ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ ಇಂಟ್ಯಾಕ್‌ನ ಮಂಗಳೂರು ಘಟಕ ‘ವಿಶ್ವ ನದಿಗಳ ದಿನ’ದ ಅಂಗವಾಗಿ ‘ಎ ಮಾರ್ನಿಂಗ್ ಬೈ ದಿ ರಿವರ್’ (ನದಿ ತೀರದಲ್ಲಿ ಒಂದು ಬೆಳಗು) ಎಂಬ ವಿಶೇಷ ದೋಣಿ ವಿಹಾರ ಕಾರ್ಯಕ್ರಮ ನಡೆಸಿದರು.
ಮಂಗಳೂರು: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ ಇಂಟ್ಯಾಕ್‌ನ ಮಂಗಳೂರು ಘಟಕ ‘ವಿಶ್ವ ನದಿಗಳ ದಿನ’ದ ಅಂಗವಾಗಿ ‘ಎ ಮಾರ್ನಿಂಗ್ ಬೈ ದಿ ರಿವರ್’ (ನದಿ ತೀರದಲ್ಲಿ ಒಂದು ಬೆಳಗು) ಎಂಬ ವಿಶೇಷ ದೋಣಿ ವಿಹಾರ ಕಾರ್ಯಕ್ರಮ ನಡೆಸಿದರು.
ಗುರುಪುರ ನದಿಯಲ್ಲಿ ನಡೆದ ಈ ಕಾರ್ಯಕ್ರಮ ಸುಲ್ತಾನ್ ಬತ್ತೇರಿ ದೋಣಿ ನಿಲ್ದಾಣದಿಂದ ಆರಂಭವಾಯಿತು. ಇಂಟ್ಯಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಷ್ ಚಂದ್ರ ಬಸು ಮಾತನಾಡಿ, ಪ್ರಾಚೀನ ಕಾಲದಿಂದಲೂ ಗುರುಪುರ ನದಿ ಮಂಗಳೂರಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರ ದಂಡೆಗಳಲ್ಲಿ ಬಂದರುಗಳು ಮತ್ತು ಕೋಟೆಗಳು ನಿರ್ಮಾಣಗೊಂಡಿದ್ದವು. ಜನರು ಮತ್ತು ಸರಕುಗಳ ಸಾಗಣೆಗೆ ಜಲಸಾರಿಗೆ ಪ್ರಮುಖ ಮಾರ್ಗವಾಗಿತ್ತು. ಆದರೆ, ಇಂದು ನಗರದ ಅಭಿವೃದ್ಧಿಯಲ್ಲಿ ನದಿಯನ್ನು ಸಮರ್ಪಕವಾಗಿ ಪರಿಗಣಿಸಲಾಗುತ್ತಿಲ್ಲ. ನಗರ ತ್ಯಾಜ್ಯವನ್ನು ಸುರಿಯುವ ತಾಣವಾಗಿ ನದಿ ಕ್ರಮೇಣ ಮಾರ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಾಮಾಜಿಕ ಕಾರ್ಯಕರ್ತ ಹಾಗೂ ಪರಿಸರವಾದಿ ಯತೀಶ್ ಬೈಕಂಪಾಡಿ ಮಾತನಾಡಿ, ಹಿಂದಿನ ಕಾಲದಲ್ಲಿ ನದಿ ಜನರ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿದ್ದು, ಘಟ್ಟ ಪ್ರದೇಶದ ಜನರು ದೋಣಿಗಳಲ್ಲಿ ಸಂಚರಿಸಿ ಕರಾವಳಿ ಪಟ್ಟಣಗಳಿಗೆ ಬರುತ್ತಿದ್ದರು ಎಂದರು.ಲೆಕ್ಕ ಪರಿಶೋಧಕ ಗಿರಿಧರ ಕಾಮತ್ ಮಾತನಾಡಿದರು. ಸಂವಾದದ ವೇಳೆ ದೋಣಿ ವಿಹಾರ, ಈಜು ಕಲಿಕೆ ಮತ್ತು ನದಿಯ ದಂಡೆಯಲ್ಲಿ ಕಳೆದ ಬಾಲ್ಯದ ದಿನಗಳ ನೆನಪುಗಳು ಮೂಡಿಬಂದವು. ಜೊತೆಗೆ, ಕಾಲಕ್ರಮೇಣ ಉಂಟಾದ ಬದಲಾವಣೆಗಳು ಹಾಗೂ ನದಿ ಮತ್ತು ಅದರ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಅಗತ್ಯದ ಕುರಿತು ಭಾಗವಹಿಸಿದವರು ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಯತೀಶ್ ಬೈಕಂಪಾಡಿ, ಗಿರಿಧರ ಕಾಮತ್ ಹಾಗೂ ಕಲಾವಿದ ಕಿಶೋರ್ ಅವರನ್ನು ಸನ್ಮಾನಿಸಲಾಯಿತು.