ದಾಖಲಾಗುವ ಮೊದಲೇ ನ್ಯಾಯ ಒದಗಿಸುವ ಪ್ರಯತ್ನ ಮಾಡಿ

| Published : Jul 09 2024, 12:57 AM IST

ಸಾರಾಂಶ

ಲೋಕ ಅದಾಲತ್ ಮಾದರಿಯಲ್ಲಿ ಪ್ರಕರಣಗಳು ದಾಖಲಾಗುವ ಮೊದಲೇ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾ.ಕೆ.ಎಸ್.ಮುದುಗಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಲೋಕ ಅದಾಲತ್ ಮಾದರಿಯಲ್ಲಿ ಪ್ರಕರಣಗಳು ದಾಖಲಾಗುವ ಮೊದಲೇ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾ.ಕೆ.ಎಸ್.ಮುದುಗಲ್‌ ಹೇಳಿದರು.

ಪಟ್ಟಣದಲ್ಲಿ 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕೋಡಿ ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ 664 ಪ್ರಕರಣಗಳು ಅನೇಕ ವರ್ಷಗಳಿಂದ ನ್ಯಾಯ ನಿರ್ಣಯವಾಗಿಲ್ಲ. ಅಂತಹ ಪ್ರಕರಣಗಳಿಗೆ ಬರುವ 6 ತಿಂಗಳಲ್ಲಿ ನ್ಯಾಯ ನಿರ್ಣಯವಾಗುವ ನಿಟ್ಟಿನಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಳೆದ 40 ವರ್ಷಗಳಿಂದ ಇನ್ನೂ ನಿರ್ಣಯವಾಗದ ಪ್ರಕರಣಗಳು ಬಾಕಿ ಇರುವುದರಿಂದ ಇದಕ್ಕೆ ಸೂಕ್ತ ಕಾರಣ ಹುಡುಕಿ ಪರಿಹಾರ ರೂಪಿಸುವುದು ಅಗತ್ಯವಾಗಿದೆ. ಬಾಕಿ ಇರುವ ಪ್ರಕರಣಗಳು ಕೂಡಲೇ ಇತ್ಯರ್ಥವಾಗುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಜಿಲ್ಲಾ ನ್ಯಾಯಾಲಯ ಸ್ಥಾಪನೆ ಮೂಲಕ ನ್ಯಾಯದೇವತೆ ಇಲ್ಲಿ ಆಗಮಿಸಿದ್ದು, ಪ್ರತಿಯೊಬ್ಬರ ಮನೆಯ ಬಾಗಿಲಿಗೆ ನ್ಯಾಯ ಒದಗಿಸುವ ಕಾರ್ಯವನ್ನು ವಕೀಲರು ಮಾಡಬೇಕು ಎಂದು ಸೂಚಿಸಿದರು.ಹೈಕೋರ್ಟ್ ನ್ಯಾ.ರಾಮಚಂದ್ರ ಹುದ್ದಾರ ಮಾತನಾಡಿ, ಅಥಣಿಯಲ್ಲಿ ಜಿಲ್ಲಾ ನ್ಯಾಯಾಲಯದ ಸ್ಥಾಪನೆಗೊಂಡಿರುವುದರಿಂದ ನ್ಯಾಯವಾದಿಗಳ ಜವಾಬ್ದಾರಿ ಹೆಚ್ಚಿದೆ. ಬಾಕಿ ಇರುವ ಪ್ರಕರಣಗಳಿಗೆ ಬೇಗನೆ ನ್ಯಾಯ ನಿರ್ಣಯ ಕೈಗೊಂಡರೇ ಸರ್ಕಾರದ ಬೊಕ್ಕಸಕ್ಕೂ ಉಳಿತಾಯವಾಗಲಿದೆ ಎಂದು ತಿಳಿಸಿದರು.ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ನ್ಯಾಯದಾನ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿ ಮತ್ತು ನ್ಯಾಯವಾದಿ ಜೊತೆಗೆ ಸಾಕ್ಷಿದಾರನಿಗೆ ಗೌರವ ಸಿಗುತ್ತಿಲ್ಲ. ಜನಸಾಮಾನ್ಯರಿಗೂ ನ್ಯಾಯಾಲಯದಲ್ಲಿ ಗೌರವ ದೊರಕಬೇಕು. ಅನೇಕ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ವ್ಯಕ್ತಿಗಳಿಗೆ ಇನ್ನೂ ನ್ಯಾಯ ದೊರಕಿಲ್ಲ. ಬಾಕಿ ಇರುವ ಪ್ರಕರಣಗಳನ್ನು ಬರುವ 6 ತಿಂಗಳಲ್ಲಿ ಇತ್ಯರ್ಥ ಗೊಳಿಸಬೇಕು. ಜಿಲ್ಲಾಮಟ್ಟದ ನ್ಯಾಯಾಲಯಗಳಲ್ಲಿ ವಕೀಲರ ಚೇಂಬರ್ ಸ್ಥಾಪನೆ ಮಾಡಲಾಗಿದ್ದು, ಅದೇ ಮಾದರಿಯಲ್ಲಿ ತಾಲೂಕು ಮಟ್ಟದಲ್ಲಿಯೂ ವಕೀಲರ ಚೇಂಬರ್ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಜಯಕುಮಾರ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ.ಟಿ.ಎನ್.ಇನವಳ್ಳಿ, ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ಹುಚಗೌಡರ, ಚಿಕ್ಕೋಡಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸುನೀಲ ಕುಮಾರ ಬಳೋಲ ಉಪಸ್ಥಿತರಿದ್ದರು. ಹಿರಿಯ ನ್ಯಾಯವಾದಿ ಬಿ.ಎಲ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನ್ಯಾಯಮೂರ್ತಿ ಟಿ.ಎನ್.ಇನವಳ್ಳಿ ಸ್ವಾಗತಿಸಿದರು. ನ್ಯಾಯವಾದಿ ಬಾಹುಸಾಹೇಬ ಕಾಂಬಳೆ, ಡಿ.ಎಸ್.ಟಕ್ಕಣ್ಣವರ, ಸುಭಾಷ ನಾಯಿಕ ನಿರೂಪಿಸಿದರು. ಎ.ಎಸ್.ಹುಚ್ಚಗೌಡರ ವಂದಿಸಿದರು.ಅಥಣಿ ನ್ಯಾಯಾಲಯಕ್ಕೆ ಶತಮಾನದ ಇತಿಹಾಸವಿದ್ದು ಭೌಗೋಳಿಕವಾಗಿ ವಿಸ್ತಾರ ಹೊಂದಿದೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ ದೂರದಲ್ಲಿರುವ ಅಥಣಿ ಮುರುಘೇಂದ್ರ ಶಿವಯೋಗಿಗಳಂತಹ ಸತ್ಪುರುಷರು ತಿರುಗಾಡಿದ ಪಾವನ ಕ್ಷೇತ್ರವಾಗಿದೆ. ಇಲ್ಲಿ ಸ್ಥಾಪನೆಯಾಗಿರುವ ಜಿಲ್ಲಾ ನ್ಯಾಯಾಲಯ ಪೀಠದ ಸದುಪಯೋಗ ಪಡೆದುಕೊಂಡು ಬಾಕಿ ಇರುವ ಪ್ರಕರಣಗಳಿಗೆ ಬೇಗನೆ ನಿರ್ಣಯ ಕೈಕೊಳ್ಳಬೇಕು.

-ಕೆ.ಎಸ್.ಮುದುಗಲ, ಹೈಕೋರ್ಟ್ ನ್ಯಾಯಮೂರ್ತಿ, ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ.

---

ರಾಜ್ಯ ಸರ್ಕಾರ ತಾಲೂಕು ಕೇಂದ್ರಗಳಲ್ಲಿ ಕೋರ್ಟ್ ಸ್ಥಾಪನೆ ಮಾಡಿದರೇ ಸಾಲದು ನ್ಯಾಯಾಧೀಶರಿಗೆ ಮತ್ತು ನ್ಯಾಯ ಪೀಠಕ್ಕೆ ಬೇಕಾಗುವ ಅಗತ್ಯ ಸಿಬ್ಬಂದಿ ನೇಮಿಸಬೇಕು. ಒಂದು ನ್ಯಾಯಾಲಯ ನಡೆಸಬೇಕಾದರೇ 40 ಜನ ಸಿಬ್ಬಂದಿ ಬೇಕಾಗುತ್ತಾರೆ. ಸಿಬ್ಬಂದಿ ಕೊರತೆಯಿಂದಲೇ ಅನೇಕ ವರ್ಷಗಳಿಂದ ಇನ್ನೂ ಕೆಲವು ಪ್ರಕರಣಗಳಿಗೆ ನ್ಯಾಯದಾನ ದೊರಕುತ್ತಿಲ್ಲ.

-ರಾಮಚಂದ್ರ ಹುದ್ದಾರ,

ಹೈಕೋರ್ಟ್ ನ್ಯಾಯಮೂರ್ತಿ.

---

ವ್ಯಾಜ್ಯ ಮುಕ್ತ ಕಾನೂನು ವ್ಯವಸ್ಥೆ ರೂಢಿಯಲ್ಲಿ ಬಂದರೇ ಅಭಿವೃದ್ಧಿಗೆ ಪೂರಕವಾಗಲಿದೆ. ನ್ಯಾಯ ನಿರ್ಣಯವಾಗಿದ್ದರೂ ಕೂಡ ಕಂದಾಯ ಇಲಾಖೆಯಿಂದ ಅನುಷ್ಠಾನವಾಗದೆ ಇರುವ ವರದಿಗಳ ಬಗ್ಗೆ ಕೂಡಲೇ ಗಮನ ಹರಿಸಲಾಗುವುದು.

-ಎಚ್.ಕೆ.ಪಾಟೀಲ, ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ.

--------------ತಿದ್ದುಪಡಿಯಾದ 3 ಕಾನೂನು ಪರಾಮರ್ಶಿಸಿ ರಾಜ್ಯದಲ್ಲಿ ಜಾರಿ: ಸಚಿವ ಎಚ್‌ಕೆಪಾ

ಅಥಣಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ 3 ಹೊಸ ಅಪರಾಧ ಕಾನೂನುಗಳನ್ನು ಜಾರಿಗೆ ತಂದಿದ್ದು, ಕರ್ನಾಟಕ ಸರ್ಕಾರದಿಂದ ಕಾನೂನು ತಜ್ಞರ ಜೊತೆ ಚರ್ಚಿಸಿ 27 ಸಲಹೆಗಳನ್ನು ನೀಡಿದ್ದೆವು. ಅವುಗಳಲ್ಲಿ ಒಂದನ್ನು ಅಳವಡಿಸಿಕೊಂಡಿಲ್ಲ. ನಮ್ಮ ರಾಜ್ಯದಲ್ಲಿ ಈ ಕಾನೂನುಗಳನ್ನು ಜಾರಿಗೊಳಿಸುವ ಪೂರ್ವದಲ್ಲಿ ನಮ್ಮ ಸಲಹೆಗಳನ್ನು ಸೇರ್ಪಡಿಸುವ ಚಿಂತನೆ ನಡೆದಿದೆ. ಶೀಘ್ರದಲ್ಲಿಯೇ ನಿರ್ಣಯ ಕೈಕೊಳ್ಳಲಾಗುವುದು ಎಂದು ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.ಸ್ಥಳೀಯ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾನೂನುಗಳನ್ನು ಜಾರಿಗೆ ತರುವ ಪೂರ್ವದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಮುಖ್ಯಮಂತ್ರಿ ಅವರಿಗೆ ಸಲಹೆ ನೀಡುವಂತೆ ಪತ್ರ ಬರೆದಿದ್ದರು. ನನ್ನ ಅಧ್ಯಕ್ಷತೆಯಲ್ಲಿ ಕಾನೂನು ತಜ್ಞರ ಸಮಿತಿಯಲ್ಲಿ 27 ಸಲಹೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೆವು. ಕೇಂದ್ರ ಸರ್ಕಾರ ಅದರಲ್ಲಿ ಒಂದು ಸಲಹೆಗಳನ್ನು ಅಳವಡಿಸಿಲ್ಲ, ಈ ಬಗ್ಗೆ ಚಿಂತನೆ ನಡೆಸಿ ರಾಜ್ಯದಲ್ಲಿ ಈ ಕಾನೂನನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಲಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗಿದೆ. ರಾಜ್ಯದ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಈ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದು ಎನ್ನುವುದು ಕೇವಲ ಗಾಳಿಮಾತು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸಿಎಂ ಬದಲಾವಣೆ, ಕೇವಲ ಗಾಳಿ ಸುದ್ದಿ:

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಎಂಬುವುದು ಕೇವಲ ಗಾಳಿ ಸುದ್ದಿಯಾಗಿದ್ದು, ಇದು ಮಾಧ್ಯಮಗಳ ಸೃಷ್ಟಿಯಾಗಿದೆ. ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರ ಮನೆ ಮನ ತಲುಪಿರುವುದರಿಂದ ಸರ್ಕಾರದ ಮೇಲೆ ಇನ್ನಷ್ಟು ಅಭಿವೃದ್ಧಿಯೇ ನಿರೀಕ್ಷೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳಲಾಗುವುದು ಎಂದು ತಿಳಿಸಿದರು.ಮೂಡಾ ನಿಗಮದ ಹಗರಣದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸರ್ಕಾರದ ಕಾಲಾವಧಿಯಲ್ಲಿ ಇಂತಹ ಹಗರಣ ಆಗಿಲ್ಲ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಚಂದ್ರಕಾಂತ ಇಮ್ಮಡಿ, ಅಸ್ಲಂ ನಾಲಬಂದ, ರಾಹುಲ ಮಂಗಸೂಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.