ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚಬೇಡಿ

| Published : Nov 22 2025, 02:30 AM IST

ಸಾರಾಂಶ

ಸರ್ಕಾರದ ಆದೇಶದ ಪ್ರಕಾರ 800 ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳು ಎಂದು ಗುರುತಿಸಲಾಗಿದೆ. ಅಂದರೆ ಕರ್ನಾಟಕ ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ 1 ರಿಂದ 5 ಕಿಮೀ ವ್ಯಾಪ್ತಿಯ, 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿದೆ.

ಧಾರವಾಡ:

ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳಡಿ ಸುತ್ತಲಿನ ಶಾಲೆಗಳ ವಿಲೀನದೊಂದಿಗೆ 25 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಕಂಟಕ ತಂದೊಡ್ಡಿರುವ ರಾಜ್ಯ ಸರ್ಕಾರದ ವಿರುದ್ಧ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಶುಕ್ರವಾರ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸರ್ಕಾರದ ಆದೇಶದ ಪ್ರಕಾರ 800 ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳು ಎಂದು ಗುರುತಿಸಲಾಗಿದೆ. ಅಂದರೆ ಕರ್ನಾಟಕ ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ 1 ರಿಂದ 5 ಕಿಮೀ ವ್ಯಾಪ್ತಿಯ, 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿದೆ. ಈ ಹೆಸರಿನಲ್ಲಿ ಆ ಶಾಲೆಗಳನ್ನು ಮುಚ್ಚಲಾಗುತ್ತದೆ. ಈಗ ಸ್ಥಾಪಿಸಲಾಗುತ್ತಿರುವ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಕೆಪಿಎಸ್ ಮಾಗ್ನೆಟ್ ಶಾಲೆಗೆ, ಹೊಂಗನೂರಿನ ಆರು ಕಿಮೀ ವ್ಯಾಪ್ತಿಯ ಏಳು ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿ, ಉಪಾಧ್ಯಾಯರು ಮತ್ತು ಪರಿಕರಗಳ ಸಮೇತ ವಿಲೀನಗೊಳಿಸಲು ಸರ್ಕಾರವು ಆದೇಶ ಹೊರಡಿಸಿರುವುದು ಯಾವ ನ್ಯಾಯ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಪ್ರಶ್ನಿಸಿದರು.

ಹೊಸ ಶಾಲೆ ತೆರೆಯುವುದಕ್ಕೆ ನಮ್ಮ ವಿರೋಧವಿಲ್ಲ ಆದರೆ, ಗ್ರಾಪಂಗೆ ಮಾತ್ರ ಒಂದು ಶಾಲೆ ತೆರೆಯುವುದನ್ನು ವಿರೋಧಿಸುತ್ತೇವೆ. ಕರ್ನಾಟಕದಲ್ಲಿ ಒಟ್ಟು 49,600 ಸರ್ಕಾರಿ ಶಾಲೆಗಳಿದ್ದು, ಗ್ರಾಮ ಪಂಚಾಯಿತಿಗಳು ಇರುವುದು 5,900. ಹೀಗಾದಲ್ಲಿ ಕರ್ನಾಟಕದಲ್ಲಿ 5900 ಶಾಲೆಗಳು ಮಾತ್ರ ಉಳಿಯಲಿವೆ. ಧಾರವಾಡದ ನವಲೂರಿನ ಪ್ರೌಢಶಾಲೆ, ತಡಕೋಡದ ಪ್ರೌಢಶಾಲೆ, ಯಾದವಾಡದ ಪ್ರೌಢಶಾಲೆ, ಕಲಘಟಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಭ್ಯಾಪುರ ಹಾಗೂ ಇನ್ನಿತರೆ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಪರಿವರ್ತಿಸುವುದಾಗಿ ಹೇಳಿದ್ದು ಭಯ ಮೂಡಿಸಿದೆ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ಸಿಂಧು ಕೌದಿ, ಉಪಾಧ್ಯಕ್ಷ ಚಂದ್ರು, ಜಿಲ್ಲಾ ಕಚೇರಿ ಕಾರ್ಯದರ್ಶಿ ಸ್ಫೂರ್ತಿ ಇದ್ದರು.