ಮಕ್ಕಳಿಗೆ ದುಡಿಮೆ ಬೇಡ, ಶಿಕ್ಷಣ ನೀಡಿ: ಡೀಸಿ

| Published : Jun 13 2024, 12:45 AM IST

ಮಕ್ಕಳಿಗೆ ದುಡಿಮೆ ಬೇಡ, ಶಿಕ್ಷಣ ನೀಡಿ: ಡೀಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ದುಡಿಮೆಗೆ ಕಳುಹಿಸುವ ಬದಲು ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ದುಡಿಮೆಗೆ ಕಳುಹಿಸುವ ಬದಲು ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಗರದ ಕರ್ನಾಟಕ ಸಂಘದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅನಕ್ಷರಸ್ಥ ಕುಟುಂಬ, ಕುಟುಂಬದ ಆರ್ಥಿಕ- ಸಾಮಾಜಿಕ ಪರಿಸ್ಥಿತಿ ಸೇರಿದಂತೆ ಹಲವಾರು ಕಾರಣಗಳಿಂದ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡುವುದನ್ನು ನೋಡಿದ್ದೇವೆ. ಸರ್ಕಾರ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯಲು ಹಲವಾರು ಕಾಯ್ದೆ ಹಾಗೂ ಕಾನೂನುಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು. ಮಕ್ಕಳ ಕಡ್ಡಾಯ ಶಿಕ್ಷಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಮಕ್ಕಳನ್ನು ದುಡಿಮೆಯಿಂದ ದೂರ ಮಾಡಬೇಕು. ಕಡ್ಡಾಯವಾಗಿ ಶಿಕ್ಷಣ ದೊರಕಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಹಲವಾರು ಕಾರಣಗಳಿಂದ ಮಕ್ಕಳು ಕೆಲಸಕ್ಕೆ ಹೋಗುತ್ತಾರೆ. ಆದರೆ ಕೆಲಸಕ್ಕೆ ಸೇರಿಸಿಕೊಳ್ಳುವವರು ಅಕ್ಷರಸ್ಥರು, ಆರ್ಥಿಕವಂತರಾಗಿದ್ದರೂ ಕೂಡ ಅವರಿಗೆ ಬುದ್ದಿ ಹೇಳದೆ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡ ಪ್ರಕರಣಗಳಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳನ್ನು ಕೆಲಸಕ್ಕೆ ಕಳುಹಿಸಿದರೆ ಅವರ ತಂದೆ-ತಾಯಿಯನ್ನು ಕರೆಸಿ ಬುದ್ಧಿ ಹೇಳಿ ಮಕ್ಕಳಿಗೆ ಶಿಕ್ಷಣ ದೊರಕುವಂತೆ ಮಾಡಬೇಕು ಎಂದು ತಿಳಿಸಿದರು. ಬಾಲ ಕಾರ್ಮಿಕ ಪದ್ಧತಿ ಎನ್ನುವುದು ನಮ್ಮ ದೇಶದಲ್ಲಿ ಇನ್ನೂ ಜೀವಂತವಾಗಿದೆ ಎಂದರೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಹಳ ವರ್ಷಗಳ ಹಿಂದೆ ಸಮಾಜದಲ್ಲಿ ಬಡತನ, ಅನಕ್ಷರತೆ ಹೆಚ್ಚಿತ್ತು. ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಆರ್ಥಿಕ, ಶೈಕ್ಷಣಿಕವಾಗಿ ದೇಶ ಮುಂದುವರೆದಿದೆ. ಅದರೂ ಪ್ರತಿ ವರ್ಷ ಯಾವುದೇ ಜಿಲ್ಲೆಗೆ ಹೋದರೂ ಅಂದಾಜು 200 ಬಾಲ ಕಾರ್ಮಿಕರು ಸಿಗುತ್ತಾರೆ. ಇದು ಯೋಚಿಸಬೇಕಾದ ಸಂಗತಿ. ಬಾಲ ಕಾರ್ಮಿಕ ಪದ್ಧತಿಯನ್ನು ತೊಡೆದುಹಾಕಲು ಪ್ರತಿಯೊಬ್ಬ ನಾಗರೀಕರು ಸಹಕರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ, ನಿವೃತ್ತ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ಕಾನೂನುಗಳ ಸಲಹೆಗಾರ ವಿಜಯ್ ದೇವ್ ನಾಯಕ್ ಇತರರಿದ್ದರು.