ಕ್ಯಾನ್ಸರ್ ರೋಗ ಬಂದರೆ ಆತಂಕ ಬೇಡ: ರಂಗಸ್ವಾಮಿ

| Published : Feb 04 2024, 01:34 AM IST

ಸಾರಾಂಶ

ಕಳೆದ 50 ವರ್ಷಗಳ ಹಿಂದೆ ಕ್ಯಾನ್ಸರ್‌ ರೋಗ ಬಂದರೆ ಪಡುವಷ್ಟು ಆತಂಕ, ಭಯ ಇಂದಿನ ದಿನಮಾನಗಳಲ್ಲಿ ದೂರವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ. ಎಚ್.ವಿ. ರಂಗಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕಳೆದ 50 ವರ್ಷಗಳ ಹಿಂದೆ ಕ್ಯಾನ್ಸರ್‌ ರೋಗ ಬಂದರೆ ಪಡುವಷ್ಟು ಆತಂಕ, ಭಯ ಇಂದಿನ ದಿನಮಾನಗಳಲ್ಲಿ ದೂರವಾಗಿದೆ. ಏಕೆಂದರೆ ಈ ರೋಗಕ್ಕೆ ಆಧುನಿಕ ಮತ್ತು ಸುಸಜ್ಜಿತ ರೀತಿಯಲ್ಲಿ ಚಿಕಿತ್ಸೆ ನೀಡುವ ಯಂತ್ರೋಪಕರಣ, ಔಷಧಿಗಳು ಸಾಕಷ್ಟು ಲಭ್ಯವಿವೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ. ಎಚ್.ವಿ. ರಂಗಸ್ವಾಮಿ ತಿಳಿಸಿದರು.

ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಐಎಂಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆರೈಕೆಯ ಅಂತರವನ್ನು ಮುಚ್ಚಿ ಕಾರ್ಯಕ್ರಮ ಉದ್ಘಾಟಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಫೆ.4ನ್ನು ವಿಶ್ವ ಕ್ಯಾನ್ಸರ್‌ ಜಾಗೃತಿ ದಿನ ಎಂದು ಘೋಷಿಸಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನದಂತೆ ಕಾರ್ಯಕ್ರಮ ಆಯೋಜಿಸಿ, ಪ್ರತಿ 3 ವರ್ಷಗಳಿಗೊಮ್ಮೆ 1 ಘೋಷಾ ವಾಕ್ಯ ಹೊರಡಿಸುತ್ತಿದ್ದು, 2022 ರಿಂದ 2024 ರವರೆಗೆ ಆರೈಕೆ ಅಂತರವನ್ನು ಮುಚ್ಚಿ ಎಂಬುದು ಘೋಷಾ ವಾಕ್ಯವಾಗಿದೆ ಎಂದರು.

30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಅಗತ್ಯ ತಪಾಸಣೆಗೆ ಒಳಗಾಗುವ ಮೂಲಕ ಕ್ಯಾನ್ಸರ್‌ ರೋಗದಿಂದ ದೂರವಿರಬಹುದು. ಪ್ರಾಥಮಿಕ ಹಂತದಲ್ಲೆ ಇದನ್ನು ಪತ್ತೆ ಹಚ್ಚಿದರೆ ಗುಣಪಡಿಸುವುದು ಸುಲಭ. ಕೊನೆಯ ಹಂತದಲ್ಲಿ ಪತ್ತೆಯಾದರೆ ಗುಣಪಡಿಸುವುದು ನಿಧಾನ ಅಥವಾ ಕಷ್ಟವಾಗಬಹುದು ಎಂದರು.

5 ವರ್ಷಗಳಿಗೊಮ್ಮೆ ಪ್ರತಿಯೊಬ್ಬರೂ ಪೂರ್ವಭಾವಿ ತಪಾಸಣೆಗೆ ಒಳಪಡುವು ದರಿಂದ ಎಲ್ಲಾ ರೀತಿಯ ಕ್ಯಾನ್ಸರ್‌ ರೋಗ ವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡು ವುದರಿಂದ ಸಾವನ್ನು ತಪ್ಪಿಸಬಹುದಾಗಿದೆ ಎಂದರು.

ಮಾನವ ದೇಹದ ವಿವಿಧ ಅಂಗಗಳ ಕ್ಯಾನ್ಸರ್‌ ತಜ್ಞ ಡಾ.ಜಿ. ಗಿರೀಶ್, ಡಾ. ಎನ್. ಸುನೀತಾ, ಡಾ. ಸಿ.ಎಚ್. ಪುಷ್ಪಾನಾಗ್ ಇವರು ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಕೆಲವು ಅಗತ್ಯ ಮಾಹಿತಿಗಳನ್ನು ತಿಳಿಸಿದರು.

ಐಎಂಎ ಕಾರ್ಯದರ್ಶಿ ಡಾ.ಸಿ. ಮಹೇಶ್, ಡಾ.ಬಿ.ಎನ್. ಪ್ರಶಾಂತ್, ಡಾ. ಮಂಜುನಾಥ್ ಮತ್ತಿತರರಿದ್ದರು.