ಪಾರಂಪರಿಕ ವೈದ್ಯ ಪದ್ಧತಿ ಉಳಿಸಲು ತರಬೇತಿ ಕೇಂದ್ರ ಪ್ರಾರಂಭ: ಪ್ರಸನ್ನನಾಥ ಸ್ವಾಮೀಜಿ

| Published : Jun 09 2024, 01:39 AM IST

ಪಾರಂಪರಿಕ ವೈದ್ಯ ಪದ್ಧತಿ ಉಳಿಸಲು ತರಬೇತಿ ಕೇಂದ್ರ ಪ್ರಾರಂಭ: ಪ್ರಸನ್ನನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ತರಬೇತಿ ಶಿಬಿರದಲ್ಲಿ ಪಾರಂಪರಿಕ ವೈದ್ಯ ಜ್ಞಾನವಿರುವ ನುರಿತ ವೈದ್ಯರಿಂದ ಪ್ರಾಯೋಗಿಕವಾಗಿ ಗಿಡಮೂಲಿಕೆಗಳಿಂದ ಔಷಧಿ ತಯಾರಿಸುವ ವಿಧಾನಗಳನ್ನು ಪರಿಚಯಿಸಲಾಗಿದೆ. ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಶ್ರೀ ಕ್ಷೇತ್ರದಲ್ಲಿ ಪಾರಂಪರಿಕ ವೈದ್ಯರ ಗುರು- ಶಿಷ್ಯ ಪರಂಪರೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪಾರಂಪರಿಕ ವೈದ್ಯ ಪರಿಷತ್‌ನ ಗೌರವಾಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಶ್ರೀ ಕ್ಷೇತ್ರದ ತಪೋವನದಲ್ಲಿ 10 ದಿನಗಳ ಕಾಲ ನಡೆದ ಗುರು- ಶಿಷ್ಯ ಪರಂಪರೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಮೊದಲ ತರಬೇತಿ ಶಿಬಿರದಲ್ಲಿ ಪಾರಂಪರಿಕ ವೈದ್ಯ ಜ್ಞಾನವಿರುವ ನುರಿತ ವೈದ್ಯರಿಂದ ಪ್ರಾಯೋಗಿಕವಾಗಿ ಗಿಡಮೂಲಿಕೆಗಳಿಂದ ಔಷಧಿ ತಯಾರಿಸುವ ವಿಧಾನಗಳನ್ನು ಪರಿಚಯಿಸಲಾಗಿದೆ. ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ಈ ಮೊದಲು ಆರು ತಿಂಗಳಿಗೊಮ್ಮೆ ಈ ತರಬೇತಿ ಶಿಬಿರ ಪ್ರಾರಂಭಿಸಬೇಕೆಂದು ಉದ್ದೇಶಿಸಲಾಗಿತ್ತು. ಆದರೆ, ಶಿಬಿರದ ಯಶಸ್ಸು ನೋಡಿದಾಗ ಮುಂದಿನ ದಿನಗಳಲ್ಲಿ 50 ಜನರನ್ನೊಳಗೊಂಡ ತರಬೇತಿ ಶಿಬಿರವನ್ನು ಮೂರು ತಿಂಗಳಿಗೊಮ್ಮೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಪರಿಷತ್ತಿನ ಪದಾಧಿಕಾರಿಗಳ ಆಶಯದಂತೆ ಶ್ರೀ ಕ್ಷೇತ್ರದ ತಪೋವನಂನಲ್ಲಿ ಧನ್ವಂತರಿ ವನವನ್ನು ನಿರ್ಮಿಸಿ ಎಲ್ಲಾ ರೀತಿಯ ಔಷಧಿ ಸಸ್ಯಗಳು ಇಲ್ಲೇ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು.

ಪರಿಷತ್ತಿನ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ಮಾತನಾಡಿ, ಶಿಬಿರದಲ್ಲಿ ತಾವು ಕಲಿತಿರುವ ವಿದ್ಯೆಯನ್ನು ಇನ್ನೊಬ್ಬರಿಗೆ ತಿಳಿಸಿ ಪಾರಂಪರಿಕ ವೈದ್ಯ ಪದ್ಧತಿ ಜೀವಂತವಾಗಿರುವಂತೆ ಮಾಡಬೇಕು. ಶಿಬಿರಾರ್ಥಿಗಳು ಮುಂದಿನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಇನ್ನೊಬ್ಬರಿಗೆ ವೈದ್ಯಪದ್ಧತಿಯನ್ನು ತಿಳಿಸಬೇಕು ಎಂದು ಹೇಳಿದರು.

ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಮಾತನಾಡಿ, ಶಿಬಿರದಲ್ಲಿ ವೈದ್ಯರ ಜ್ಞಾನವನ್ನು ತಿಳಿದುಕೊಂಡಿದ್ದೀರಿ. ಶ್ರೀಮಠದ ಸಹಕಾರ ಮತ್ತು ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಆಶೀರ್ವಾದದಿಂದ ಶಿಬಿರ ಯಶಸ್ವಿಯಾಗಿದೆ ಎಂದರು.

ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಮಾತನಾಡಿ, ಎಲ್ಲರ ಸಹಕಾರದಿಂದ ಶಿಬಿರ ಯಶಸ್ಸು ಕಂಡಿದೆ. ರಾಜ್ಯದ ಹಲವು ಭಾಗಗಳ ಪಾರಂಪರಿಕ ವೈದ್ಯರು ಮುಂದಿನ ತರಬೇತಿ ಶಿಬಿರಕ್ಕೆ ನೋಂದಣಿ ಮಾಡಿಸಿಕೊಳ್ಳುವ ಆತುರತೆಯಲ್ಲಿದ್ದಾರೆ. ಮುಂದಿನ ತರಬೇತಿ ಶಿಬಿರವನ್ನು ಶ್ರೀಕ್ಷೇತ್ರದಲ್ಲಿಯೇ ಆಯೋಜಿಸಲಾಗುವುದು ಎಂದು ತಿಳಿಸಿದರು.

ತರಬೇತಿ ಪಡೆದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಸನ್ನನಾಥ ಶ್ರೀಗಳು ಪ್ರಮಾಣಪತ್ರ ವಿತರಿಸಿದರು. ಪರಿಷತ್ತಿನ ಖಜಾಂಚಿ ಶಿವಾನಂದ ಜಿಂಗಿನ ಮಠ, ವೈದ್ಯ ರತ್ನ ಗೋಪಾಲಕೃಷ್ಣ ಸೇರಿ ಪಾರಂಪರಿಕ ವೈದ್ಯರು ಹಾಗೂ ಶಿಬಿರಾರ್ಥಿಗಳು ಇದ್ದರು.