ಕುಮಾರೇಶ್ವರ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರಗಳ ದೇಣಿಗೆ

| Published : Nov 06 2024, 11:52 PM IST

ಸಾರಾಂಶ

ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ಫ್ರೆಸೆನಿಯಸ್ ಹೆಮೊಡಯಾಲಿಸಿಸ್ ಎನ್ನುವ 4008 ಎಸ್ ಮಾಡೆಲ್‌ನ ಎರಡು ಅತ್ಯಾಧುನಿಕ ಡಯಾಲಿಸಿಸ್ ಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ಫ್ರೆಸೆನಿಯಸ್ ಹೆಮೊಡಯಾಲಿಸಿಸ್ ಎನ್ನುವ 4008 ಎಸ್ ಮಾಡೆಲ್‌ನ ಎರಡು ಅತ್ಯಾಧುನಿಕ ಡಯಾಲಿಸಿಸ್ ಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಈ ಯಂತ್ರಗಳು ಪರಿಣಾಮಕಾರಿಯಾಗಿ ಬಳಕೆಯಾಗುತ್ತವೆ. ಕೊಟಕ್ ಮಹೀಂದ್ರಾ ಬ್ಯಾಂಕ್‌ನ ರಿಜಿನಲ್ ಹೆಡ್ ಕಾರ್ತಿಕ್.ಸಿ, ಏರಿಯಾ ಮ್ಯಾನೇಜರ್ ಲಕ್ಷ್ಮಿಕಾಂತ ಖೋಡೆ, ವಿಭಾಗೀಯ ಮ್ಯಾನೇಜರ್ ರವೀಂದ್ರ ಪಂಡಿತ, ರಿಜಿನಲ್ ಮಾರ್ಕೆಟಿಂಗ್ ಮ್ಯಾನೇಜರ್ ರಂಗನಾಥ ರಾಂಪೂರೆ ಮತ್ತು ಬಾಗಲಕೋಟೆ ಶಾಖಾ ಮ್ಯಾನೇಜರ್ ಪ್ರದೀಪ ಖಟಾವಕರ್ ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಈ ಅತ್ಯಾಧುನಿಕ ಯಂತ್ರಗಳನ್ನು ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠಗೆ ಹಸ್ತಾಂತರಿಸಿದರು.

ಯಂತ್ರಗಳನ್ನು ಸ್ವೀಕರಿಸಿ ಮಾತನಾಡಿದ ಡಾ.ವೀರಣ್ಣ ಚರಂತಿಮಠ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಆಸ್ಪತ್ರೆಗಳು ಮಾತ್ರವಲ್ಲದೆ ಸಂಘ ಸಂಸ್ಥೆಗಳು ಕೂಡ ಪ್ರಯತ್ನಿಸುತ್ತಿವೆ. ಇದೊಂದು ಸಾಮಾಜಿಕ ಜವಾಬ್ದಾರಿಯಾಗಿ ಮಾರ್ಪಟ್ಟಿದೆ. ಈ ದಿಸೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ವತಿಯಿಂದ ಈ ಹಿಂದೆಯೂ ಕುಮಾರೇಶ್ವರ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ದೇಣಿಗೆಯಾಗಿ ನೀಡಲಾಗಿದೆ. ಈಗ ದೇಣಿಗೆ ನೀಡಿರುವ ಡಯಾಲಿಸಿಸ್ ಯಂತ್ರಗಳನ್ನು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವುದು. ಬ್ಯಾಂಕ್‌ ವ್ಯವಸ್ಥಾಪಕರ ಈ ಸಮಾಜಮುಖಿ ನಡೆ ಅಭಿನಂದನಾರ್ಹವಾಗಿದೆ. ಅವರ ಸಹಕಾರವನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ ಎಂದರು.

ಈ ಸಂದರ್ಭ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಸಂಘದ ಸದಸ್ಯರು, ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಕೋರಾ, ನೆಫ್ರಾಲಜಿ ವಿಭಾಗದ ತಜ್ಞವೈದ್ಯರಾದ ಡಾ.ಚಿರಾಗ, ಡಾ.ಕಿರಣ ಬಿಜಾಪೂರ ಮತ್ತು ಮೆಡಿಕಲ್ ಕಾಲೇಜ್ ಹಾಗೂ ಬ್ಯಾಂಕ್‌ ಸಿಬ್ಬಂದಿ ಇದ್ದರು.