83ರ ವಯಸಿನಲ್ಲೂ ಪಿಜಿ ಪರೀಕ್ಷಾ ಉತ್ಸಾಹ!

| Published : Jun 09 2024, 01:39 AM IST

ಸಾರಾಂಶ

ಈವರೆಗೆ ನಾಲ್ಕು ಸ್ನಾತಕೋತ್ತರ ಪದವಿ ಪಡೆದಿರುವ ಇಳಕಲ್ಲ ತಾಲೂಕಿನ ಗುಡೂರು ನಿವಾಸಿ ನಿಂಗಯ್ಯ ಒಡೆಯರ

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

83ರ ಇಳಿ ವಯಸ್ಸಿನಲ್ಲೂ ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿದ್ದಾರೆ. ನಿಂಗಯ್ಯ ಒಡೆಯರ ಎಂಬುವರು ಈ ಪರೀಕ್ಷೆ ಬರೆಯುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲಿ 5ನೇ ಸ್ನಾತ್ತಕೋತ್ತರ ಪದವಿ ಪರೀಕ್ಷೆ ಬರೆಯುವ ಮೂಲಕ ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲೂಕಿನ ಗುಡೂರ ನಿವಾಸಿ ನಿಂಗಯ್ಯ ಒಡೆಯರ ನಿವೃತ್ತಿಯ ಬಳಿಕವೂ ತಮ್ಮ ಸಾಧನೆ ಮುಂದುವರೆಸಿದ್ದಾರೆ. ನಾಲ್ಕು ಡಬಲ್ ಡಿಗ್ರಿ ಮಾಡಿರುವ ಈ ಹಿರಿಯ ಜೀವಿ ಇದೀಗ 5ನೇ ಇಂಗ್ಲಿಷ್ ಪಿಜಿ ಪರೀಕ್ಷೆ ಬರೆಯುತ್ತಿದ್ದಾರೆ.

ನಗರದ ಬಿಎಲ್‌ಡಿಇ ಸಂಸ್ಥೆಯ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ) ಕೇಂದ್ರ ಆಯೋಜಿಸಿರುವ ಎಂ.ಎ ಇಂಗ್ಲೀಷ್‌ ಪರೀಕ್ಷೆಗೆ 83 ವರ್ಷದ ಹಿರಿಯ ಜೀವಿ ನಿಂಗಯ್ಯ ಹಾಜರಾಗಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಆರೋಗ್ಯ ಇಲಾಖೆಯ ನಿವೃತ್ತ ನೌಕರನಾಗಿರುವ ನಿಂಗಯ್ಯ ಅವರು ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಈ ಮೂರು ಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದೀಗ ಇಗ್ನೋದಲ್ಲಿ (ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ) ಸಮಾಜ ಶಾಸ್ತ್ರದ ಪಿಜಿ ಪಡೆಯುವ ಮೂಲಕ ನಾಲ್ಕು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಈಗ ಇಂಗ್ಲಿಷ್‌ನಲ್ಲಿಯೂ ಪಿಜಿ ಪರೀಕ್ಷೆ ಬರೆಯುತ್ತಿದ್ದಾರೆ. ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿರುವ ಇವರು ಪರೀಕ್ಷಾ ಕೇಂದ್ರಕ್ಕೆ ಬಂದು 3ಗಂಟೆ ಒಂದೇ ಕಡೆ ಕುಳಿತು ಏಕಾಗ್ರತೆಯಿಂದ ಪರೀಕ್ಷೆ ಬರೆಯುತ್ತಿದ್ದರೆ, ಇನ್ನುಳಿದ ವಿದ್ಯಾರ್ಥಿಗಳು ಇವರನ್ನು ನೋಡಿ ಆಶ್ಚರ್ಯ ಚಕಿತರಾಗಿದ್ದರು.

ಪರೀಕ್ಷೆ ಬರೆದ ಹಿರಿಯರು:

ಜಿಲ್ಲೆಯ ಸಿಂದಗಿಯ 68 ವರ್ಷದ ನಿವೃತ್ತ ಪ್ರಾಧ್ಯಾಪಕ ಪಿ.ಎಂ.ಮಡಿವಾಳ ಹಾಗೂ ನಾಲ್ಕೈದು ವರ್ಷದಲ್ಲಿ ಸೇವಾ ನಿವೃತ್ತಿಯಾಗಲಿರುವ ಶಿವಮೊಗ್ಗದ 55 ವರ್ಷದ ಕಲಾ ಶಿಕ್ಷಕ ನಾಗನಗೌಡ ಪಾಟೀಲ ಸಹ ಇಂಗ್ಲಿಷ್ ಪಿಜಿ ಪರೀಕ್ಷೆ ಬರೆದು ಗಮನ ಸೆಳೆದರು.

ಜೂ.7ರಿಂದ ಜುಲೈ 15ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಇಲ್ಲಿ ಸರ್ಟಿಫಿಕೆಟ್ ಕೋರ್ಸ್‌ನಿಂದ ಹಿಡಿದು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕೋರ್ಸ್‌ಗಳು ಲಭ್ಯವಿವೆ. ಹಿರಿಯ ನಾಗರಿಕರೂ ಉತ್ಸಾಹದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಾವು 12 ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ಎರಡು ಜಿಲ್ಲೆಗಳು ನಮ್ಮ ಇಗ್ನೋ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಉತ್ಸಾಹದಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಗಮನಾರ್ಹವಾಗಿದೆ ಎಂದು ಇಗ್ನೊ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ರವಿಕಾಂತ ಕಮಲೇಕರ ತಿಳಿಸಿದರು.

ಅಭಿನಂದನೆಯ ಮಹಾಪುರ:

ಪರೀಕ್ಷೆಯ ಬಳಿಕ ಕಾಲೇಜಿನ ಪ್ರಾಚಾರ್ಯೆ ಮತ್ತು ಇಗ್ನೋ ಅಧ್ಯಯನ ಕೇಂದ್ರದ ಮೇಲ್ವಿಚಾರಕಿ ಡಾ.ಭಾರತಿ ಖಾಸನೀಸ್, ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ರವಿಕಾಂತ ಕಮಲೇಕರ, ಸಂಯೋಜಕ ಡಾ.ಮಂಜುನಾಥ ಕೋರಿ ಅವರು ಮಾದರಿಯಾದ ನಿಂಗಯ್ಯ ಒಡೆಯರ, ಪಿ.ಎಂ.ಮಡಿವಾಳ ಮತ್ತು ನಾಗನಗೌಡ ಪಾಟೀಲ ಅವರಿಗೆ ಶುಭಾಷಯ ಕೋರಿದರು.

----------------

ಕೋಟ್

ನಾನು 1956ರಲ್ಲಿ ಮೊದಲು ಶಾಲೆಗೆ ಸೇರಿ ಒಂದನೇ ತರಗತಿಯಲ್ಲಿ ಪರೀಕ್ಷೆ ಬರೆದಿದ್ದು. ಅದೇ ಉತ್ಸಾಹ ಈಗಲೂ ಇದೆ. ಹಲವು ಸಾಹಿತ್ಯ ರಚನೆ ಮಾಡಿದ್ದು, ಈಗಾಗಲೇ 15 ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ. ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತ ಸಾಹಿತ್ಯವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇನೆ.

- ನಿಂಗಯ್ಯ ಒಡೆಯರ, ಪರೀಕ್ಷೆ ಬರೆದವರು.

------------ಬಿಎಲ್‌ಡಿಇ ಸಂಸ್ಥೆಯಲ್ಲಿನ ಇಗ್ನೋ ಕೇಂದ್ರದಲ್ಲಿ 85, 65, 55 ವರ್ಷದ ಹಿರಿಯರು ಪರೀಕ್ಷೆ ಬರೆದಿದ್ದಾರೆ. ನಿವೃತ್ತ ನೌಕರರು ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ ಪರೀಕ್ಷೆ ಬರೆಯುತ್ತಿರುವುದು ನನಗೆ ಖುಷಿ ತಂದಿದೆ. ಯುವಕರಿಗೂ ಇವರು ಸ್ಪೂರ್ತಿಯಾಗಿದ್ದಾರೆ. ಅತೀ ಕಡಿಮೆ ಖರ್ಚಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಸರ್ಟಿಫಿಕೆಟ್ ಕೋರ್ಸ್‌ಗಳು ಇಲ್ಲಿವೆ. ಎಲ್ಲ ಸೌಲಭ್ಯಗಳು ಲಭ್ಯವಿದ್ದು, ಬಾಹ್ಯ ಪರೀಕ್ಷೆ ಬರೆಯುವವರಿಗೆ ಉತ್ತಮ ವಾತಾವರಣವಿದೆ.

- ಡಾ.ಮಂಜುನಾಥ ಕೋರಿ, ಇಗ್ನೋ ಅಧ್ಯಯನ ಕೇಂದ್ರದ ಸಂಯೋಜಕ.