ವಿದ್ಯೆ ದಾನ ಮಾಡಿದಷ್ಟೂ ವೃದ್ಧಿ: ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ

| Published : May 24 2024, 12:57 AM IST

ಸಾರಾಂಶ

ಪ್ರಸ್ತುತ ದಿನದಲ್ಲಿ ದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಮಹಿಳೆಯರನ್ನು ಕೊಲೆ ಮಾಡಿ ರಕ್ತ ಹರಿಯುವಂತೆ ಮಾಡಿರುವುದು ದುಃಖಕರ ಸಂಗತಿಯಾಗಿದೆ. ಹೆಣ್ಣು ಮಕ್ಕಳನ್ನು ಭೋಗದ ವಸ್ತುಗಳಂತೆ ನೋಡದೆ ಭಗನಿಯರಂತೆ ಕಾಣಬೇಕು. ಸೋದರಿಯಂತೆ ನೋಡಬೇಕು. ಹೆಣ್ಣು ಮಕ್ಕಳು ಸಮಾಜ ಸೇವೆಗೆ ಅರ್ಪಿಸಿಕೊಂಡಾಗ ಸಾಮಾಜಿಕ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕೃಷ್ಣಮೂರ್ತಿಪುರಂ ರಾಮಯ್ಯ ರಸ್ತೆಯಲ್ಲಿ ಬಿಎಸ್‌ಎಸ್ (ವೈ.ಕೆ. ಅಮೃತಾ ಬಾಯಿ, ಎಸ್.ಕೆ. ಸುರಮಾ ಬಾಯಿ ಭಗಿನಿ ಸೇವಾ ಸಮಾಜ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್) ವಿದ್ಯೋದಯ ಶಾಲೆಯನ್ನು ಉಡುಪಿ ಪಾಲಿಮಾರು ಮಠದ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗುರುವಾರ ಉದ್ಘಾಟಿಸಿದರು.

ಈ ವೇಳೆ ಪಾಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ಬೇರೆ ಸಂಪತ್ತು ಖರ್ಚು ಮಾಡಿದರೆ ಮುಗಿದು ಹೋಗುತ್ತದೆ. ಆದರೆ, ವಿದ್ಯೆಯನ್ನು ದಾನ ಮಾಡಿದರೇ ನೂರಾರು ಜನರಿಗೆ, ಅವರಿಂದ ಲಕ್ಷಾಂತರ ಜನರಿಗೆ ವೃದ್ಧಿಯಾಗುತ್ತ ಹೋಗುತ್ತದೆ. ಗಂಗಾ ನದಿಯಂತೆ ಸಮೃದ್ಧಿಯಾಗುತ್ತದೆ. ಅದೇ ರೀತಿ ವಿದ್ಯೆ ಜೊತೆಗೆ ಸಂಸ್ಕಾರವನ್ನು ಕಲಿಸಿದರೇ ಅದೂ ಕೊನೆಯ ತನಕ ಉಳಿಯುತ್ತದೆ ಎಂದರು.

ಪ್ರಸ್ತುತ ದಿನದಲ್ಲಿ ದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಮಹಿಳೆಯರನ್ನು ಕೊಲೆ ಮಾಡಿ ರಕ್ತ ಹರಿಯುವಂತೆ ಮಾಡಿರುವುದು ದುಃಖಕರ ಸಂಗತಿಯಾಗಿದೆ. ಹೆಣ್ಣು ಮಕ್ಕಳನ್ನು ಭೋಗದ ವಸ್ತುಗಳಂತೆ ನೋಡದೆ ಭಗನಿಯರಂತೆ ಕಾಣಬೇಕು. ಸೋದರಿಯಂತೆ ನೋಡಬೇಕು. ಹೆಣ್ಣು ಮಕ್ಕಳು ಸಮಾಜ ಸೇವೆಗೆ ಅರ್ಪಿಸಿಕೊಂಡಾಗ ಸಾಮಾಜಿಕ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ ಎಂದು ಅವರು ಹೇಳಿದರು.

ಮಕ್ಕಳು ಕೇವಲ ವಿದ್ಯಾವಂತರಾದರಷ್ಟೇ ಸಾಲದು. ಸಂಸ್ಕಾರವಂತರಾಗಬೇಕು. ದೇಶಪ್ರೇಮ- ದೇವ ಪ್ರೇಮವನ್ನು ಬೆಳಸಿಕೊಳ್ಳಬೇಕು. ಒಳ್ಳೆಯ ವೃಕ್ಷವು ಮೊಳಕೆಯಲ್ಲಿ ಚೆನ್ನಾಗಿ ಮೂಡಿ ಬರುವಂತೆ ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಲ್ಲೇ ಉತ್ತಮ ಸಂಸ್ಕಾರವನ್ನು ಕಲಿಸಬೇಕು. ಇದಕ್ಕಾಗಿ ಶಿಕ್ಷಕರು ಶಿಕ್ಷೆ ಕೊಡವವನಾಗಬಾರದು, ಶಿಕ್ಷಣವನ್ನು ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಜ್ಞಾನದೊಂದಿಗೆ ಸಂಸ್ಕಾರವೂ ಮುಖ್ಯ:

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜ್ಞಾನದೊಂದಿಗೆ ಸಂಸ್ಕಾರವೂ ಬಹಳ ಮುಖ್ಯ. ವಿದ್ಯೆ ಮತ್ತು ಸಂಸ್ಕಾರ ಕೂಡಿದರೆ ವ್ಯಕ್ತಿಯು ಅತ್ಯುತ್ತಮನಾಗುತ್ತಾನೆ. ಪ್ರಪಂಚದಲ್ಲಿ ಅನಾಹುತ ನಡೆಸುವ, ಕೆಟ್ಟದು ಮಾಡುವ, ತೊಂದರೆ ಕೊಡುವಂತಹ ಕೆಲಸ ಮಾಡುವವರು ಬಹಳ ಬುದ್ಧಿವಂತರೆ. ಆದರೆ, ಬುದ್ಧಿಯು ಬೇರೆ ರೀತಿ ಬದಲಾವಣೆಯಾದಾಗ ಕೇಡುಗಳನ್ನು ಮಾಡುತ್ತಾರೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಲ್ಲೇ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೊಡಿಸಬೇಕು ಎಂದರು.

ಈಗಿನ ಪೋಷಕರು ಒಂದು- ಎರಡು ಮಕ್ಕಳು ಇರುವುದರಿಂದ ಅವರನ್ನು ಸಹಿಸಿಕೊಳ್ಳುವ ಗುಣವನ್ನು ಬೆಳೆಸಿಕೊಂಡುಬಿಟ್ಟಿದ್ದಾರೆ. ಮಕ್ಕಳು ಏನೇ ತಪ್ಪು ಮಾಡಿದರು ಇಂದು ಸರಿ ಹೋಗುತ್ತಾರೆ. ನಾಳೆ ಸರಿ ಹೋಗುತ್ತಾರೆ ಎಂದು ಕಾಲ ದೂಡುತ್ತಾರೆ ಹೊರತು ಮಕ್ಕಳಿಗೆ ಬುದ್ಧಿ ಹೇಳುವುದಿಲ್ಲ. ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ ಎನ್ನುವ ನಾಣ್ಣುಡಿಯಂತೆ ದೊಡ್ಡವರಾದ ಮೇಲೆ ಮಕ್ಕಳನ್ನು ಸರಿ ದಾರಿಗೆ ತರಲು ಆಗುವುದಿಲ್ಲ. ಆದ್ದರಿಂದ ಪೋಷಕರು ಸಂಸ್ಕಾರವನ್ನು ಕಲಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಟ್ರಸ್ಟ್ ನ ಕಾರ್ಯಾಧ್ಯಕ್ಷ ಬಿ. ಶ್ರೀನಿವಾಸ್, ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್, ಖಜಾಂಚಿ ಎಚ್.ಟಿ. ಸ್ವರ್ಣಕುಮಾರ್, ಟ್ರಸ್ಟಿಗಳಾದ ಪದ್ಮಜಾ ಶ್ರೀನಿವಾಸ್, ವಂದನಾ ಗೋವಿಂದಕೃಷ್ಣ, ಕೆ.ಎಸ್. ಗುರುರಾಜ್, ಎಚ್. ಮುರಳೀಧರ ಭಟ್, ಅಪರ್ಣ ಶ್ರೀನಿವಾಸ್, ಪ್ರಾಂಶುಪಾಲ ಪವನ್ ಕುಮಾರ್ ಇದ್ದರು. ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ಗುರು ಸ್ವಾಗತಿಸಿದರು.ದೇಶದ ಭವಿಷ್ಯವನ್ನು ಆಕಾಶದಲ್ಲಿ ಇರುವ ನಕ್ಷತ್ರಗಳನ್ನು ನೋಡಿಕೊಂಡು, ಕುಂಡಲಿಗಳ ಮೂಲಕ ತೀರ್ಮಾನ ಮಾಡಬಾರದು. ಮಕ್ಕಳ ಮುಖದಲ್ಲಿ ನಕ್ಷತ್ರದಂತೆ ಹೊಳೆಯುವ ತೇಜಸ್ಸನ್ನು ನೋಡಿ ತೀರ್ಮಾನ ಮಾಡಬೇಕು. ಮಕ್ಕಳ ಮುಖದಲ್ಲಿ ನಕ್ಷತ್ರದಂತಹ ಹೊಳಪು ಇದ್ದರೆ ಅಂತಹ ದೇಶಕ್ಕೆ ಭವಿಷ್ಯವಿದೆ ಎಂದರ್ಥ. ವಿದ್ಯೆ ಒಂದು ಇದ್ದರೆ ಸಾಲದು, ಸಂಸ್ಕೃತಿಯು ಇರಬೇಕು. ಸಂಸ್ಕಾರವನ್ನು ಭವ್ಯ ಸಮಾಜ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು.

- ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠಭಗಿನಿ ಸೇವಾ ಸಮಾಜ ಈಗ ಬಿಎಸ್ಎಸ್ ವಿದ್ಯೋದಯ

ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಬರುವ ಬಿಎಸ್‌ಎಸ್ ವಿದ್ಯೋದಯ ಹೊಸ ಶಾಲೆಯ ಕಟ್ಟಡವನ್ನು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಶಾಲೆ ಅಳವಡಿಸಿಕೊಂಡಿದ್ದು, ಅದರಂತೆ ಕಟ್ಟಡವನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ ನಿಯಮದಂತೆ ಈ ಕಟ್ಟಡವಿದ್ದು, ವಿದ್ಯಾರ್ಥಿ ಸ್ನೇಹಿಯಾಗಿ ತರಗತಿಗಳನ್ನು ರೂಪಿಸಲಾಗಿದೆ. ಈ ಶಾಲೆಯೂ ಸಂಪೂರ್ಣ ಸಿಬಿಎಸ್ಸಿ ಪಠ್ಯಕ್ರಮ ಹೊಂದಿರಲಿದ್ದು, ಅದಕ್ಕಾಗಿ ಅನುಮತಿ ಕೋರಲಾಗಿದೆ. ಹೊಸ ಕಟ್ಟಡದಲ್ಲಿ ಮೆಡಿಟೇಷನ್ ಹಾಲ್, ಆಕ್ಟಿವಿಟಿ ರೂಂ, ಮೈದಾನ, ಗ್ರಂಥಾಲಯ ಹಾಗೂ ವಿಜ್ಞಾನದ ಲ್ಯಾಬ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.