ಕನ್ನಡಪ್ರಭ ವಾರ್ತೆ ಮಂಡ್ಯ

ನೋವಿನಲ್ಲಿರುವ ಜನರಿಗೆ ಜೀವದಾನ ಮಾಡುವುದು ಪುಣ್ಯದ ಕೆಲಸ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು.

ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ, ಶಸ್ತ್ರ ಚಿಕಿತ್ಸಕರ ಸಂಘ, ರಕ್ತನಿಧಿ ಕೇಂದ್ರ ಇವರ ವತಿಯಿಂದ ನಗರದ ಮಿಮ್ಸ್‌ನ ರಕ್ತನಿಧಿ ಕೇಂದ್ರದ ಆವರಣದಲ್ಲಿ ವೈದ್ಯ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನಕ್ಕಿಂತ ದೊಡ್ಡ ದಾನ ಯಾವುದೂ ಇಲ್ಲ. ರಕ್ತದಾನದ ಮಹತ್ವ ಅರಿತು ರಕ್ತದಾನ ಮಾಡಿ ಜೀವಗಳನ್ನು ಉಳಿಸಬೇಕು ಎಂದರು.

ರಕ್ತಕ್ಕೆ ಬೇರೆ ಪರ್ಯಾಯ ಇಲ್ಲದೆ ಇರುವುದರಿಂದ ರಕ್ತವನ್ನು ಔಷಧ ಎಂದು ಕರೆಯುತ್ತೇವೆ. ಹೆದ್ದಾರಿಗಳಲ್ಲಿ ಆಗುವಂತಹ ಅಪಘಾತಗಳು, ಗರ್ಭಿಣಿಯರಿಗೆ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇದನ್ನು ತುಂಬುವುದು ರಕ್ತದಾನದಿಂದ ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ರಕ್ತದಾನಿಗಳು ಭಯ ಪಡುವ ಅವಶ್ಯವಿಲ್ಲ. ಆದ್ದರಿಂದ ಯಾವುದೇ ತೊಂದರೆಯಿಲ್ಲ. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತಿದೆ. ಆರೋಗ್ಯ ಸುಧಾರಿಸುತ್ತದೆ. ಸಾವು ನೋವಿನಲ್ಲಿರುವ ಜನರಿಗೆ ಜೀವದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.


ರಕ್ತದಾನ ಮಹಾ ದಾನವಾಗಿದ್ದು ಸಾಕಷ್ಟು ಜೀವ ಉಳಿಸಲು ರಕ್ತದಾನ ಶ್ರೇಷ್ಠವಾದದ್ದು. ಸರ್ಜನ್‌ಗಳು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತಕೊಟ್ಟು ಜೀವಗಳನ್ನು ಬದುಕಿಸಲು ಹೆಚ್ಚು ಮಂದಿ ರಕ್ತದಾನ ಶಿಬಿರಗಳಲಿ ಭಾಗವಹಿಸಿ ರಕ್ತವನ್ನು ನೀಡಬೇಕು. ಇದರಿಂದ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.

ರಕ್ತದ ಅವಶ್ಯಕತೆ ಇರುವ ಒ-ನೆಗೆಟಿವ್, ಬಿ-ನೆಗೆಟಿವ್ ರಕ್ತ ಸಿಗುವುದು ಕಷ್ಟ. ರಕ್ತದ ತೀರ ಅವಶ್ಯಕತೆ ಇದ್ದಾಗ ಅಂತಹವರನ್ನು ಲೇಬಲ್ ಮಾಡಿ ನಮೂದಿಸಿದರೆ ಬೇರೆಯವರಿಗೆ ರಕ್ತ ಅವಶ್ಯಕತೆ ಇದ್ದಾಗ ಉಪಯೋಗವಾಗುತ್ತದೆ ಎಂದರು.

ಶಸ್ತ್ರ ಚಿಕಿತ್ಸಕ ಡಾ.ಬಿ.ಕೆ.ಸುರೇಶ್, ಡಾ.ಸ್ವರೂಪ್, ಡಾ.ಲಿಂಗರಾಜು, ಎಂಬಿಬಿಎಸ್ ಪದವಿ ಪಡೆದ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ರಕ್ತನಿಧಿ ಕೇಂದ್ರದ ಡಾ.ಮುರುಳೀಧರ್, ರಫೀಕ್, ರೆಡ್ ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.