಸ್ ಕಚೇರಿಯಲ್ಲೂ ಶಾಸಕರ ಜನ್ಮ ದಿನಾಚರಣೆ ಆಚರಿಸಲಾಯಿತು.