ಮಕ್ಕಳ ಓದು ಅರ್ಧದಲ್ಲಿಯೇ ಮೊಟುಕುಗೊಳಿಸಬೇಡಿ: ಶಾಸಕ ಕಂದಕೂರು

| Published : Mar 01 2024, 02:19 AM IST

ಸಾರಾಂಶ

ಮ್ಮ ಸುಖಃ-ದುಖಃಗಳಲ್ಲಿ ನೀವು ಭಾಗಿಯಾಗಿದ್ದೀರಿ. ನಮ್ಮ ತಂದೆಯ ಜೊತೆಗಿದ್ದ ನಿಮ್ಮೆಲ್ಲರ ಜೊತೆ ನಾನಿದ್ದೇನೆ. ನಿಮ್ಮ ಮನೆಯ ಮಗನಾಗಿ ನಾನು ನಿಲ್ಲುತ್ತೇನೆ: ಶಾಸಕ ಕಂದಕೂರ

ಕನ್ನಡಪ್ರಭ ವಾರ್ತೆ ಗುರುಮಠಕಲ್

ನಿಮ್ಮ ಮಕ್ಕಳ ಓದು ನಿಮ್ಮ ಕುಟುಂಬದ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ನಿಮ್ಮ ಪಾಲಕರು ಮತ್ತು ಕುಟುಂಬದ ಕಾಳಜಿ ವಹಿಸಬೇಕಾದಲ್ಲಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಬೇಡಿ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.

ತಾಲೂಕಿನ ವಂಕಸಂಬ್ರ ಗ್ರಾಮದಲ್ಲಿ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೋಣೆ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಷ್ಟೇ ಬಡತನ ಇದ್ದರೂ ಕೂಡ ನಿಮ್ಮ ಮಕ್ಕಳ ಓದುವುದನ್ನು ನಿಲ್ಲಿಸಬೇಡಿ. ಬರುವ ದಿನಗಳಲ್ಲಿ ನಿಮ್ಮೂರಿಗೆ ಇನ್ನೂ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಪಡಿಸುತ್ತೇನೆ. ನಮ್ಮ ಸುಖಃ-ದುಖಃಗಳಲ್ಲಿ ನೀವು ಭಾಗಿಯಾಗಿದ್ದೀರಿ. ನಮ್ಮ ತಂದೆಯ ಜೊತೆಗಿದ್ದ ನಿಮ್ಮೆಲ್ಲರ ಜೊತೆ ನಾನಿದ್ದೇನೆ. ನಿಮ್ಮ ಮನೆಯ ಮಗನಾಗಿ ನಾನು ನಿಲ್ಲುತ್ತೇನೆ ಎಂದರು.

ನಮ್ಮ ತಂದೆಯವರ ದೂರದೃಷ್ಟಿಯ ಫಲವಾಗಿ ಈ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದರು. ಅವರಿಗೆ ಶೈಕ್ಷಣಿಕ ಕಾಳಜಿ ಬಹಳ ಇತ್ತು. ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಇನ್ನೂ ಅವರು ಇರಬೇಕಿತ್ತು ಎಂದು ಭಾವುಕರಾದರು.

ಶಾಲೆಯ ಕೋಣೆ ನಿರ್ಮಿಸಲು ನಿವೇಶನ ಒದಗಿಸಿದ್ದಲ್ಲದೇ ಶಾಲೆಗೆ ಅನುದಾನ ಕೂಡ ನೀಡಲಾಗಿತ್ತು. ಈ ಗ್ರಾಮದ ರಸ್ತೆ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳು ಕಲ್ಪಿಸಲು ಅವರ ಶ್ರಮದಂತೆ ಕೆಲಸ ಮಾಡಲಾಗಿದೆ ಎಂದರು.

ಮಾಧ್ವಾರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ರದ್ದಾಗಿತ್ತು. ಆ ಶಾಲೆಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಡಿಡಿಪಿಐ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವೊಲಿಸಲಾಗಿದೆ. ಮತ್ತೇ ಅದೇ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಕೇಂದ್ರ ಮಾಡಲು ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎಂದರು.

17 ಲಕ್ಷ ಮೊತ್ತದ ಹಲವು ಅಭಿವೃದ್ಧಿ ಕೆಲಸಗಳು ಹೈಸ್ಕೂಲ್‌ಗೆ ನೀಡಲಾಗುತ್ತಿದೆ. ಖಾಸಗಿ ಶಾಲೆಗೆ ಹೋದರೆ ಮಕ್ಕಳಿಗೆ ಏನು ಸವಲತ್ತುಗಳು ಸಿಗಲಿವೆ ಎನ್ನುವುದನ್ನು ಮನಗಂಡು ಸರ್ಕಾರಿ ಶಾಲೆಯಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದ್ದು, ಒಟ್ಟು 56 ಲಕ್ಷ ರು.ಗಳ ಮೊತ್ತದ ಹಲವು ಸೌಲಭ್ಯಗಳನ್ನು ಈ ಶಾಲೆಗೆ ಒದಗಿಸಲಾಗಿದ್ದು, ನಮ್ಮ ತಂದೆಯ ಕನಸು ಈ ಭಾಗದ ಶಾಲೆಯ ಅಭಿವೃದ್ಧಿಯಾಗಿದ್ದು, ಆ ಕನಸು ಈಡೇರಿಸಲು ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ಬನ್ನಪ್ಪಗೌಡ ವಂಕಸಂಬ್ರ, ಶರಣಗೌಡ ಮಾಧ್ವಾರ, ಬಸವರಾಜ ಪೂಜಾರಿ, ಭೀಮರಾಯ ಗುಡ್ಲಗುಂಟಾ, ಆನಂದರೆಡ್ಡಿ ವಡವಟ್, ಮೋಹನ್‌ರೆಡ್ಡಿ ಸಣ್ಣಸಂಬ್ರ, ಜಾನಪ್ಪ ಮಾಧ್ವಾರ, ವಿಕೇಂದ್ರರೆಡ್ಡಿ ಯಲಸತ್ತಿ, ನರಸಪ್ಪ ಕಾವಡಿ, ತಾಯಪ್ಪ ಬದ್ದೇಪಲ್ಲಿ, ರಾಮಣ್ಣ ಕೋಟಗೇರಾ, ಬ್ರಹ್ಮಾನಂದರೆಡ್ಡಿ ಹೊಸಳ್ಳಿ, ಯಂಕೋಬ ತುರಕನದೊಡ್ಡಿ, ಸಂಜೀವರೆಡ್ಡಿ ಜೈಗ್ರಾಂ ಇತರರಿದ್ದರು.