ವೀರಶೈವ ವಿದ್ಯಾವರ್ಧಕ ಸಂಘದ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ದೊಡ್ಡದು

| Published : Jun 09 2024, 01:39 AM IST

ವೀರಶೈವ ವಿದ್ಯಾವರ್ಧಕ ಸಂಘದ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ದೊಡ್ಡದು
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಈ ಕೊರತೆಯನ್ನು ನಿವಾರಣೆ ಮಾಡುವ ಜವಾಬ್ದಾರಿ ಭವಿಷ್ಯದ ಶಿಕ್ಷಕರ ಮೇಲಿದೆ

ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ದೊಡ್ಡದು ಎಂದು ವಿಧಾನಪರಿಷತ್ ಸದಸ್ಯ ಹಾಗೂ ವೀರಶೈವ ಸಮಾಜದ ಹಿರಿಯ ಮುಖಂಡ ವೈ.ಎಂ. ಸತೀಶ್ ಹೇಳಿದರು.

ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ದಾನಿಗಳ ದಿನಾಚರಣೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ದಾನಿಗಳ ದಾನವು ಅರ್ಥಪೂರ್ಣವಾಗಿ ಉಪಯೋಗ ಆಗಬೇಕು. ದಾನದ ಆಸ್ತಿಪಾಸ್ತಿಗಳನ್ನು ಸಂರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಸಂಘ ನೀಡುವ ಜವಾಬ್ದಾರಿಗಳನ್ನು ನಿರ್ವಹಿಸುವೆ ಎಂದರು.

ದೇಶದಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಈ ಕೊರತೆಯನ್ನು ನಿವಾರಣೆ ಮಾಡುವ ಜವಾಬ್ದಾರಿ ಭವಿಷ್ಯದ ಶಿಕ್ಷಕರ ಮೇಲಿದೆ. ಪ್ರಶಿಕ್ಷಣಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಬೋಧಿಸಲು ಆದ್ಯತೆ ನೀಡಬೇಕು. ಅಲ್ಲದೇ, ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಬೇಕು. ಯಾವುದೇ ವಿದ್ಯಾರ್ಥಿಯ ಭವಿಷ್ಯ ಶಿಕ್ಷಕರ ಮೇಲಿದೆ. ಗುಣಮಟ್ಟದ ಕಲಿಕೆಯಿಂದ ಮಾತ್ರ ಮಕ್ಕಳ ಜೀವನ ಉಜ್ವಲಗೊಳ್ಳಲು ಸಾಧ್ಯವಿದೆ. ವೀವಿ ಸಂಘದ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳು ಈ ಹಿಂದಿನಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದ್ದು, ಹೆಚ್ಚುತ್ತಿರುವ ಪೈಪೋಟಿ ನಡುವೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಹೇಮಕೂಟ ಶೂನ್ಯ ಸಿಂಹಾಸನದ ಕೊಟ್ಟೂರು ಶ್ರೀಬಸವಲಿಂಗ ಮಹಾಸ್ವಾಮಿ, ಪ್ರಶಿಕ್ಷಣಾರ್ಥಿಗಳು ತರಗತಿಯಲ್ಲಿ ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆಯನ್ನು ಸಾಧಿಸುವ ಕೌಶಲ್ಯಗಳನ್ನು ಕಲಿಯಲು ಆದ್ಯತೆ ನೀಡಬೇಕು. ಭವಿಷ್ಯಕ್ಕೆ ಬೇಕಾಗಿರುವ ಗುಣಮಟ್ಟದ ಶಿಕ್ಷಣ ಬೋಧನೆಗೆ ಪ್ರಶಿಕ್ಷಣಾರ್ಥಿಗಳು ತಾಳ್ಮೆ, ಸಂಯಮದ ಜೊತೆಯಲ್ಲಿ ದೇಶಕಟ್ಟುವ ಜವಾಬ್ದಾರಿ ನಿರ್ವಹಣೆ ಮಾಡಬೇಕು ಎಂದು ಆಶೀರ್ವಚನ ನೀಡಿದರು.

ಸ್ವಾತಂತ್ರ‍್ಯಪೂರ್ವದಿಂದಲೂ ಜಾತ್ಯತೀತವಾಗಿ ಶಿಕ್ಷಣ ಸೇವೆ ಸಲ್ಲಿಸಿ, ದೇಶವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ವೀರಶೈವ ವಿದ್ಯಾವರ್ಧಕ ಸಂಘ ಮತ್ತು ವೀರಶೈವ ಮಠಗಳು - ಸಂಸ್ಥೆಗಳು ಸಮರ್ಥವಾಗಿ ನಿರ್ವಹಿಸಿವೆ ಮತ್ತು ಈಗಲೂ ನಿರ್ವಹಿಸುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್‌, ದಾನಿಗಳು ನೀಡಿರುವ ದಾನವನ್ನು ಸಂರಕ್ಷಣೆ ಮಾಡಲು ಆದ್ಯತೆ ನೀಡಿ, ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಣೆ ಮಾಡಿ ದಾನವನ್ನು ಅರ್ಥಪೂರ್ಣವಾಗಿ ಸ್ಮರಿಸಲಾಗುತ್ತದೆ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಕೊಟ್ರಪ್ಪ ಮಾತನಾಡಿ, ದಾನಿಗಳ ದಾನದ ಕುರಿತು ಭವಿಷ್ಯದ ಪೀಳಿಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ದಾನಿಗಳ ದಿನಾಚರಣೆ ಅರ್ಥಪೂರ್ಣ ಆಚರಿಸಲ್ಪಡಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ವೀವಿ ಸಂಘದ ಶಿಕ್ಷಣ ಸಂಸ್ಥೆಗಳು ಎಲ್ಲ ಸಮುದಾಯಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ ಸಾರ್ಥಕ ಕೆಲಸ ಮಾಡಿವೆ ಎಂದು ಹೇಳಿದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ದರೂರು ಶಾಂತನಗೌಡ, ವೀರಶೈವ ವಿದ್ಯಾವರ್ಧಕ ಸಂಘ ಹುಟ್ಟಿ ಬೆಳೆದಿರುವುದೇ ದಾನಿಗಳ ನಿಸ್ವಾರ್ಥ ಸೇವೆಯಿಂದ. ದಾನಿಗಳ ನಿಸ್ವಾರ್ಥ ದಾನವನ್ನು ಸ್ಮರಿಸುವ ಮೂಲಕ ಅವರನ್ನು ಮತ್ತು ಅವರ ಸೇವೆಯನ್ನು ಸ್ಮರಿಸುವುದೇ ಅವರ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸಿದಂತೆ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಂದು ಡಾ. ಅರವಿಂದ ಪಾಟೀಲ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಜಾ ವಿಧಿಯನ್ನು ಬೋಧಿಸಿದರು.

ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್, ಖಜಾಂಚಿ ಬೈಲುವದ್ದಿಗೇರಿ ಎರ‍್ರಿಸ್ವಾಮಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ನರೇಂದ್ರಬಾಬು ಅವರು ಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿ ಅಮಿತ್ ಪ್ರಾರ್ಥನೆ ಸಲ್ಲಿಸಿದರು. ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸತೀಶ್ ಎ. ಹಿರೇಮಠ ಸ್ವಾಗತಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಶರಣಬಸವನಗೌಡ ಅವರು ಪ್ರಾಸ್ತಾವಿಕ ಮಾತನಾಡಿದರು. ಪ್ರಶಿಕ್ಷಣಾರ್ಥಿ ಭಾಗ್ಯಶ್ರೀ ಅವರು ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.