ಪುಸ್ತಕೋದ್ಯಮಕ್ಕೂ ಪ್ರಾಶಸ್ತ್ಯ ನೀಡಬೇಕು

| Published : Jun 09 2024, 01:39 AM IST

ಸಾರಾಂಶ

, ಈ ಎಲ್ಲ ಕೃತಿಗಳು ಮನೋಜ್ಞ ಕಥೆಗಳ ಗುಚ್ಛ. ಇಲ್ಲಿ ಬರುವ ಪ್ರತಿ ಸಂಗತಿಗಳು ನಮ್ಮನ್ನು ಸ್ವಯಃವಿಮರ್ಶೆಗೆ ದೂಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರಗಳು ಕೃಷಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪುಸ್ತಕೋದ್ಯಮಕ್ಕೂ ನೀಡಬೇಕು ಎಂದು ಖ್ಯಾತ ವಿಮರ್ಶಕ, ಅನುವಾದಕ ಪ್ರೊ.ಡಿ.ಎ.ಶಂಕರ್ ಆಗ್ರಹಿಸಿದರು.

ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ ಮತ್ತು ಕನ್ನಡ ಸಾಹಿತ್ಯದ ಕಲಾಕೂಟವು ಶನಿವಾರ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ತಮ್ಮ ಮೂರು ಕೃತಿಗಳ ಬಿಡುಗಡೆ ಹಾಗೂ 88ನೇ ಜನ್ಮದಿನದ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮನುಷ್ಯ ಬದುಕಲು ಅನ್ನಬೇಕು ನಿಜ. ಆದರೆ ಅನ್ನವೊಂದೇ ಜೀವನಲ್ಲ. ಅನ್ನದ ಜೊತೆಗೆ ವಿವೇಕ, ಸಂತೋಷವೂ ಬೇಕು. ಸೃಜನಶೀಲ ಮನಸ್ಸುಗಳು ಸೃಷ್ಟಿಸುವ ಸಾಹಿತ್ಯವನ್ನು ಜನರಿಗೆ ತಲುಪಿಸಿದಾಗ ಆರೋಗ್ಯವಂತ ಸಮಾಜವೂ ನಿರ್ಮಾಣವಾಗುತ್ತದೆ ಎಂದರು.

ಪುಸ್ತಕೋದ್ಯಮ ಒಂದು ರೀತಿಯಲ್ಲಿ ಆಹಾರ ಸರಪಳಿ ಇದ್ದಂತೆ. ಓದುಗ ಮತ್ತು ಲೇಖಕನ ಮಧ್ಯೆ ಸಂಪರ್ಕಕ್ಕೆ ಪ್ರಕಾಶಕ ಮುಖ್ಯವಾಗುತ್ತದೆ. ಲೇಖಕ ಬರೆದರೂ ಪ್ರಕಾಶಕ ಮುದ್ರಿಸದಿದ್ದಲ್ಲಿ ಅದು ಓದುಗನನ್ನು ತಲುಪುದಿಲ್ಲ. ಆದ್ದರಿಂದ ಸರ್ಕಾರಗಳು ಪುಸ್ತಕೋದ್ಯಮಕ್ಕೆ ನೀಡುವ ಅನುದಾನವನ್ನು ದಾನ ಎಂದು ತಿಳಿಯದೇ ಕರ್ತವ್ಯ ಎಂದು ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಸಮುದಾಯದ ಮನಸ್ಸು ಚೆನ್ನಾಗಿದ್ದರೆ ಒಳ್ಳೆಯ ಸರ್ಕಾರಗಳು ಬರುತ್ತವೆ. ಆದ್ದರಿಂದ ಜನರಿಗೆ ಸೃಜನಶೀಲ ಕೃತಿಗಳು ತಲುಪುವಂತೆ ಮಾಡಬೇಕು ಎಂದು ಅವರು ಹೇಳಿದರು.

ಪ್ರೊ.ಡಿ.ಎ. ಶಂಕರ್ ಅವರ ಡಾಕ್ಟರ್ ಫಾಸ್ಟಸ್, ಸಾಕ್ಷಿ ಬೇಡದ ಮದುವೆ ಮತ್ತು ಬೆನ್ನೇರಿದ ಭೂತ, ಮಹಾಭಾರತದ ಹತ್ತು ಮನೋಜ್ಞ ಕಥೆಗಳು- ಕೃತಿಗಳನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆಗೊಳಿಸಿದರು.

ಮನೋಜ್ಞ ಕಥೆಗಳು- ಪ್ರೊ.ಮೊರಬದ ಶ್ಲಾಘನೆ

ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ಕೃತಿಗಳ ಕುರಿತು ಮಾತನಾಡಿ, ಈ ಎಲ್ಲ ಕೃತಿಗಳು ಮನೋಜ್ಞ ಕಥೆಗಳ ಗುಚ್ಛ. ಇಲ್ಲಿ ಬರುವ ಪ್ರತಿ ಸಂಗತಿಗಳು ನಮ್ಮನ್ನು ಸ್ವಯಃವಿಮರ್ಶೆಗೆ ದೂಡುತ್ತದೆ. ಮಾನವ ವಿವೇಕವನ್ನು ಒರೆಗಲ್ಲಿಗೆ ಹಚ್ಚುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ ಎಂದರು.

ಡಾಕ್ಟರ್ ಫಾಸ್ಟಸ್ ಒಂದು ಅನುವಾದಿತ ದುರಂತ ನಾಟಕವಾಗಿದ್ದು, ಬದುಕಿನಲ್ಲಿ ಆಯ್ಕೆಗಳ ಮಹತ್ವವನ್ನು ತಿಳಿಸುತ್ತದೆ. ಮಹಾಭಾರತದ ಕಥೆಗಳು ನ್ಯಾಯ, ಧರ್ಮ ಸೂಕ್ಷ್ಮತೆಯನ್ನು ತಿಳಿಸುತ್ತದೆ. ಮಹಾಭಾರತದ ಹತ್ತು ಮನೋಜ್ಞ ಕಥೆಗಳಲ್ಲಿ ಮುಖ್ಯಪಾತ್ರಗಳನ್ನು ಹೊರತುಪಡಿಸಿ, ಪರೀಕ್ಷಿತ, ಯಯಾತಿ, ಯಕ್ಷಪ್ರಶ್ನೆ ಮೊದಲಾದವು ಗಮನ ಸೆಳೆಯುತ್ತವೆ ಎಂದರು.

ಬೆನ್ನೇರಿದ ಭೂತ ಕೃತಿಯೂ ನಮ್ಮನ್ನು ಆವರಿಸಿದ ದುಶ್ಚಟಗಳು ಮತ್ತು ಅದುಜೀವನದಲ್ಲಿ ತರಬಹುದಾದ ಸಂಕಷ್ಟವನ್ನು ತಿಳಿಸಿ ನಮ್ಮನ್ನು ಎಚ್ಚರಿಸುತ್ತದೆ. ಹವ್ಯಾಸಕ್ಕೆ ಪ್ರವೇಶ ಸುಲಭ, ದುಷ್ಟಕೂಟದಿಂದ ಹೊರಬರುವುದು ಕಷ್ಟ ಎಂಬುದನ್ನು ನಿರೂಪಿಸುತ್ತದೆ. ಇಂದು ಅಮಲು ಅನಿವಾರ್ಯ, ಅದಿಲ್ಲದಿದ್ದರೆ ಆಡಳಿತ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಕನ್ನಡ ಸಾಬಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು. ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ ವಂದಿಸಿದರು. ವಿಶ್ರಾಂತ ಕುಲಪತಿ ಪ್ರೊ.ಮಹದೇವ, ಸಾಹಿತಿಗಳಾದ ಪ್ರೊ.ವಿಕ್ರಂ ಚದುರಂಗ, ವಿಜಯಲಕ್ಷ್ಮಿ ಅರಸ್, ಪ್ರೊ.ನೀ. ಗಿರಿಗೌಡ, ಅಣ್ಣಾಜಿಗೌಡ, ಕ್ಯಾತನಹಳ್ಳಿ ರಾಮಣ್ಣ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್, ಪ್ರಕಾಶಕ ನಿಂಗರಾಜು ಚಿತ್ತಣ್ಣನವರ್ ಮೊದಲಾದವರು ಭಾಗವಹಿಸಿದ್ದರು.