ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ರಕ್ತದಾನದಿಂದ ಹಲವಾರು ಜೀವಗಳನ್ನು ಉಳಿಸಲು ಸಾಧ್ಯವಿದ್ದು, ಹೀಗಾಗಿ ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.ಸ್ಥಳೀಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ, ರಿಮ್ಸ್ ಬೋಧಕ ಆಸ್ಪತ್ರೆ, ಐಎಂಎ ಸೇರಿ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.
ರಕ್ತದಾನದಿಂದ ಶರೀರದಲ್ಲಿ ಚೈತನ್ಯ ಶಕ್ತಿಯು ಹೆಚ್ಚಾಗಿ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಕಾಣಬಹುದು. ರಕ್ತದಾನದ ಬಗ್ಗೆ ಸುತ್ತಲಿನ ಜನರಿಗೆ ತಿಳಿಸಿ ಅವರನ್ನೂ ಇಂತಹ ಉತ್ತಮ ಕಾರ್ಯಗಳಲ್ಲಿ ಭಾಗಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತ ಅಗತ್ಯ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನದ ಮಹತ್ವ ಅರಿತು, ಇನ್ನೊಬ್ಬರಿಗೆ ನೆರವಾಗಬೇಕು. ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ. ರಕ್ತದಾನ ಮಾಡುವ ಮೂಲಕವೂ ಜೀವ ಉಳಿಸಬಹುದು ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ ಮಾತನಾಡಿ, ರಕ್ತದಾನದಿಂದ ಹಲವರ ಜೀವನದಲ್ಲಿ ಬದಲಾವಣೆಯನ್ನೂ ತರಬಹುದಾಗಿದೆ. ಜಿಲ್ಲೆಯಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ರಕ್ತದಾನಕ್ಕೆ ಸಾರ್ವಜನಿಕರು ಮುಂದಾಗಬೇಕು. ರಕ್ತದಾನ ಇತರರಿಗೆ ಮರುಜನ್ಮ ನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆ. ಯುವಜನರು ರಕ್ತದಾನದಂತಹ ಸಮಾಜಸೇವೆಗೆ ಹೆಚ್ಚಿನ ಒಲವು ತೋರಬೇಕು. ತಾವು ರಕ್ತದಾನ ಮಾಡುವುದರೊಂದಿಗೆ ಇತರರನ್ನೂ ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.ಈ ಸಂದರ್ಭದಲ್ಲಿ ರಿಮ್ಸ್ ಬೋಧಕ ಆಸ್ಪತ್ರೆ ಪ್ರಾಚಾರ್ಯ ಬಸವರಾಜ ಪಾಟೀಲ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಎಂ.ಡಿ.ಶಾಕೀರ್, ಡಾ.ಯಶೋದ, ಡಾ.ಮನೋಹರ ಪತ್ತಾರ್, ಡಾ.ಪ್ರಜ್ವಲ್, ಲಕ್ಷ್ಮೀ ಮುಂಡಾಸ್, ಬಸಯ್ಯ, ಮಲ್ಲಯ್ಯ ಮಠಪತಿ ಸೇರಿ ಜಿಲ್ಲಾ ಹಾಗೂ ತಾಲೂಕು ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))