ಸಾರಾಂಶ
ಕುಷ್ಟಗಿ: ಬರಗಾಲ ಹಾಗೂ ಬೇಸಿಗೆಕಾಲವು ಒಟ್ಟಿಗೆ ಬಂದಿದ್ದು, ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಸಮರ್ಪಕವಾಗಿ 24/7 ಕೆಲಸ ಮಾಡಬೇಕು ಎಂದು ತಹಸೀಲ್ದಾರ ರವಿ ಅಂಗಡಿ ಸೂಚಿಸಿದರು.
ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ಬರಗಾಲದ ಕುರಿತು ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಹಳ್ಳಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ ನಿರ್ಲಕ್ಷ ವಹಿಸಬಾರದು ಎಂದರು.
ಪುರಸಭೆ ಮುಖ್ಯಾಧಿಕಾರಿ ಧರಣೆಂದ್ರಕುಮಾರ ಮಾತನಾಡಿ, ಪಟ್ಟಣದಲ್ಲಿ 23 ವಾರ್ಡಗಳಿದ್ದು, ಎಲ್ಲ ವಾರ್ಡಗಳಿಗೆ ಆಲಮಟ್ಟಿ ಡ್ಯಾಮ್ ನಿಂದ ನೀರು ಬರುತ್ತಿದೆ. ಜೆಸ್ಕಾಂನವರು ಎಲ್ಲದಕ್ಕೂ ಸ್ಪೀಡ್ ಲೈನಗೆ ನೇರವಾಗಿ ಕೊಟ್ಟ ಪರಿಣಾಮವಾಗಿ ನಮ್ಮ ಪಟ್ಟಣಕ್ಕೆ ಸಮರ್ಪಕವಾಗಿ ವೋಲ್ಟೇಜ್ ಸಿಗುತ್ತಿಲ್ಲ. ನಮ್ಮ ಕುಷ್ಟಗಿ ಪಟ್ಟಣ ವ್ಯಾಪ್ತಿಯಲ್ಲಿ ಸದ್ಯಕ್ಕೆ ನೀರಿನ ತೊಂದರೆ ಇಲ್ಲ. ಜೆಸ್ಕಾಂ ಅಧಿಕಾರಿಗಳಿಗೆ ಸಮರ್ಪಕ ವಿದ್ಯುತ್ ವಿತರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ವಾಟರ್ ಸಪ್ಲೈ ಎಇಇ ವಿಜಯಕುಮಾರ ಮಾತನಾಡಿ, ನಮ್ಮ ಕುಷ್ಟಗಿ ತಾಲೂಕಿನಲ್ಲಿ 36 ಗ್ರಾಪಂಗಳು ಬರುತ್ತಿದ್ದು, ಈ ಪೈಕಿ 173 ಗ್ರಾಮಗಳಿವೆ. ಎಲ್ಲ ಗ್ರಾಮಗಳು ಸೇರಿ 473 ಸರ್ಕಾರಿ ಬೋರ್‌ವೆಲ್‌ಗಳು ಇದ್ದು 4206 ಖಾಸಗಿ ಬೋರ್‌ವೆಲ್‌ಗಳು ಇವೆ. ಈ ಪೈಕಿ 345 ಜನರು ಬಾಡಿಗೆಯನ್ನಾಗಿ ಕೊಡುವಲ್ಲಿ ಒಪ್ಪಿಕೊಂಡಿದ್ದಾರೆ. ನಮ್ಮ ತಾಲೂಕಿಗೆ ನಾರಾಯಣಪುರ ಡ್ಯಾಮ್ ನಿಂದ ನೀರು ಬರುತ್ತಿದ್ದು, 9.3 ಮೀ. ನೀರು ಇದೆ. ಸದ್ಯಕ್ಕೆ ನಮ್ಮ ತಾಲೂಕಿಗೆ ನೀರಿನ ತೊಂದರೆ ಇಲ್ಲ ಎಂದು ಹೇಳಿದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಆನಂದ ಮಾತನಾಡಿ, ತಾಲೂಕಿನಲ್ಲಿ ವಾರಕ್ಕೆ 3810 ಟನ್ ಮೇವು ಬೇಕಾಗುತ್ತದೆ. ಈಗ ನಮ್ಮ ತಾಲೂಕಿನ ರೈತರಲ್ಲಿ 83,193 ಟನ್ ಮೇವು ಇದ್ದು, ಇನ್ನು 21 ವಾರಗಳ ಕಾಲ ಮೇವಿನ ತೊಂದರೆ ಇಲ್ಲ. ಪ್ರತಿಯೊಂದು ಹೋಬಳಿಯಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು. ಟೆಂಡರ್ ಕರೆಯುವ ಹಂತದಲ್ಲಿದೆ. 5578 ಮೇವಿನ ಕಿಟ್ಟುಗಳಲ್ಲಿ 4881 ಮೇವಿನ ಕಿಟ್ಟುಗಳನ್ನು ನೀರಾವರಿ ಇದ್ದವರಿಗೆ ವಿತರಣೆ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ತಾಪಂ ಇಒ ನಿಂಗಪ್ಪ ಮಸಳಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಮೀರ ಅಲಿ, ಶಿರಸ್ತೆದಾರ ಸತೀಶ, ಉಮೇಶಗೌಡ ಪಾಟೀಲ, ತೋಟಗಾರಿಕೆಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಎಲ್ಲ ಅಧಿಕಾರಿಗಳು ಜನರಿಗೆ ಕುಡಿಯುವ ನೀರು ಜಾನುವಾರುಗಳಿಗೆ ಮೇವಿಗಾಗಿ ಅಧಿಕಾರಿಗಳು ದಿನದ 24 ತಾಸು ಕೆಲಸ ಮಾಡಬೇಕು. ತೊಂದರೆ ಕಂಡು ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ತಹಸೀಲ್ದಾರ ರವಿ ಅಂಗಡಿ.ನೀರಿನ ಕೊರತೆ ಉಂಟಾದ ಗ್ರಾಮದಲ್ಲಿ ಟ್ಯಾಂಕರ್ ಅಥವಾ ಬಾಡಿಗೆಯ ಬೋರ್‌ವೆಲ್ ಮೂಲಕ ನೀರು ಕೊಡಲು ಪಿಡಿಒಗಳಿಗೆ ತಿಳಿಸಲಾಗಿದೆ. ಈ ಕುರಿತು ಮೊದಲೇ ಮಾಹಿತಿ ನೀಡಬೇಕು ಎನ್ನುತ್ತಾರೆ ಕುಷ್ಟಗಿ ಇಒ ತಾಪಂ ನಿಂಗಪ್ಪ ಮಸಳಿ.