ಪವರ್‌ ಗ್ರಿಡ್‌ ಸ್ಥಾವರ ಸ್ಥಾಪನೆಗೆ ಡೊಂಗರಗಾಂವ್‌ ಗ್ರಾಮಸ್ಥರ ಆಕ್ಷೇಪ

| Published : Feb 13 2024, 12:48 AM IST

ಪವರ್‌ ಗ್ರಿಡ್‌ ಸ್ಥಾವರ ಸ್ಥಾಪನೆಗೆ ಡೊಂಗರಗಾಂವ್‌ ಗ್ರಾಮಸ್ಥರ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಾವರ ಸ್ಥಾಪನೆ ಮಾಡುವುದು ಒಂದು ಅಭಿವೃದ್ಧಿ ವಿಚಾರವೇನೋ ಹೌದು ಆದರೆ ಅದು ಅತೀ ಕಡಿಮೆ ಜಮೀನು ಹೊಂದಿರುವ ಡೊಂಗರಗಾಂವ್‌ ಗ್ರಾಮದಲ್ಲಿ ಬೇಡ ಎಂದು ರೈತರ ಒತ್ತಾಯ

ಕನ್ನಡಪ್ರಭ ವಾರ್ತೆ ಬೀದರ್‌

ಉದ್ಧೇಶಿತ ಪವರ್‌ ಗ್ರಿಡ್‌ ಸ್ಥಾವರ ಸ್ಥಾಪನೆಯನ್ನು ಔರಾದ್‌ ತಾಲೂಕಿನ ಡೊಂಗರಗಾಂವ್‌ ಗ್ರಾಮದ ರೈತರ ಜಮೀನುಗಳಲ್ಲಿ ಸ್ಥಾಪಿಸುವ ಬದಲು ಸರ್ಕಾರಿ ಜಮೀನು ಅಥವಾ ಅರಣ್ಯ ಇಲಾಖೆ ಜಮೀನುಗಳಲ್ಲಿ ಸ್ಥಾಪನೆ ಮಾಡಿ ಎಂದು ಡೊಂಗರಗಾಂವ್‌ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾ ರೈತ ಸಂಘದ ಪ್ರಮುಖರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಗ್ರಾಮಸ್ಥರು, ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಜಮೀನು ನೀಡುವಿಕೆ ಕುರಿತಂತೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾಗಿದೆ. ಸ್ಥಾವರ ಸ್ಥಾಪನೆ ಮಾಡುವುದು ಒಂದು ಅಭಿವೃದ್ಧಿ ವಿಚಾರವೇನೋ ಹೌದು ಆದರೆ ಅದು ಅತೀ ಕಡಿಮೆ ಜಮೀನು ಹೊಂದಿರುವ ಡೊಂಗರಗಾಂವ್‌ ಗ್ರಾಮದಲ್ಲಿ ಬೇಡ ಎಂದು ತಿಳಿಸಿದ್ದಾರೆ.

ಗ್ರಾಮದ ರೈತರಲ್ಲಿ ಜಮೀನು ಇರುವುದೇ ಅಲ್ಪ ಸ್ವಲ್ಪ. ಆ ಜಮೀನಿನ ಮೇಲೆ ಅವರ ಉಪಜೀವನ ನಡೆಯುತ್ತಿದ್ದು, ಬೇರೆ ದಾರಿಯೂ ಇರುವುದಿಲ್ಲ. ಆದಕಾರಣ ಯಾವುದೇ ಕಾರಣಕ್ಕೂ ಎಷ್ಟೇ ಹಣ ಕೊಟ್ಟರೂ ಅಲ್ಲಿನ ರೈತರು ತಮ್ಮ ಅನ್ನದ ತಟ್ಟೆ ಎಂದೆಂದಿಗೂ ಕೊಡಲು ಸಾಧ್ಯವಿಲ್ಲ. ಆದಕಾರಣ ತಾವುಗಳು ಡೊಂಗರಗಾಂವ್‌ ಗ್ರಾಮದ ರೈತರ ಅನ್ನದ ತಟ್ಟೆ ರಕ್ಷಣೆ ಮಾಡಿ, ಹಿತ ಕಾಪಾಡಬೇಕು ಎಂದು ಮನವಿಸಿದ್ದಾರೆ.

ರೈತರ ಒಪ್ಪಿಗೆ ಇಲ್ಲದೇ ಜಮೀನು ತೆಗೆದುಕೊಳ್ಳುವ ವಿಚಾರ ಮಾಡಿದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಚಂದ್ರಶೇಖರ ಜಮಖಂಡಿ, ಶಂಕರೆಪ್ಪ ಪಾರಾ, ಶೇಷರಾವ್‌ ಕಣಜಿ, ಪ್ರಕಾಶ ಬಾವಗೆ, ಪ್ರವೀಣ ಕುಲಕರ್ಣಿ, ಬಾಬುರಾವ್‌ ಜೋಳದಾಬಕಾ, ಶಂಕರೆಪ್ಪ ಪಾರಾ, ಸತೀಶ ನನ್ನೂರೆ, ಶಂಕ್ರೆಪ್ಪ ಪಾಟೀಲ್‌ ಅತಿವಾಳ, ವಿಠಲರಾವ್‌ ಪಾಟೀಲ್‌, ಸುಭಾಷ ರಗಟೆ, ಕಲ್ಲಪ್ಪ ದೇಶಮುಖ, ರಿಯಾಜ ಪಟೇಲ್‌, ನಾಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಚಕ್ಕಿ, ಉತ್ತಮರಾವ್‌ ಮಾನೆ, ಸತ್ಯವಾನ ಪಾಟೀಲ್‌ ಸೇರಿದಂತೆ ಔರಾದ್‌ ತಾಲೂಕಿನ ಡೊಂಗರಗಾಂವ್‌ ಗ್ರಾಮದ ರೈತರು ಉಪಸ್ಥಿತರಿದ್ದರು.