ಡೀಸಿಗಳು ಮಹಾರಾಜರ ಥರ ಆಡಬೇಡಿ: ಸಿದ್ದು ಕಿಡಿ

| Published : Jul 09 2024, 12:57 AM IST / Updated: Jul 09 2024, 05:03 AM IST

ಡೀಸಿಗಳು ಮಹಾರಾಜರ ಥರ ಆಡಬೇಡಿ: ಸಿದ್ದು ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

‘ಜಿಲ್ಲಾಧಿಕಾರಿಗಳಿಗೆ ನಾವೇ ಮಹಾರಾಜರು ಎನ್ನುವ ಭಾವನೆ ಬೇಡ. ರಾಜಕಾರಣಿ ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎಂಬುದನ್ನು ಅರಿತು ಜನರ ಸಮಸ್ಯೆ ಪರಿಹರಿಸಿ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು :  ‘ಜಿಲ್ಲಾಧಿಕಾರಿಗಳಿಗೆ ನಾವೇ ಮಹಾರಾಜರು ಎನ್ನುವ ಭಾವನೆ ಬೇಡ. ರಾಜಕಾರಣಿ ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎಂಬುದನ್ನು ಅರಿತು ಜನರ ಸಮಸ್ಯೆ ಪರಿಹರಿಸಿ. ನನ್ನವರೆಗೂ ಜನರ ಅಹವಾಲು ಬರುತ್ತಿವೆ ಎಂದರೆ ನೀವು ಜನರನ್ನು ಭೇಟಿ ಮಾಡುತ್ತಿಲ್ಲ ಎಂದರ್ಥ. ಇನ್ನು ಈ ನಿರ್ಲಕ್ಷ್ಯ ಮುಂದುವರೆದರೆ ಹಿರಿಯ ಅಧಿಕಾರಿಗಳನ್ನೇ ಹೊಣೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ರವರೆಗೆ ಸುದೀರ್ಘವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ ಅವರು ಇಲಾಖಾವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಅತಿವೃಷ್ಟಿಯಿಂದ ಉಂಟಾಗಬಹುದಾದ ನೆರೆ ಸಮಸ್ಯೆಗಳ ನಿಯಂತ್ರಣಕ್ಕೆ ಕ್ರಮ, ಆರ್ಥಿಕ ಪರಿಹಾರ, ರೈತರ ಸಮಸ್ಯೆಗಳಿಗೆ ಸ್ಪಂದನೆ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ, ಕಂದಾಯ ಸಮಸ್ಯೆಗಳು, ಎಸ್ಸೆಸ್ಸೆಲ್ಸಿ ಫಲಿತಾಂಶ, ಡೆಂಘೀ ನಿಯಂತ್ರಣ, ಸರ್ಕಾರಿ ಆಸ್ತಿಗಳ ಸಂರಕ್ಷಣೆ.. ಹೀಗೆ ಸಾಲು-ಸಾಲು ವಿಚಾರಗಳನ್ನು ಮುಂದಿಟ್ಟುಕೊಂಡು ಸಮರ್ಪಕವಾಗಿ ಕೆಲಸ ಮಾಡುವಂತೆ ತಾಕೀತು ಮಾಡಿದರು.

ಇನ್ನು ಮುಂದೆ ಎಲ್ಲಾ ಕೆಲಸಗಳನ್ನೂ ಜಿಲ್ಲಾ-ತಾಲೂಕು ಅಧಿಕಾರಿಗಳು ಸಮನ್ವಯತೆಯಿಂದ ತಳಮಟ್ಟದಲ್ಲೇ ಪರಿಹಾರ ಕಲ್ಪಿಸಬೇಕು. ತಹಸೀಲ್ದಾರ್‌, ಎಸಿ ಹಾಗೂ ಡಿಸಿಗಳ ಬಳಿಯಿರುವ ಭೂ ವ್ಯಾಜ್ಯಗಳನ್ನು ಕೂಡಲೇ ಪರಿಹರಿಸಬೇಕು. ನನ್ನವರೆಗೂ ಅಹವಾಲುಗಳು ಬಂದರೆ ನೀವು ಕೆಲಸ ಮಾಡಿಲ್ಲ ಎಂದೇ ಪರಿಗಣಿಸಲಾಗುವುದು. ಅಹವಾಲುಗಳನ್ನು ಸಕಾರಾತ್ಮಕವಾಗಿ ವಿಲೇವಾರಿ ಮಾಡದಿದ್ದರೆ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳ ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸ್ಥಳೀಯವಾಗಿ ಸರಿಯಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ? ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓಗಳು ಇರುವುದು ಜನಸಂಪರ್ಕ ಸಭೆಗಳಿಗೆ ಬಂದ ಅರ್ಜಿಗಳನ್ನು ಪಡೆದು ಮುಚ್ಚಳಿಕೆ ಕೊಟ್ಟು ಕೈತೊಳೆದುಕೊಳ್ಳುವುದಿಕ್ಕಾ? ಎಂದು ಖಾರವಾಗಿ ಪ್ರಶ್ನಿಸಿದರು.

ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಜನರನ್ನು ನೇರ ಭೇಟಿ ಮಾಡುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ಕೆಲಸ ಮಾಡುವ ಜಾಗದಲ್ಲೇ ಉಳಿಯಬೇಕು. ಈ ಬಗ್ಗೆ ಜಿಲ್ಲಾಧಿಕಾರಿ, ಜಿ.ಪಂ. ಸಿಇಓಗಳು ಗಮನ ಹರಿಸಬೇಕು ಎಂಬ ನನ್ನ ಸೂಚನೆ ಪಾಲನೆಯಾಗುತ್ತಿಲ್ಲ. 40 ವರ್ಷಗಳ ಹಿಂದೆ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದ ರೀತಿಗೂ, ಈಗಿನ ರೀತಿಗೂ ಹೋಲಿಸಿದರೆ ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ. ಇದು ಬಹಳ ಬೇಸರದ ಸಂಗತಿ ಎಂದರು.

ಅಧಿಕಾರಿಗಳಿಗೆ ಸಿಎಂ ಪಾಠ:

ಜಿಲ್ಲಾಧಿಕಾರಿಗಳು ಗೆಜೆಟಿಯರ್‌, ಎಕನಾಮಿಕ್‌ ಸರ್ವೇ ಓದಿದರೆ ಆ ಜಿಲ್ಲೆಯ ಇತಿಹಾಸ, ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಸಾಧ್ಯ. ಸಂವಿಧಾನ ಕೇವಲ ಓದುವುದಕ್ಕಲ್ಲ ಅನುಷ್ಠಾನಕ್ಕೆ ಎಂಬುದನ್ನು ಅರಿಯಿರಿ. ಫ್ರೇಸರ್‌ ಎಂಬ ಅಧಿಕಾರಿಯ ಸಲಹೆ ಇಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್‌, ಗಾಯಕ್‌ವಾಡ್‌, ಶಾಹು ಮಹಾರಾಜ ಮೊದಲಾದವರು ಒಳ್ಳೆಯ ಅರಸರೆಂದು ಹೆಸರು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಮನ್ರೋ ಎಂಬ ಅಧಿಕಾರಿ ಕಲೆಕ್ಟರ್‌ ಆಗಿದ್ದರು. ಇಂದಿಗೂ ಅಲ್ಲಿನ ಜನ ತಮ್ಮ ಮಕ್ಕಳಿಗೆ ಅವರ ಹೆಸರಿಡುತ್ತಾರೆ. ಇದು ಎಲ್ಲರಿಗೂ ಮಾದರಿಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಭೂ ವ್ಯಾಜ್ಯಗಳನ್ನು ಶೀಘ್ರ ಪರಿಹರಿಸಿ:

ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 8234 ಪ್ರಕರಣಗಳು ಬಾಕಿ ಇವೆ. ಉಪವಿಭಾಗಾಧಿಕಾರಿಗಳ ಬಳಿ ಆರ್‌.ಆರ್‌.ಟಿ (ಹಕ್ಕು ಬದಲಾವಣೆ) ಪ್ರಕರಣಗಳು 37587 ಬಾಕಿ ಇವೆ. ಜಿಲ್ಲಾಧಿಕಾರಿಗಳ ಬಳಿ 10838 ಪ್ರಕರಣಗಳು ಬಾಕಿ ಇವೆ. ಜಿಲ್ಲಾಧಿಕಾರಿಗಳೇ ಬಾಕಿ ಉಳಿಸಿಕೊಂಡರೆ ನೀವು ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಗಳಿಗೆ ಏನು ಸೂಚನೆ ಕೊಡ್ತೀರಿ? ಮೊದಲು ವ್ಯಾಜ್ಯಗಳನ್ನು ಪರಿಹರಿಸಿ ಎಂದು ಸಿದ್ದರಾಮಯ್ಯ ಗರಂ ಆದರು.

ಕೆಲವು ಜಿಲ್ಲಾಧಿಕಾರಿಗಳ ಬಳಿ ಒಂದೂ ಪ್ರಕರಣಗಳೂ ಬಾಕಿ ಇಲ್ಲ. ಉಳಿದ ಜಿಲ್ಲಾಧಿಕಾರಿಗಳ ಬಳಿ ಬೇಕಾಬಿಟ್ಟಿ ಪ್ರಕರಣ ಬಾಕಿಯಿದೆ. ಇದು ಯಾಕೆ? ಜನರಿಗೆ ಡಿಸಿ, ಎಸಿ, ತಹಸೀಲ್ದಾರ್‌ ಸಿಗದಿದ್ದರೆ ಅವರು ಎಲ್ಲಿಗೆ ಹೋಗಬೇಕು? ಎಂದು ಚಾಟಿ ಬೀಸಿದರು.

ಭೂಕುಸಿತಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ:

ರಾಜ್ಯದಲ್ಲಿ 2225 ಗ್ರಾಮಗಳು ಮತ್ತು 2038334 ಜನರು ಪ್ರವಾಹ, ಭೂ ಕುಸಿತಕ್ಕೆ ಪ್ರತೀ ವರ್ಷ ತುತ್ತಾಗುತ್ತಾರೆ. ನಿಮ್ಮ ನಿಮ್ಮ ಜಿಲ್ಲೆಗಳಲ್ಲಿನ ಸಂತ್ರಸ್ತ ಗ್ರಾಮಗಳನ್ನು ಗುರುತಿಸಿ ಅವರಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಿ. ಜತೆಗೆ ಈ ವರ್ಷ ಮಳೆಯಿಂದ ಮನೆ, ಬೆಳೆ ಹಾನಿ ಆಗಿರುವವರಿಗೆ ಎಸ್‌ಡಿಆರ್‌ಎಫ್‌ ಪ್ರಕಾರ ಪರಿಹಾರವನ್ನು ಕೂಡಲೇ ಇತ್ಯರ್ಥ ಮಾಡಿ ಎಂದು ಸೂಚಿಸಿದರು.

30 ದಿನಗಳೊಳಗೆ ಪಿಂಚಣಿ ನೀಡಿ:ಪಿಂಚಣಿ ಅರ್ಜಿಗಳ ವಿಲೇವಾರಿ ಬಾಕಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಪಿಂಚಣಿಗಳ ವಿಲೇ ಅವಧಿ ಸದ್ಯ 45 ದಿನ ಇದೆ. ಇದನ್ನು 30 ದಿನಕ್ಕೆ ಇಳಿಸಲಾಗುವುದು. ಜತೆಗೆ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕಾನೂನು ಪ್ರಕಾರವೇ ಉದಾರತನದಿಂದ ವರ್ತಿಸಿ ಪರಿಹಾರ ನೀಡಿ. ಜತೆಗೆ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ವಿದ್ಯಾರ್ಥಿನಿಲಯ ಪ್ರವೇಶ ಸೇರಿದಂತೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಪಾರದರ್ಶಕವಾಗಿ ನಡೆಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಡಾ.ಜಿ. ಪರಮೇಶ್ವರ್‌, ಎಂ.ಬಿ. ಪಾಟೀಲ್‌, ಕೃಷ್ಣಬೈರೇಗೌಡ, ಬೈರತಿ ಸುರೇಶ್, ಪ್ರಿಯಾಂಕ್‌ ಖರ್ಗೆ, ರಾಮಲಿಂಗಾರೆಡ್ಡಿ, ಚೆಲುವರಾಯಸ್ವಾಮಿ, ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಎಲ್ಲಾ ಸಚಿವರೂ ಹಾಜರಿದ್ದರು.

ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಿ: ಸಿಎಂ

ನೀತಿ ಆಯೋಗದ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಮಾತ್ರ ಇರಬೇಕು. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ನೀಡಿದ್ದೇವೆ. ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಿ, ಅರ್ಹರಿಗೆ ಬಿಪಿಎಲ್‌ ಕಾರ್ಡು ಒದಗಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ರಾಜ್ಯದಲ್ಲಿ 4,37,23,911 ಜನರು ಬಿಪಿಎಲ್‌ ಕಾರ್ಡ್‌ ಸೌಲಭ್ಯ ಪಡೆಯುತ್ತಿದ್ದು, ಶೇ.80ರಷ್ಟು (1.27 ಕೋಟಿ) ಕುಟುಂಬಗಳು ಬಿಪಿಎಲ್‌ ಅಡಿಯಲ್ಲಿವೆ. ಜತೆಗೆ ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿ ಬಾಕಿಯಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ, ಬಿಪಿಎಲ್‌ ಕಾರ್ಡ್‌ ಪ್ರಮಾಣ ಕಡಿಮೆಯಾಗದಿರಲು ಕಾರಣವೇನು? ತಮಿಳುನಾಡಿನಲ್ಲಿ ಬಿಪಿಎಲ್‌ ಪ್ರಮಾಣ ಶೇ. 40ರಷ್ಟಿದೆ. ಈ ಕುರಿತು ಪರಿಶೀಲನೆ ನಡೆಸಿ, ಅನರ್ಹರನ್ನು ಕೈಬಿಡುವ ಕಾರ್ಯ ನಡೆಯಬೇಕು. ಇದೇ ರೀತಿ ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಇದೇ ರೀತಿ ರಾಜ್ಯದಲ್ಲಿ 76 ಲಕ್ಷ ಜನರಿಗೆ ಪಿಂಚಣಿ ನೀಡುತ್ತಿದ್ದು, ದೇಶದಲ್ಲೇ ಅಧಿಕವಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಎನ್‌ಪಿಸಿಐ ಮ್ಯಾಪಿಂಗ್‌ ಮಾಡುವಲ್ಲಿ 2 ಲಕ್ಷ ಪ್ರಕರಣಗಳು ಬಾಕಿಯಿವೆ. ಇದನ್ನು ಆದ್ಯತೆ ಮೇರೆಗೆ ಮಾಡಲು ಸೂಚಿಸಿದರು.

ಗ್ಯಾರಂಟಿ ಫಲಾನುಭವಿಗಳ ಸಮೀಕ್ಷೆಗೆ ಸಿಎಂ ಸೂಚನೆ

ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು 5 ಕೋಟಿ ಜನರ ಸಮೀಕ್ಷೆ ನಡೆಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು. ರಾಜ್ಯದಲ್ಲಿ 84,52,317 ಕುಟುಂಬಗಳ ಸುಮಾರು 5 ಕೋಟಿ ಜನರ ಸಮೀಕ್ಷೆ ನಡೆಸಬೇಕಾಗಿದೆ ಎಂದರು.ಸಂಚಾರಿ ಕುರಿಗಾಹಿಗಳಿಗೆ ಬಂದೂಕು ಪರವಾನಗಿ ಕಡ್ಡಾಯ: ಸಿಎಂ

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ಜತೆಗೆ ಕಡ್ಡಾಯವಾಗಿ ಬಂದೂಕು ಪರವಾನಗಿ ನೀಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಕುರಿ-ಮೇಕೆಗಳ ಟೆಂಟ್ ಹಾಕಿರುವ ಸ್ಥಳಕ್ಕೇ ಹೋಗಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಬೇಕು. ಕುರಿ ಕಳ್ಳತನ ತಡೆಯಲು ಬಂದೂಕು ಲೈಸೆನ್ಸ್‌ ನೀಡಬೇಕು ಎಂದು ಹೇಳಿದರು.

ಸಿಎಂ ನೀಡಿದ ಸೂಚನೆಗಳು

1. ಜನಸ್ಪಂದನಕ್ಕೆ ಅಷ್ಟೊಂದು ಅರ್ಜಿಗಳು ಏಕೆ ಬರುತ್ತಿವೆ? ಅಧಿಕಾರಿಗಳು ತಳಮಟ್ಟದಲ್ಲೇ ಜನರ ಸಮಸ್ಯೆ ಬಗೆಹರಿಸಬೇಕು

2. ತಹಸೀಲ್ದಾರ್‌, ಎಸಿ, ಡಿಸಿಗಳ ಬಳಿಯಿರುವ ಭೂವ್ಯಾಜ್ಯ ಕೂಡಲೇ ಪರಿಹರಿಸಬೇಕು. ನನ್ನವರೆಗೆ ಬಂದರೆ ನಿಮ್ಮ ಮೇಲೇ ಕ್ರಮ

3. ಭೂಕುಸಿತ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಿ. ಈ ಸಲದ ಮಳೆಯಿಂದ ಹಾನಿಯಾದ ಕಡೆ ತ್ವರಿತ ಪರಿಹಾರ ಒದಗಿಸಿ

4. ರಾಜ್ಯದಲ್ಲಿರುವ ಬಡತನ ಶೇ.5.67 ಮಾತ್ರ. ಆದರೆ 1.27 ಕೋಟಿ ಕುಟುಂಬಕ್ಕೆ ಬಿಪಿಎಲ್‌ ಕಾರ್ಡ್‌ ಇದೆ. ಅನರ್ಹ ಕಾರ್ಡ್‌ ರದ್ದುಪಡಿಸಿ

5. ಗ್ಯಾರಂಟಿ ಯೋಜನೆಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ತಿಳಿಯಲು 5 ಕೋಟಿ ಫಲಾನುಭವಿಗಳ ಸಮೀಕ್ಷೆ ನಡೆಸಿ

6. ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ, ಗನ್‌ ಲೈಸನ್ಸ್‌ ನೀಡಿ. ಕುರಿ, ಮೇಕೆಗಳ ಟೆಂಟ್‌ ಇರುವಲ್ಲಿಗೇ ಹೋಗಿ ಲಸಿಕೆ ಹಾಕಿಸಿ