ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯಾದ್ಯಂತ ಕಳೆದ 3 ದಿನದಿಂದ ಸಂಜೆಯಾಗುತ್ತಿದ್ದಂತೆಯೇ ವರುಣಾಗಮನವಾಗುತ್ತ ಬಿರುಸಿನ ಮಳೆ ಸುರಿಯುತ್ತಿದೆ.ಏತನ್ಮಧ್ಯೆ ಹೀಗೆ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿಯೇ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮಳೆಯ ಮುನ್ಸೂಚನೆ ಪ್ರಕಾರ ಕಲಬುರಗಿಯಲ್ಲಿ ಜೂ.9ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲಾಡಳಿತ ವಿಪತ್ತು ತಂಡವನ್ನು ಸನ್ನದ್ಧವಾಗಿರುವಂತೆ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ. ಜನ ನದಿ , ಕೆರೆ, ನಾಲಾಗಳಲ್ಲಿ ಸಂಚಾರ ಮಾಡಬಾರದು. ಅದೇನೇ ಕೆಲಸಗಲಿದ್ದರೂ ಮಳೆ ಮುನ್ಸೂಚನೆ ಇರೋ ಕಾರಣ ಇಂತಹ ಸ್ಥಳಗಳಲ್ಲ ಸುಳಿಯದಂತೆ ಸೂಚಿಸಿದೆ.
ಏತನ್ಮಧ್ಯೆ ಶುಕ್ರವಾರ ಹಾಗೂ ಶನಿವಾರ ಸಂಜೆ ಸುರಿದ ಮಳೆಗೆ ಸೇಡಂ ಪಟ್ಟಣದಲ್ಲಿರುವ ಪೊಲೀಸ್ ಠಾಣೆಗೆ ನೀರು ನುಗ್ಗಿದೆ. ಇದರಿಂದಾಗಿ ಪೊಲೀಸ್ ಠಾಣೆ ಸಂಪೂರ್ಣ ಜಲಾವೃತಗೊಂಡು ದಾಖಲೆಗಳನ್ನು ರಕ್ಷಿಸಲು ಪೊಲೀಸ್ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಮಳೆಯ ಅರ್ಭಟಕ್ಕೆ ಠಾಣೆ ಆವರಣ ಮಾತ್ರವಲ್ಲದೇ ಠಾಣೆ ಒಳಗೂ ನೀರು ನುಗ್ಗಿದೆ. ಪೊಲೀಸ್ ಸಿಬ್ಬಂದಿ ನೀರು ಹೊರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಠಾಣೆ ಒಳಗೆ, ಹೊರಗೆ ಹೋಗಲು ಪೊಲೀಸ್ ಸಿಬ್ಬಂದಿ ಪರದಾಟ ನಡೆಸಿದ್ದಾರೆ.
ಪ್ರತಿ ಬಾರಿ ಭಾರೀ ಮಳೆ ಬಂದಾಗ ಠಾಣೆಗೆ ಮಳೆ ನೀರು ನುಗ್ಗುತ್ತದೆ. ತಗ್ಗು ಪ್ರದೇಶದಲ್ಲಿರುವ ಕಾರಣ ಮಳೆ ಬಂದಾಗ ನೀರು ನುಗ್ಗಿ ಪೊಲೀಸರಿಗೆ ಸಮಸ್ಯೆ ಉಂಟು ಮಾಡುವುದರಿಂದ ಕೆಲಸ ಮಾಡುವುದಕ್ಕೆ ಸಾಕಷ್ಟು ಸಮಸ್ಯೆಗಳು ಪೊಲೀಸರು ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಆಜರೆ ಈ ಪೊಲೀಸ್ ಠಾಣೆಯನ್ನ ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಮಾತ್ರ ಇದುವರೆಗೂ ನಡೆಯುತ್ತಿಲ್ಲ.ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು ಸೇಡಂ ಪೊಲೀಸ್ ಠಾಣೆ ಜಲಾವೃತವಾಗಿರುವ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡೋದು ಸಾಮಾನ್ಯವಾಗಿದೆ.
ಪಿಎಸ್‌ಐ, (ತನಿಖಾ) ಸಿಬ್ಬಂದಿ ವರ್ಗದವರು ಸರ್ಕಾರಿ ದಾಖಲಾತಿಗಳು ಸಂರಕ್ಷಣೆಗೆ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರೆ ಠಾಣೆ ವಿಚಾರದಲ್ಲಿ ತಾಲೂಕು ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಅದೆಷ್ಟು ಗಂಭೀರವಾಗಿದೆ ಎಂಬುದನ್ನು ಗಮನಿಸಬಹುದಾಗಿದೆ.ಸಾರ್ವಜನಿಕರ ಸೇವೆಗಾಗಿ ಶಾಂತಿ ನೆಮ್ಮದಿಗೆ ಮಹತ್ವ ನೀಡುವ ಜೊತೆಗೆ ಎಲ್ಲಾ ವ್ಯಾಪ್ತಿಯಲ್ಲಿ ಭದ್ರತೆ ಒದಗಿಸುವವರಿಗೆ ಮಳೆಗಾಲದಲ್ಲಿ ಭದ್ರತೆ ಇಲ್ಲದೆ ಬಳಲುವಂತಾಗಿದೆ. ಪೊಲೀಸ್ ಸಿಬ್ಬಂದಿ ಸೇಡಂನಲ್ಲಿ ಮಳೆಗಾಲದಲ್ಲ ಅದೆಷ್ಟು ವರ್ಷ ಪರದಾಡಬೇಕೋ ಎಂಬುದು ಗೊತ್ತಾಗದಂತಾಗಿದೆ.
ನೂತನ ಪೊಲೀಸ್ ಠಾಣೆ ನಿರ್ಮಾಣ ಮಾಡೋದಾಗಲಿ, ಕಟ್ಟಡ ಹೊಸ ಹಾಗೂ ಸುಭದ್ರ ಸ್ಥಳಕ್ಕೆ ಸ್ಥಳಾಂತರ ಮಾಡೋದಕ್ಕಾಗಲಿ ಯಾಕೆ ಇನ್ನೂ ಆಗುತ್ತಿಲ್ಲ ಎಂಬುದೇ ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಭರಿ ಮಳೆ ಸುರಿದಾಕ್ಷಣ ಇಲ್ಲಿನ ಪೊಲೀಸ್ ಠಾಣೆ ಒಳಗೆ ಅಕ್ಕಪಕ್ಕದ ರಸ್ತೆ, ಬಡಾವಣೆಗಳಲ್ಲಿರುವ ಚರಂಡಿ ನೀರು, ರಸ್ತೆಯಲ್ಲಿ ಹರಿಯೋ ಮಳೆ ನೀರು ತುಂಬ ಕೆಳಗಡೆ ಇರುವ ಸ್ಟೇಷನ್ ಒಳಗೆ ನುಗ್ಗಿ ದಾಖಲಾತಿಗಳು ನೀರು ಪಾಲಾಗುತ್ತಿವೆ.
ಸ್ಥಳೀಯ ಶಾಸಕ, ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅರಿಗೆ ಈ ಸಮಸ್ಯೆ ಗಮನಕ್ಕಿ್ದರೂ ಪರಿಹಾರ ಮಾತ್ರ ಇನ್ನೂ ದೊರಕದಂತಾಗಿದೆ. ಸಚಿವರು ತಕ್ಷಣ ಸೇಡಂ ಸಮಸ್ಯೆಯನ್ನ ಗೃಹ ಸಚಿವರಿಗೆ ಗಮನಕ್ಕೆ ತಂದು ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೆ ಹಾಗೂ ಸ್ಥಳಾಂತರಕ್ಕೆ ತಕ್ಷಣ ಮುಂದಾಗ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಹಳೆ ಎಸಿ ಕಚೇರಿ ಕಟ್ಟಡಕ್ಕೆ ಠಾಣೆ ಸ್ಥಳಾಂತರ ನನೆಗುಗಿದೆ: ಈ ಜಲಾವೃತಗೊಳ್ಳುವ ಠಾಣೆಯ ಪಕ್ಕದಲ್ಲಿ ಹಳೆ ಸಹಾಯಕ ಆಯುಕ್ತರ ಕಚೇರಿ ಖಾಲಿ ಇದೆ. ಪಾರ್ಕಿಂಗಗೂ ಇಲ್ಲಿ ವಿಶಾಲವಾದಂತಹ ಜಾಗ ಇದೆ. ಹಳೇ ಎಸಿ ಕಚೇರಿಯಲ್ಲಿ ಈ ಪೊಲೀಸ್ ಠಾಣೆ ಸ್ಥಳಾಂತರಿಸುವ ಸಂಬಂಧ ಚರ್ಚೆಗಳೂ ನಡೆದಿದ್ದವು. ಆದರೆ ಇಂದಿಗೂ ಈ ಕಾರ್ ಈಡೇರಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಇಲ್ಲಿಗೆ ಠಾಣೆ ಸ್ಥಾಂತರ ಮಾಡಿದರೆ ತೊಂದರೆಯೇ ಇರೋದಿಲ್ಲವೆಂದೂ ಹೇಳಲಾಗುತ್ತಿದ್ದರೂ ಈ ಕೆಲಸ ಯಾಕೆ ನನೆಗುದಿಗೆ ಬಿದ್ದಿದೆಯ ಗೊತ್ತಿಲ್ಲ.ಚರಂಡಿ ನೀರು ಸರಾಗವಾಗಿ ಹೋಗಲು ಕ್ರಮ ತೆಗೆದುಕೊಳ್ಳಲಾಗುವುದು, ಹಾಗೂ ಈ ಠಾಣೆಯ ಜಲಾವೃತ ಸಮಸ್ಯೆಯನ್ನ ಮೇಲಾಧಿಕಾರಿಗಳಿಗೆ , ಸಚಿವರ ಗಮನಕ್ಕೆ ತರಲಾಗುವುದು.
- ಆಶಪ್ಪ ಪೂಜಾರಿ, ಸಹಾಯಕ ಆಯುಕ್ತರು ಸೇಡಂ