ಸಾರಾಂಶ
ಮದ್ಯದಂಗಡಿ ತೆರೆಯಲು ಅನುಮತಿ ಕೊಡಬಾರದೆಂದು ಒತ್ತಾಯಿಸಿ ಗುರುವಾರ ತುಮಕೂರಿನ ವೆಂಕಟೇಶಪುರದ ನಾಗರಿಕ ಮುಖಂಡರು ಜಿಲ್ಲಾಧಿಕಾರಿ ಹಾಗೂ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮುಖಂಡರಿಂದ ಜಿಲ್ಲಾಧಿಕಾರಿ - ಅಬಕಾರಿ ಉಪ ಆಯುಕ್ತರಿಗೆ ಪತ್ರ
ಕನ್ನಡಪ್ರಭ ವಾರ್ತೆ ತುಮಕೂರುನಗರದ 2ನೇ ವಾರ್ಡಿನ ಶಿರಾ ಗೇಟ್‌ನ ವೆಂಕಟೇಶಪುರದಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ಕೊಡಬಾರದೆಂದು ಒತ್ತಾಯಿಸಿ ಗುರುವಾರ ವೆಂಕಟೇಶಪುರದ ನಾಗರಿಕ ಮುಖಂಡರು ಜಿಲ್ಲಾಧಿಕಾರಿ ಹಾಗೂ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಳಿಕ 2ನೇ ವಾರ್ಡ್‌ನ ಬಿಜೆಪಿ ಮುಖಂಡ ಎನ್.ವೆಂಕಟೇಶಾಚಾರ್ ಮಾತನಾಡಿ, ಜನವಸತಿ ಪ್ರದೇಶವಾದ ವೆಂಕಟೇಶಪುರದಲ್ಲಿ ಈ ಮೊದಲು ಮದ್ಯದ ಅಂಗಡಿ ಇತ್ತು. ಮದ್ಯ ಸೇವನೆಗೆಂದು ಇಲ್ಲಿಗೆ ಬರುತ್ತಿದ್ದ ಕುಡುಕರ ಉಪಟಳಗಳಿಂದ ನಾಗರಿಕರು ರೋಸಿಹೋಗಿದ್ದರು. ಮದ್ಯದ ಅಂಗಡಿಗೆ ಬಂದವರು ಇಲ್ಲಿನ ಖಾಲಿ ನಿವೇಶನಗಳಲ್ಲಿ ಕುಳಿತು ಮದ್ಯ ಸೇವನೆ, ಮಾದಕ ಪದಾರ್ಥಗಳ ಸೇವನೆ ಮಾಡುತ್ತಾ ಗಲಾಟೆ ಮಾಡಿಕೊಂಡು ಸಾರ್ವಜನಿಕರಿಗೆ ನಿತ್ಯ ತೊಂದರೆ ಮಾಡುತ್ತಿದ್ದರು. ಈ ಬಗ್ಗೆ ಹಲವಾರು ಬಾರಿ ಪೊಲೀಸರಿಗೆ ಜನ ದೂರು ನೀಡಿದ್ದರು ಎಂದು ಹೇಳಿದರು.ಮದ್ಯ ಸೇವನೆ, ಮಾದಕ ವ್ಯಸನಿಗಳ ಅಡ್ಡೆಯಾಗಿದ್ದ ಈ ಪ್ರದೇಶದಲ್ಲಿ ಅಪರಾಧ ಮತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ಸಾರ್ವಜನಿಕರ ಒತ್ತಾಯದ ಮೇರೆಗೆ ಅಧಿಕಾರಿಗಳು ಇಲ್ಲಿದ್ದ ಮದ್ಯದ ಅಂಗಡಿ ಸ್ಥಳಾಂತರ ಮಾಡಿದ ಮೇಲೆ ಶಾಂತಿ ನೆಲೆಸಿದೆ. ಮತ್ತೆ ಇಲ್ಲಿ ಮದ್ಯದಂಗಡಿ ತೆರೆಯುವ ಪ್ರಯತ್ನ ನಡೆಯಬಹುದು. ಅಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಗೋಕುಲ್ ಮಂಜುನಾಥ್ ಮಾತನಾಡಿ, ವೆಂಕಟೇಶಪುರ ಸಮೀಪದಲ್ಲಿ ಎಪಿಎಂಸಿ ಮಾರುಕಟ್ಟೆ, ದೇವಸ್ಥಾನಗಳು ಇವೆ. ಇಲ್ಲಿಗೆ ಬರುವ ಸಾರ್ವಜನಿಕರು ಕುಡುಕರ ಗಲಾಟೆ, ಅತಿರೇಕದ ವರ್ತನೆಗಳು ಕಿರಿಕಿರಿ ಅನುಭವಿಸುತ್ತಿದ್ದರು. ಮಕ್ಕಳು, ಹೆಣ್ಣುಮಕ್ಕಳು ಓಡಾಡಲು ಭಯಪಡುವ ಪರಿಸ್ಥಿತಿ ಇತ್ತು. ಅಪರಾಧ ಕೃತ್ಯಗಳೂ ಹೆಚ್ಚಾಗಿದ್ದವು. ಇದೇ ಕಾರಣಕ್ಕೆ ಮದ್ಯದ ಅಂಗಡಿಯನ್ನು ಸ್ಥಳಾಂತರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಾಗರಿಕರು ಮನವಿ ಮಾಡಿದ್ದರ ಫಲವಾಗಿ ಅಂಗಡಿಯನ್ನು ಎತ್ತಂಗಡಿ ಮಾಡಲಾಗಿತ್ತು. ಮತ್ತೆ ಇಲ್ಲಿ ಮದ್ಯದಂಗಡಿ ತೆರೆಯುವ ಪ್ರಯತ್ನ ನಡೆಯಬಹುದು. ಆಧಿಕಾರಿಗಳು ಇದಕ್ಕೆ ಅವಕಾಶ ನೀಡದೆ ನಾಗರಿಕರು ಶಾಂತಿ, ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾ ಕುಮಾರ್, ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ಕೊಪ್ಪಳ್ ನಾಗರಾಜು, ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ರಾಘವೇಂದ್ರ, ರಫಿಕ್ ಅಹ್ಮದ್, ದತ್ತಾತ್ರೇಯ, ಇಮ್ರಾನ್ ಅಹ್ಮದ್ ಮತ್ತಿತರು ಇದ್ದರು.