ಕತ್ತೆ ಹಾಲು ವಂಚನೆ ಪ್ರಕರಣ: ಸಿಐಡಿ ತನಿಖೆ ಆರಂಭ

| Published : Nov 15 2024, 12:32 AM IST

ಸಾರಾಂಶ

ಸಿಐಡಿ ಕಲಬುರಗಿ ವಿಭಾಗದ ಡಿಎಸ್‌ಪಿ ಅಸ್ಲಂ ಪಾಷಾ ನೇತೃತ್ವದ ಎಂಟು ಅಧಿಕಾರಿಗಳ ತಂಡ ಬುಧವಾರ ರಾತ್ರಿಯೇ ಹೊಸಪೇಟೆಗೆ ಆಗಮಿಸಿತ್ತು.

ಹೊಸಪೇಟೆ: ಕತ್ತೆ ಮಾರಾಟ ಮಾಡಿ ಹಾಲು ಖರೀದಿಸುವ ಭರವಸೆ ನೀಡಿ ವಂಚಿಸಿದ್ದ ಜೆನ್ನಿ ಮಿಲ್ಕ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡದಿಂದ ಗುರುವಾರದಿಂದ ತನಿಖೆ ಆರಂಭವಾಗಿದೆ.

ಸಿಐಡಿ ಕಲಬುರಗಿ ವಿಭಾಗದ ಡಿಎಸ್‌ಪಿ ಅಸ್ಲಂ ಪಾಷಾ ನೇತೃತ್ವದ ಎಂಟು ಅಧಿಕಾರಿಗಳ ತಂಡ ಬುಧವಾರ ರಾತ್ರಿಯೇ ಹೊಸಪೇಟೆಗೆ ಆಗಮಿಸಿತ್ತು. ಗುರುವಾರ ಬೆಳಗ್ಗೆಯಿಂದಲೇ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು, ಹೊಸಪೇಟೆ ಪಟ್ಟಣ ಠಾಣೆಯ ಪೊಲೀಸರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಪಡೆದು ತನಿಖೆ ಆರಂಭಿಸಿದ್ದಾರೆ. ಇಲ್ಲಿನ ಪಟ್ಟಣ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಿಐಡಿ ತಂಡ, ಪ್ರಕರಣದ ಕಡತಗಳನ್ನು ಪಡೆದು ತನಿಖೆ ಆರಂಭಿಸಿದ್ದು, ಕತ್ತೆಗಳನ್ನು ಕಂಪನಿಯಿಂದ ಪಡೆದು, ರೈತರಿಗೆ ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿ ವಿತರಕರನ್ನು ಕರೆಸಿ, ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದ್ದಾರೆ.

ಬಳಿಕ ತಾಲೂಕಿನ ಗಾಳೆಮ್ಮ ಗುಡಿ ಸಮೀಪದ ಜಮೀನಿನಲ್ಲಿ ಕಂಪೆನಿಯ ಕತ್ತೆಗಳನ್ನು ಸಂಗ್ರಹಿಸಿಟ್ಟಿರುವ ಸ್ಥಳಕ್ಕೆ ತೆರಳಿ, ಕತ್ತೆಗಳನ್ನು ಖರೀದಿಸಿದ ರೈತರಿಂದ ಮಾಹಿತಿ ಪಡೆದಿದ್ದಾರೆ. ನಂತರ ಸೀಜ್ ಮಾಡಿದ್ದ ಜೆನ್ನಿ ಮಿಲ್ಕ್ ಕಚೇರಿ ತೆರೆದು ಪರಿಶೀಲನೆ ನಡೆಸಿದ್ದಾರೆ. ಇನ್ನು ಎಂಟು ದಿನಗಳ ಕಾಲ ಹೊಸಪೇಟೆಯಲ್ಲಿ ಇರಲಿರುವ ಸಿಐಡಿ ತಂಡ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ಪ್ರಮುಖ ಐವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ಸಿಐಡಿ ತಂಡ ತನಿಖೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಹೊಸಪೇಟೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ಗುರುವಾರದಿಂದ ತನಿಖೆ ಕೈಗೊಂಡಿದ್ದಾರೆ.