ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಭಾನುವಾರ ಮಧ್ಯರಾತ್ರಿ ಧಾರಾಕಾರ ಮಳೆಗೆ ಹಳ್ಳ, ಕೊಳ್ಳಗಳು ಹಾಗೂ ಪಟ್ಟಣದ ಸಮೀಪದ ಡೋಣಿ ನದಿ ನೀರು ತುಂಬಿ ಹರಿಯುತ್ತಿದೆ. ಒಂದೇ ರಾತ್ರಿಯಲ್ಲಿ ದೇವರ ಹಿಪ್ಪರಗಿ ತಾಲೂಕಿನಲ್ಲಿ 130.2 ಮಿ.ಮೀ ದಾಖಲೆ ಪ್ರಮಾಣದ ಮಳೆಯಾಗಿದೆ.ಈ ಮಳೆ ರೈತರಲ್ಲಿ ಸಂತಸ ಮೂಡಿಸಿದ್ದು, ಕೃಷಿ ಚಟುವಟಿಕೆಗಳಿಗೆ ಜೋರಾಗಿವೆ. ರವಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನಲ್ಲಿ ಹಳ್ಳ ಕೊಳ್ಳ ತುಂಬಿ ಹರಿದಿವೆ. ಪಟ್ಟಣದ ವಾರ್ಡ್ ನಂ 4ರಲ್ಲಿ ಹಳೆಯ ಕಾಲದ ಹುಡೇ ಕುಸಿದು ರಸ್ತೆಯ ಮೇಲೆ ಬಿದ್ದಿದ್ದೆ. ಮಳೆಯಿಂದಾಗಿ ಯಾವುದೇ ಅನಾಹುತ ಆದ ಬಗ್ಗೆ ವರದಿಯಾಗಿಲ್ಲ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನ ಕಡ್ಲೇವಾಡ ಪಿ.ಎಚ್ ವ್ಯಾಪ್ತಿಯಲ್ಲಿ 25.1 ಮಿ.ಮೀ, ಕೊಂಡಗೂಳಿ ಗ್ರಾಮದ ಮಳೆ ಮಾಪನದಲ್ಲಿ 68 ಮಿ.ಮೀ, ದೇವರಹಿಪ್ಪರಗಿ ಪಟ್ಟಣದ ವ್ಯಾಪ್ತಿಯಲ್ಲಿ ಗರಿಷ್ಠ ಮಟ್ಟ 130.2 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.ಪಟ್ಟಣದಲ್ಲಿ ಈ ವರ್ಷದ ಗರಿಷ್ಠ ಮಳೆ ದಾಖಲಾಗಿದೆ. ತಾಲೂಕಿನಾದ್ಯಂತ ಮುಂಗಾರು ಮಳೆ ಆರಂಭವಾಗಿದ್ದು, ಭಾರಿ ಮಳೆಗೆ ತಾಲೂಕಿನ ಸಾತಿಹಾಳ ಹಾಗೂ ಯಾಳವಾರ ಗ್ರಾಮದ ಡೋಣಿ ನದಿ ತುಂಬಿ ಹರಿಯುತ್ತಿದೆ. ಸೇತುವೆಯ ಬಳಿ ನೀರು ಹರಿಯುತ್ತಿರುವುದನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಸುತ್ತಮುತ್ತಲಿನ ಬತ್ತಿ ಹೋಗಿದ್ದ ಕೊಳವೆ ಬಾವಿಗಳಿಗೆ ಮರು ಜೀವ ಬಂದತಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಅನ್ನದಾತ ಉಳುಮೆ ಮಾಡಲು ಸಿದ್ದತೆ ಮಾಡುತ್ತಿದ್ದಾನೆ. ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ತಂಪಿನ ಅನುಭವ ನೀಡಿದೆ. ಸೋಮವಾರ ಕೂಡ ತಾಲೂಕಿನಾದ್ಯಂತ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಇದರಿಂದ ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ.