ಸಾರಾಂಶ
ಸರ್ಕಾರ ಬೆಳೆಹಾನಿ ಪರಿಹಾರದ ದುಡ್ಡನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ರೈತರಿಗೆ ತೊಂದರೆ ಕೊಡುತ್ತಿದ್ದಾರೆ.
ನವಲಗುಂದ:
ರೈತರ ಖಾತೆಗಳಿಗೆ ಜಮೆ ಆಗಿರುವ ಬರಪರಿಹಾರ ಹಣವನ್ನು ಬ್ಯಾಂಕ್ ಅಧಿಕಾರಿಗಳು ಬೆಳೆಸಾಲಕ್ಕೆ ಜಮೆ ಮಾಡಿಕೊಂಡು ತೊಂದರೆ ಕೊಡುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಕರ್ನಾಟಕ ರಾಜ್ಯ ಜಾತ್ಯತೀತ, ಪಕ್ಷಾತೀತ ಮಹದಾಯಿ, ಕಳಸಾ-ಬಂಡೂರಿ ಹೋರಾಟ ಸಮಿತಿ ವತಿಯಿಂದ ರೈತರು ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡ ಲೋಕನಾಥ ಹೆಬಸೂರ, ಸರ್ಕಾರ ಬೆಳೆಹಾನಿ ಪರಿಹಾರದ ದುಡ್ಡನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಬರ ಪರಿಹಾರ ಕೂಡ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮದ ಪ್ರಕಾರ ಕೊಟ್ಟಿಲ್ಲ. ಒಣಬೇಸಾಯ, ನೀರಾವರಿ, ತೋಟಗಾರಿಕೆ ಬೇಸಾಯಕ್ಕೆ ಬೇರೆ ನಿಯಮವಿದ್ದರೂ ವಿಂಗಡಣೆ ಮಾಡದೇ ಒಂದೇ ರೀತಿಯಲ್ಲಿ ಪರಿಹಾರ ನೀಡಿದೆ. ಇನ್ನು ಕೆಲ ರೈತರಿಗೆ ಪರಿಹಾರದ ಹಣವೇ ಬಂದಿಲ್ಲ. ಕೂಡಲೆ ಆಗಿರುವ ಲೋಪ ಸರಿಪಡಿಸಬೇಕು. ನಿಯಮದ ಪ್ರಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ರಘುನಾಥ ನಡುವಿನಮನಿ ಮಾತನಾಡಿ, 15 ದಿನಗಳಲ್ಲಿ ಬರಪರಿಹಾರದ ಆಗಿರುವ ಲೋಪ ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಮಲ್ಲಿಕಾರ್ಜುನಗೌಡ ಪಾಟೀಲ, ಫಕ್ಕೀರಗೌಡ್ರ ದೊಡ್ಡಮನಿ, ಫಕ್ಕೀರಗೌಡ್ರ ಗೊಬ್ಬರಗುಂಪಿ, ಈರಯ್ಯ ಹಿರೇಮಠ, ಭರಮಪ್ಪ ಕಾತರಕಿ, ಯಲ್ಲಪ್ಪ ಕೊಳಲಿನ, ಮಾಳಪ್ಪ ಮೂಲಿಮನಿ, ಸಿದ್ದಪ್ಪ ಕಂಬಳಿ ಮುಂತಾದವರು ಇದ್ದರು.