ಅಪರಿಚಿತರಿಂದ ಬ್ಲಾಕ್‌ಮೇಲ್‌ ಆದಾಗ ಧೈರ್ಯಗೆಡಬೇಡಿ

| Published : Nov 04 2025, 12:00 AM IST

ಅಪರಿಚಿತರಿಂದ ಬ್ಲಾಕ್‌ಮೇಲ್‌ ಆದಾಗ ಧೈರ್ಯಗೆಡಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರದ ಎಲ್ಲಾ ಕಚೇರಿಗಳು ತೆರೆದ ಮನೆಯಾಗಬೇಕು. ಇದೇ ಉದ್ದೇಶದಿಂದ ಪೊಲೀಸ್ ಠಾಣೆಯಲ್ಲಿ "ತೆರೆದ ಮನೆ ಯೋಜಿತ ಕಾರ್ಯಕ್ರಮ " ಪ್ರಾರಂಭವಾಗಿದೆ. ಸ್ಥಳೀಯ ಶಾಲೆಗಳಿಗೆ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಪೊಲೀಸ್ ಠಾಣೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರ ಕಂಡರೆ ಭಯಪಡದಂತೆ ಮಾಹಿತಿ ನೀಡುತ್ತಿದ್ದಾರೆ ಎಂದರು. ನಿಮ್ಮ ಗ್ರಾಮಗಳಲ್ಲಿ ರಸ್ತೆ, ನೀರು, ಚರಂಡಿ ಇತರೆ ಸಮಸ್ಯೆಗಳು ಇದ್ದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಅಪರಿಚಿತ ವ್ಯಕ್ತಿಗಳಿಂದ ಬ್ಲಾಕ್‌ಮೇಲ್‌ಗೆ ಒಳಗಾದಾಗ ಧೈರ್ಯ ಕಳೆದುಕೊಳ್ಳದೆ, ತಂದೆ ತಾಯಿಗೆ ತಿಳಿಸಬೇಕು. ನಂತರ ಪೊಲೀಸ್ ಠಾಣೆಗೆ ದೂರು ನೀಡಿ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಸಲಹೆ ನೀಡಿದ್ದಾರೆ.

ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ "ವಿದ್ಯಾರ್ಥಿಗಳೊಂದಿಗೆ ಸಂವಾದ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಠಾಣೆ ಮೇಲೆ ತವರು ಮನೆಗಿಂತ ಹೆಚ್ಚು ನಂಬಿಕೆ ಇಡಬೇಕು. ಸಮಸ್ಯೆಯಾದಾಗ ತಂದೆ ತಾಯಿಗಿಂತ ಮೊದಲು ಪೊಲೀಸ್ ಬರುತ್ತಾರೆ. ಆದ್ದರಿಂದ ಎಲ್ಲರೂ ಸಹಾಯವಾಣಿಯನ್ನು ತಮ್ಮ ಮೊಬೈಲ್‌ನಲ್ಲಿ, ಸೇವ್ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎಂದರು.ಹಾಸನ ಜಿಲ್ಲೆ ಕರ್ನಾಟದಲ್ಲಿ ಪ್ರಸಿದ್ಧವಾದ ಜಿಲ್ಲೆ. ದೇಶಕ್ಕೆ ಕರ್ನಾಟಕದಿಂದ ಪ್ರಧಾನಮಂತ್ರಿಯವರನ್ನು ಕೊಟ್ಟ ಜಿಲ್ಲೆ. ಹಾಸನದ ಹೆಣ್ಣು ಮಕ್ಕಳು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬೇಕು. ಹಾಗಾಗಿ ನಾನು ಬಂದ್ದಿದ್ದೇನೆ ಎಂದರು. ನಮ್ಮ ಊರಿಗೆ ನಾನೇ ಮೊದಲ ವಿದ್ಯಾವಂತೆ. ನಾನೇ ಮೊದಲ ವೈದ್ಯೆ. ನೀವು ಸಹ ಶ್ರಮಪಟ್ಟು ಓದಬೇಕು. ತಂದೆ ತಾಯಿ ಶ್ರಮಪಟ್ಟು ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡಿ ನಮಗೆ ವಿದ್ಯಾಭ್ಯಾಸ ಕೊಡಿಸುತ್ತಾರೆ. ನಾವು ಅವರ ಋಣಕ್ಕಾಗಿ ಓದಿ ವಿದ್ಯಾವಂತರಾಗಿ ಅಧಿಕಾರ ಹಿಡಿಯಬೇಕು ಎಂದರು.ಅರಿವು ಪಡೆದ ಹೆಣ್ಣುಮಕ್ಕಳು ಜ್ಞಾನದ, ಗೌರವ, ಸಾಧನೆಯ ಸಂಕೇತ. ಪ್ರತಿಯೊಬ್ಬ ಮಹಿಳೆಯರು ತಮ್ಮ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರು, ದೂರವಾಣಿ ಸಂಖ್ಯೆಯನ್ನು ತಿಳಿದುಕೊಂಡಿರಬೇಕು. ದೂರುಗಳಿಗೆ ಠಾಣೆಯಲ್ಲಿ ಸ್ಪಂದಿಸದಿದ್ದಾಗ ಪೊಲೀಸ್ ವರಿಷ್ಠಾಧಿಕಾರಿಗಳ ಹತ್ತಿರ ಹೋಗಿ ದೂರು ಸಲ್ಲಿಸಿ ಎಂದರು.

ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರದ ಎಲ್ಲಾ ಕಚೇರಿಗಳು ತೆರೆದ ಮನೆಯಾಗಬೇಕು. ಇದೇ ಉದ್ದೇಶದಿಂದ ಪೊಲೀಸ್ ಠಾಣೆಯಲ್ಲಿ "ತೆರೆದ ಮನೆ ಯೋಜಿತ ಕಾರ್ಯಕ್ರಮ " ಪ್ರಾರಂಭವಾಗಿದೆ. ಸ್ಥಳೀಯ ಶಾಲೆಗಳಿಗೆ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಪೊಲೀಸ್ ಠಾಣೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರ ಕಂಡರೆ ಭಯಪಡದಂತೆ ಮಾಹಿತಿ ನೀಡುತ್ತಿದ್ದಾರೆ ಎಂದರು.ನಿಮ್ಮ ಗ್ರಾಮಗಳಲ್ಲಿ ರಸ್ತೆ, ನೀರು, ಚರಂಡಿ ಇತರೆ ಸಮಸ್ಯೆಗಳು ಇದ್ದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮಸ್ಯೆಯನ್ನು ಆಲಿಸದಿದ್ದರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ದೂರು ನೀಡಬೇಕು ಎಂದು ತಿಳಿಸಿದರು.ಯಾವುದೇ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಬೇಕು, ಯಾವುದೇ ವದಂತಿಗಳಿಗೆ ಕಿವಿಕೊಡಬಾರದು, ಹಿರಿಯರನ್ನು ಯಾವುದೇ ರೀತಿ ತೇಜೋವಧೆ ಮಾಡಬಾರದು, ಹೆಣ್ಣು ಮಕ್ಕಳು ಮಾತೃತ್ವ ನಾಯಕಿ, ರಾಜಕೀಯ ನಾಯಕತ್ವ ಮಹತ್ವ ಹೊಂದಿದ್ದಾಳೆ ಎಂದರು. ಸಹಾಯವಾಣಿ ನಂಬರ್‌ ಇಟ್ಟುಕೊಳ್ಳಿ:

ಕರ್ನಾಟಕ ತುರ್ತು ಸಹಾಯವಾಣಿ ೧೧೨, ಮಹಿಳಾ ಸಹಾಯವಾಣಿ ೧೮೧, ಸೈಬರ್ ಸಹಾಯವಾಣಿ ೧೯೦೮, ತಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳಬೇಕು. ತುರ್ತು ಸಮಯದಲ್ಲಿ ಯೋಚಿಸದೆ ಕರೆ ಮಾಡುವ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದರು.

ಕರ್ನಾಟಕ ಪೊಲೀಸ್ ಮಹಿಳೆಯರ ರಕ್ಷಣೆಗೆ ಇದ್ದಾರೆ. ಜನಸ್ನೇಹಿಯಾಗಿದ್ದಾರೆ. ಯಾವುದೇ ಸಮಸ್ಯೆಗಳನ್ನು ಅಂಜದೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿ, ಕಾನೂನು ತಿಳಿದ ಹೆಣ್ಣು ಹೆಚ್ಚು ಶಕ್ತಿಯುತ ಸಮಾಜದಲ್ಲಿ ಹೋರಾಟ ಮಾಡುತ್ತಾಳೆ. ಆದ್ದರಿಂದ ಪ್ರತಿಯೊಂದು ಹೆಣ್ಣುಮಕ್ಕಳು ಕಾನೂನು ಅರಿಯಬೇಕು ಎಂದು ಸಲಹೆ ನೀಡಿದರು. ಯಾವುದೇ ಒಂದು ಪ್ರಕರಣ ನಡೆದರೆ ಯಾವುದಾದರೂ ಪೊಲೀಸ್ ಠಾಣೆಗೆ ಭೇಟಿ ನೀಡಿ ಜೀರೋ ಎಫ್.ಐ.ಆರ್ ಅನ್ನು ದಾಖಲಿಸಿ ಸಂಬಂಧಪಟ್ಟ ಠಾಣೆಗೆ ವರ್ಗಾವಣೆ ಮಾಡುತ್ತಾರೆ ಎಂದರು. ಹೋರಾಟದಿಂದ ಮಾತ್ರ ಜಯಗಳಿಸಲು ಸಾಧ್ಯ ಹೆಣ್ಣು ಯಾವಾಗ ಆರ್ಥಿಕವಾಗಿ ಸಬಲೆಯಾಗುತ್ತಳೇ ಅಂದು ನಾಡು ದೇಶ ಸಬಲವಾಗುತ್ತದೆ. ಶಿಕ್ಷಣದಿಂದ ಮಾತ್ರ ಸಾಧನೆ, ಗೌರವ ಆರ್ಥಿಕ ಸಬಲೀಕರಣ, ಗುರಿ ಸಾಧಿಸಬೇಕಾದರೆ ಮೊಬೈಲ್ ನಿಂದ ದೂರವಿರಬೇಕು. ತಂದೆ ತಾಯಿ ಹಳ್ಳಿಯಿಂದ ಮಕ್ಕಳನ್ನು ಓದಲು ಕಳುಹಿಸಿರುತ್ತಾರೆ. ಈ ಸಮಯದಲ್ಲಿ ಮೊಬೈಲ್‌ಗಳಿಗೆ ನಾವು ದಾಸರಾಗದೆ ಅಮೂಲ್ಯವಾದ ಸಮಯವನ್ನು ಬಳಸಿಕೊಂಡು ದೊಡ್ಡ ಸಾಧನೆಯನ್ನು ಮಾಡಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾತಿರುವುದಕ್ಕಿಂತ ಹೆಚ್ಚಾಗಿ ಸಾವಿರಾರು ಸೈಬರ್ ಪ್ರಕರಣಗಳು ದಾಖಲಾಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಯಾವುದೇ ವೈಯಕ್ತಿಕ ವಿಷಯಗಳು, ದೂರವಾಣಿ ಸಂಖ್ಯೆಯನ್ನು ಹಂಚಿಕೊಳ್ಳಬಾರದು ಎಲ್ಲವನ್ನೂ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಬರುವ ಎ ಪಿ. ಕೆ ಅಪ್ಲಿಕೇಶ್, ಲಿಂಕ್ ಗಳನ್ನು, ವಿಡಿಯೋ ಕರೆಗಳನ್ನು ಓಪನ್ ಮಾಡಬಾರದು ಎಂದು ತಿಳಿಸಿದರು.ಹಾಸನ ಜಿಲ್ಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಲ್ಲರೂ ಸಹ ಮಹಿಳಾ ಅಧಿಕಾರಿಗಳೇ ಇದ್ದಾರೆ. ಮುಂದೆ ನೀವು ಇದೇ ರೀತಿ ಆಗಬೇಕು ದೇಶದ ಪ್ರದಾನ ಮಂತ್ರಿ, ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದರು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಕರೆ ತಂದು ಕಾನೂನಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ತೆರೆದ ಮನೆಯ ವಾತಾವರಣವನ್ನು ಸೃಷ್ಟಿಸಬೇಕು ಎಂದರು. ಪ್ರಸುತ್ತ ಸಮಾಜದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ, ಸಮಾಜದಲ್ಲಿ ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವಷ್ಟು ಜ್ಞಾನವನ್ನು ಹೊಂದಿಬೇಕು, ಧೈರ್ಯವಾಗಿ ಸಮಸ್ಯೆಯನ್ನು ಎದುರಿಸಬೇಕು ಕುಗ್ಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರು ಮಾತನಾಡಿ, ಮೊದಲು ನಾಗಲಕ್ಷ್ಮಿ ಚೌಧರಿ ಮೇಡಂ ಅವರು ನಮಗೆ ಕರೆ ಮಾಡಿದಾಗ ನೊಂದವರು ಬರುತ್ತಾರೆ ಸರಿಯಾಗಿ ಮಾತನಾಡಿಸಿ ಎಂದು ಹೇಳುತ್ತಾರೆ ಎಂದರು.ಧೈರ್ಯವಾಗಿರಬೇಕು:

ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅರಿವು ಇರಬೇಕು ಅಪರಿಚಿತ ವ್ಯಕ್ತಿಯ ಸ್ನೇಹಾ ಮಾಡುವಾಗ ಎಚ್ಚರವಿರಲಿ, ಫೇಸ್ ಬುಕ್ ಹಾಗು ಇನ್ಸ್ಟಾಗ್ರಾಮ್ ಗಳಲ್ಲಿ ಪ್ರೇಂಡ್ಸ್ ರಿಕ್ವೆಸ್ಟ್ ಹಾಗೂ ಫಾಲೋ ಮಾಡುವಾಗ ಎಚ್ಚರವಹಿಸಬೇಕು ಎಂದರು. ಪ್ರಸ್ತುತ ಸಮಾಜದಲ್ಲಿ ತಾಂತ್ರಿಕತೆ ಬದಲಾವಣೆಯಾದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಯಾವುದೇ ಸಮಸ್ಯೆಯನ್ನು ಎದುರಿಸಬೇಕಾದರೆ ಧೈರ್ಯವಾಗಿರಬೇಕು ಎಂದು ತಿಳಿಸಿದರು.

ಈ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್‌ ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಧರಣಿ ಕುಮಾರ್‌, ಪ್ರಾಂಶುಪಾಲರಾದ ಬಸವರಾಜ್ ಉಪಸ್ಥಿತರಿದ್ದರು.