ಸಾರಾಂಶ
ಹಾವೇರಿ: ನಗರದ ನಾಗೇಂದ್ರಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವ ಬಳಗದ ವತಿಯಿಂದ ಸೋಮವಾರ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ವೈಚಾರಿಕವಾಗಿ ಬಸವ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಹಾವಿನ ಆಹಾರ ಹಾಲು ಅಲ್ಲ, ಅದು ಇಲಿ, ಕಪ್ಪೆ ಹುಳಹುಪ್ಪಡಿಗಳನ್ನು ಬೇಟೆಯಾಡಿ ಬದುಕುವ ಸರಿಸೃಪವಾಗಿದ್ದು, ಹಾವು ಹಾಲು ಕುಡಿಯುವುದಿಲ್ಲ. ಹಾಗಾಗಿ ಕಲ್ಲಿನ ನಾಗರ, ಮಣ್ಣಿನ ನಾಗರ ಮೂರ್ತಿಗೆ ಹಾಲು ಹಾಕಿ ವ್ಯರ್ಥ ಮಾಡಬೇಡಿ. ಅದೇ ಹಾಲನ್ನು ಮಕ್ಕಳಿಗೆ ನೀಡಿ ಪಂಚಮಿ ಆಚರಿಸಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಮಾಳಗಿ ಮಾತನಾಡಿ, ಪಂಚಮಿ ಹಬ್ಬದ ನಿಮಿತ್ತ ಲಕ್ಷಾಂತರ ಲೀಟರ್ ಹಾಲನ್ನು ಕಲ್ಲಿನ ಮೇಲೆ ಮಣ್ಣಿನ ಮೇಲೆ ಸುರಿದು ಹಾಳು ಮಾಡುವುದು ಎಷ್ಟರಮಟ್ಟಿಗೆ ಸರಿ? ಇದರಿಂದ ಅಪಾರ ಪ್ರಮಾಣ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿವರ್ಷ ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹಾಲನ್ನು ವ್ಯರ್ಥ ಮಾಡುವ ಬದಲಿಗೆ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಮತ್ತು ರೋಗಿಗಳಿಗೆ ಕೊಟ್ಟರೆ ಅವರ ಆರೋಗ್ಯ ಸುಧಾರಿಸುತ್ತದೆ. ಈ ಕುರಿತು ಜನರು ಚಿಂತಿಸಬೇಕು ಎಂದರು.ಶರಣ ಶಿವಯೋಗಿ ಬೆನ್ನೂರ ಮಾತನಾಡಿ, ಒಂದು ಕಡೆ ಕಲ್ಲು ಹಾವಿಗೆ ಪೂಜೆ ಸಲ್ಲಿಸಿದರೆ ಮತ್ತೊಂದೆಡೆ ಭಾರತದ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ತ್ರಿಪುರ ಈಶಾನ್ಯ ರಾಜ್ಯಗಳಲ್ಲಿ ಹಾವುಗಳನ್ನು ಹಿಡಿದು ಕೊಂದು ಅದರ ಚರ್ಮದಲ್ಲಿ ಅಲಂಕಾರಕ್ಕಾಗಿ, ಆಹಾರಕ್ಕಾಗಿ ಬಳಸುತ್ತಾರೆ. ಇದು ಭಾರತದ ವೈರುಧ್ಯ ಆಚರಣೆ ಎಂದರು. ಬಸವ ಬಳಗದ ಸದಸ್ಯರಾದ ಶಿವಬಸಪ್ಪ ಮುದ್ದಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಸವ ಬಳಗದ ಕಿರಣ ಕೊಳ್ಳಿ, ಯು.ಪಿ. ಪಂಪಣ್ಣವರ, ಗಿರೀಶ ಶೆಟ್ಟರ್, ಶಿವಣ್ಣ ಶೆಟ್ಟರ, ಪ್ರಭು ಬಸನಗೌಡ, ಭೀಮಣ್ಣ ಅಗಡಿ, ಚೆನ್ನಪ್ಪ ಇಟಿಗಿ, ಕಾವ್ಯ ಅಂಗಡಿ, ಗಂಗಣ್ಣ ಮಾಸೂರ, ಎನ್.ವಿ. ಕಾಳೆ, ಶಿವಾನಂದ ಹೊಸಮನಿ, ಮಾಂತೇಶ ಕರಿಯಣ್ಣವರ ಪಾಲ್ಗೊಂಡಿದ್ದರು. ಶಾಲೆಯ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ಕೆ.ಎಂ. ಬಿಜಾಪುರ ವಂದಿಸಿದರು.