ಬಸವರಾಜ ಹಿರೇಮಠ
ಧಾರವಾಡ:ಜಿಲ್ಲೆಯ ಜನತೆಗೆ ಅದರಲ್ಲೂ ನವಲಗುಂದ ತಾಲೂಕು ಜನರ ಬಹು ದಶಕಗಳ ಬೆಣ್ಣಿಹಳ್ಳದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಸಮಯ ಸಮೀಪಿಸುತ್ತಿದೆ. ಬೆಣ್ಣಿಹಳ್ಳದ ಅಭಿವೃದ್ಧಿ ಮತ್ತು ಹೂಳೆತ್ತುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ಪ್ರತಿ ಮಳೆಗಾಲದಲ್ಲಿ ಬೆಂಬಿಡದೇ ಕಾಡುತ್ತಿದ್ದ ಬೆಣ್ಣಿಹಳ್ಳದ ಪ್ರವಾಹದ ಭಯ ಇನ್ನಿಲ್ಲ!
ಕಳೆದ ಫೆಬ್ರವರಿಯಿಂದ ಅಭಿವೃದ್ಧಿ ಕಾಮಗಾರಿ ಶುರುವಾಗಿದ್ದು, ಸದ್ಯ ಶೇ. 60ರಷ್ಟು ಮುಕ್ತಾಯವಾಗಿದೆ. ಯಮನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹಳ್ಳದಲ್ಲಿಯ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿದ್ದು, ಹೂಳನ್ನು ಸಹ ತೆಗೆಯಲಾಗಿದೆ. ಇದರಿಂದಾಗಿ ಹಳ್ಳದಲ್ಲಿ ಈ ಬಾರಿ ಮಳೆಗೆ ನೀರು ಸರಾಗವಾಗಿ ಹರಿದು ಹೋಗಲಿದೆ. ಅಕ್ಕಪಕ್ಕದ ಗ್ರಾಮಗಳು ಹಾಗೂ ಹೊಲಗಳಿಗೆ ನೀರು ನುಗ್ಗುವ ಸಾಧ್ಯತೆ ಈ ಬಾರಿ ತೀರಾ ಕಡಿಮೆ ಎಂದು ಕಾಮಗಾರಿ ನಡೆಸುತ್ತಿರುವ ಎಂಜಿನಿಯರ್ ಭರವಸೆ ನೀಡುತ್ತಾರೆ.ಏನೇನು ಕಾಮಗಾರಿ?:
ಮೊದಲನೇ ಹಂತದ ಕಾಮಗಾರಿಯಲ್ಲಿ ಬೆಣ್ಣಿಹಳ್ಳದ 60 ಕಿಮೀಯಿಂದ 125 ಕಿಮೀ ವರೆಗೆ ಅತಿ ಅವಶ್ಯಕ ಸ್ಥಳದಲ್ಲಿ 1.05 ಕಿಮೀ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ. 6.15 ಕಿಮೀ ಏರಿ ನಿರ್ಮಾಣ, ಅತಿ ಅವಶ್ಯಕವಾಗಿರುವ 86 ಸ್ಥಳಗಳಲ್ಲಿ ಹೊಲದಲ್ಲಿನ ನೀರು ಹಳ್ಳವನ್ನು ಸೇರುವ ಇನ್‌ಲೆಟ್ ನಿರ್ಮಾಣ, ಉಪಹಳ್ಳ ಸೇರುವ ದೇಸಾಯಿಹಳ್ಳ, ಗುಂಡೇನಹಳ್ಳ ಮತ್ತು ಹಂದಿಗನಹಳ್ಳಗಳಲ್ಲಿ 500 ಮೀಟರ್ ಹೂಳೆತ್ತುವ ಕಾಮಗಾರಿ ನಡೆಯುತ್ತಿವೆ. ಏಳು ಕಡೆಗಳಲ್ಲಿ ರಸ್ತೆ ಸೇತುವೆಗಳ ನಿರ್ಮಾಣ, 2 ಕಡೆಗಳಲ್ಲಿ ಜಲಸಂಗ್ರಹಾಗಾರ ನಿರ್ಮಿಸಲು ಯೋಚಿಸಲಾಗಿದೆ.
ಸ್ನಾನಘಟ್ಟ ನಿರ್ಮಾಣ:
ಇನ್ನು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸೇರುವ ಯಮನೂರು ಗ್ರಾಮದಲ್ಲಿ ಭಕ್ತರಿಗಾಗಿ 150 ಮೀಟರ್ ಉದ್ದದ ಸ್ನಾನಘಟ್ಟ ನಿರ್ಮಾಣ ಮಾಡಲು ಯೋಚಿಸಲಾಗಿದೆ. ಈ ಎಲ್ಲ ಕಾಮಗಾರಿಗಳಿಂದ ಧಾರವಾಡ ಹಾಗೂ ಗದಗ ಜಿಲ್ಲೆಗಳ 37 ಹಳ್ಳಿಗಳಲ್ಲಿನ ಪ್ರವಾಹ ತಡೆದಂತಾಗುತ್ತದೆ. ಜತೆಗೆ 20 ಸಾವಿರ ಹೆಕ್ಟೇರ್ ಪ್ರದೇಶ ಪ್ರವಾಹದಿಂದ ಮುಕ್ತವಾಗುತ್ತದೆ ಎಂಬುದು ತಜ್ಞರ ಲೆಕ್ಕಾಚಾರ.ಧಾರವಾಡ, ಗದಗ ಜಿಲ್ಲೆಗಳನ್ನು ನಡುಗಿಸುತ್ತಿದ್ದ ಈ ಹಳ್ಳದ ಹಾವಳಿಗೆ 37 ಹಳ್ಳಿಗಳು ನರಕಯಾತನೆ ಅನುಭವಿಸುತ್ತಿವೆ. ಬೆಣ್ಣಿಹಳ್ಳ- ತುಪರಿಹಳ್ಳಗಳಿಂದ 22 ಟಿಎಂಸಿಗೂ ಅಧಿಕ ನೀರು ಪ್ರತಿವರ್ಷ ವ್ಯರ್ಥವಾಗಿ ಹರಿದುಹೋಗುತ್ತದೆ. ಈ ನೀರನ್ನು ಬಳಕೆ ಮಾಡಬೇಕು. ಜತೆಗೆ ಇಲ್ಲಿನ ಪ್ರವಾಹವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂಬ ಹಲವಾರು ವರ್ಷಗಳ ಬೇಡಿಕೆಗೆ ಇದೀಗ ಪರಿಹಾರ ಸಿಗುತ್ತಿದೆ ಎಂದು ರೈತರು ಸಹ ನಿಟ್ಟುಸಿರುವ ಬಿಡುತ್ತಿದ್ದಾರೆ. ಅನಾಹುತ ಒಂದೆರಡಲ್ಲ:
ಬೆಣ್ಣಿ ಹಳ್ಳದ ಹೆಸರು ಕೇಳಿದರೆ ಸಾಕು ನವಲಗುಂದ, ಕುಂದಗೋಳ ಹಾಗೂ ಅಣ್ಣಿಗೇರಿ ತಾಲೂಕುಗಳ ರೈತರು ಬೆಚ್ಚಿ ಬೀಳುತ್ತಾರೆ. ಮಳೆಗಾಲದಲ್ಲಿ ಈ ಹಳ್ಳವು ಸೃಷ್ಟಿಸುವ ಅನಾಹುತಗಳು ಒಂದೆರಡಲ್ಲ. ಹೀಗಾಗಿ ಈ ಹಳ್ಳದ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ರೈತರು ಹತ್ತಾರು ವರ್ಷಗಳಿಂದ ಬೇಡಿಕೆ ಇಡುತ್ತಲೇ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಪ್ರವಾಹದ ಭಯ ಬೇಡ:ಬೆಣ್ಣಿಹಳ್ಳದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸುಮಾರು ಒಂದೂವರೆ ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆ ಹೊಂದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭಿಕವಾಗಿ ₹200 ಕೋಟಿ ಬಿಡುಗಡೆ ಮಾಡಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಹಳ್ಳದ ಎರಡು ಬದಿ ಗಿಡ-ಕಂಟಿ ತೆರವುಗೊಳಿಸಿದ್ದು ಈ ಬಾರಿ ರೈತರಿಗೆ ಪ್ರವಾಹದ ಭಯ ಬೇಡ.
ಎನ್.ಎಚ್. ಕೋನರಡ್ಡಿ, ಶಾಸಕರು, ನವಲಗುಂದ ಕ್ಷೇತ್ರ