Donation of Ambulance to Hombuja Primary Health Centre

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಗ್ರಾಮೀಣ ನಾಗರೀಕರ ಅನುಕೂಲಕ್ಕಾಗಿ ಬೆಂಗಳೂರಿನ ಪ್ರಗತಿ ಆಟೋಮೆಷನ್ ಕೇಂದ್ರ ಹಾಗೂ ಪ್ರಗತಿ ಕೇರ್ ಟ್ರಸ್ಟ್ ವತಿಯಿಂದ ಸಮೀಪದ ಹೊಂಬುಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಲಾಗಿದ್ದು ಇದರ ಹಸ್ತಾಂತರ ಕಾರ್ಯಕ್ರಮಕ್ಕೆ ಹೊಂಬುಜ ಜೈನಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು.

ಹಸ್ತಾಂತರದ ನಂತರ ಶ್ರೀಗಳು ಆಶೀರ್ವಚನ ನೀಡಿ ಗ್ರಾಮೀಣ ಪ್ರದೇಶದ ಬಡಕೂಲಿ ಕಾರ್ಮಿಕ ವರ್ಗದ ಮಧ್ಯಮವರ್ಗದವರ ಜನರ ತುರ್ತು ಸೇವೆಗೆ ಇದರಿಂದ ಹೆಚ್ಚಿನ ಸಹಕಾರಿಯಾಗಲಿದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ದೂರದ ತಾಲೂಕು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಈ ಅಂಬುಲೆನ್ಸ್ ಸಹಕಾರಿಯಾಗಲಿದೆ ಎಂದರು.

ಸಂಸ್ಥೆಯ 28 ನೇ ಕಾರ್ಯಕ್ರಮ ಇದಾಗಿದ್ದು ಆಂಬ್ಯುಲೆನ್ಸ್‌ನಲ್ಲಿ ಅತ್ಯಾದುನಿಕ ಗುಣಮಟ್ಟದ 11 ವಿಧದ ತುರ್ತು ಹಾಗೂ ಜೀವರಕ್ಷಕ ಆರೋಗ್ಯ ರಕ್ಷಕ ಉಪಕರಣಗಳನ್ನು ಅಳವಡಿಸಲಾಗಿದೆ. 33 ಲಕ್ಷ ರು. ವೆಚ್ಚದ ಸುಸಜ್ಜಿತ ಆಂಬ್ಯುಲೆನ್ಸ್ ಸೌಲಭ್ಯಗಳನ್ನು ಕಲ್ಪಸಲಾಗಿದ್ದು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ನಿರ್ದೇಶಕ ಆನಂದ ಹರಿಹರ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಾಗರಾಜ್‍ನಾಯ್ಕ್ ಮಾತನಾಡಿ ಇಂತಹ ಸೇವೆಗಳ ಮೂಲಕ ಕೊಡುಗೆ ನೀಡಿದ ಸಂಸ್ಥೆಯವರ ಕಾರ್ಯ ಪ್ರಶಂಸನೀಯವಾಗಿದೆ ಎಂದರು. ಬೆಂಗಳೂರಿನ ಪ್ರಗತಿ ಅಟೋಮೇಷನ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಅತುಲ್ ಎಸ್ ಬಾರಂಗಿ ಹಾಗೂ ಕುಟುಂಬದವರು ಆಂಬ್ಯುಲೆನ್ಸ್ ಅಸ್ಪತ್ರೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಡಾ. ಗುಡದಪ್ಪಕಸಬಿ, ಡಾ.ಮೋಹನ್,ವೈ.ಜೆ.ಶಸಿಕುಮಾರ್, ತಾಲ್ಲೂಕ್ ವೈದ್ಯಾಧಿಕಾರಿ ಶಂತರಾಜ್, ಹೊಂಬುಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿತೀನ್‍ಭಟ್, ಸಿಬ್ಬಂದಿವರ್ಗ ಸಂಸ್ಥೆಯ ನಿರ್ದೇಶಕರಾದ ಶಾಂತಕುಮಾರ್, ಗುರುರಾಜ್, ಆಸ್ಪತ್ರೆಗೆ ಜಾಗ ದಾನ ನೀಡಿದ ಸುಮಿತ್ರಮ್ಮ ನಿಕಟ ಪೂರ್ವ ಹುಂಚ ಗ್ರಾಮ ಪಂಚಾಯಿತಿ ಸದಸ್ಯರಾದ ದೇವೆಂದ್ರಪ್ಪ, ಯಶಸ್ವತಿ ವೃಷಭರಾಜ್‍ ಜೈನ್ ಊರಿನ ಗ್ರಾಮಸ್ಥರು ಇನ್ನಿತರರು ಹಾಜರಿದ್ದರು.

---------------

ದಿ.31.ಅರ್.ಪಿ.ಟಿ.1ಪಿ:

ಹೊಂಬುಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾದ ಆಂಬ್ಯುಲೆನ್ಸ್‌ನ್ನು ಹಸ್ತಾಂತರಿಸಲಾಯಿತು.