ವಿಚ್ಚೇದನದ ಸುದ್ದಿಗಳ ವೈಭವೀಕರಣಗೊಳಿಸುವುದು ಸಲ್ಲ

| Published : Jul 20 2024, 12:48 AM IST

ಸಾರಾಂಶ

dont encourage divorce news in media

-ಭೋವಿ ಗುರುಪೀಠದಲ್ಲಿ ನಡೆದ ವಧು-ವರರ ಅನ್ವೇಷಣಾ ಸಮಾರಂಭದಲ್ಲಿ ಡಾ.ಶಾಂತವೀರ ಶ್ರೀ

--------

ಕನ್ನಡಪ್ರಭವಾರ್ತೆ ಚಿತ್ರದುರ್ಗ

ವಿಚ್ಚೇದನದಂತಹ ಸುದ್ದಿಗಳಿಗೆ ಮಾಧ್ಯಮಗಳು ವೈಭವೀಕರಣ ಮಾಡುವುದು ತರವಲ್ಲ ಎಂದು ಹೊಸದುರ್ಗ ಕುಂಚಿಟಿ ಮಹಾ ಸಂಸ್ಥಾನ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ದೀಕ್ಷಾ ರಜತ ಮಹೋತ್ಸವದ ಪ್ರಯುಕ್ತ ಭೋವಿ ಗುರುಪೀಠದಲ್ಲಿ ನಡೆದ ವಧು-ವರರ ಅನ್ವೇಷಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲಿಯೂ ವಿವಾಹವೆಂಬುದು ಪ್ರಮುಖ ಘಟ್ಟ. ನಗರೀಕೃತ ಜೀವನದಲ್ಲಿ ವಿವಾಹ ಸಂಬಂಧಗಳು ಬಿರುಕು ಬಿಟ್ಟುಕೊಳ್ಳುತ್ತಿರುವುದು ನೋವಿನ ಸಂಗತಿ. ವಿಚ್ಚೇದನಗಳ ವೈಭವೀಕರಣ ಕೌಟುಂಬಿಕ ಬುನಾದಿಗಳನ್ನು ಅಲುಗಾಡಿಸಿದಂತಿದೆ ಎಂದರು.

ಸಾವಿರಾರು ಸುಳ್ಳು ಹೇಳಿ ಒಂದು ಮದುವೆ ಮಾಡಿ ಎಂಬ ಗಾಧೆ ಮಾತಿಗೆ ವ್ಯತಿರಿಕ್ತವಾಗಿ ಸುಳ್ಳು, ಮೋಜಿಗೆ ಒಳಗಾಗಿ ಅನೇಕರು ಬದುಕು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಸಮುದಾಯದ ಮಠಗಳು ಧಾರ್ಮಿಕ ಕೇಂದ್ರಗಳಾಗಿ ಧರ್ಮ, ಸಂಸ್ಕಾರ, ಸಂಸ್ಕೃತಿ ನೀಡಿ ಕುಟುಂಬಗಳನ್ನು ಕೂಡಿಸಲು ವಧು-ವರರ ಸಮಾವೇಶ ಸಹಕಾರಿಯಾಗಲಿದೆ. ಕೌಟುಂಬಿಕ ಕಲಹಗಳಿಗೆ ಮಠಗಳು ಧಾರ್ಮಿಕ ನ್ಯಾಯಾಲಯಗಳಾಗಿ, ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳಾಗಿ, ನಿರ್ಗತಿಕರಿಗೆ ವೃದ್ದಾಶ್ರಮಗಳಾಗಿ, ಅಬಲರಿಗೆ ಸಾಂತ್ವನ ಕೇಂದ್ರಗಳಾಗಿ ಕೆಲಸ ಮಾಡುತ್ತಿರುವುದಕ್ಕೆ ಸಮಾಜ ಮತ್ತು ಸಮುದಾಯ ಸಂತೋಷ ಪಡಬೇಕು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪರಿಶಿಷ್ಠ ಜಾತಿ ಭೋವಿ ಸಮಾಜದ ಗುರುಗಳಾಗಿ ಪಟ್ಟಕ್ಕೇರಿ 25 ವರ್ಷಗಳಾಗಿದೆ. ಸರ್ವ ಸಮಾಜಕ್ಕೂ ಬೆಳಕು, ಭರವಸೆ ನೀಡುವಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯಾದ್ಯಂತ ಹದಿನೈದು ಲಕ್ಷಕ್ಕೂ ಹೆಚ್ಚು ಕಿಮೀ ಸುತ್ತಾಡಿ ಭೋವಿ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿರುವ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಮರ್ಪಣಾ ಭಾವದಿಂದ ರಾಷ್ಟ್ರದ ಗಮನ ಸೆಳೆಯುವ ಗಟ್ಟಿ ವ್ಯಕ್ತಿತ್ವ ಹೊಂದಿ ಜನಮನ್ನಣೆ ಗಳಿಸುತ್ತಿದ್ದಾರೆ. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಜೊತೆಗೆ ವಧು-ವರರ ಮುಖಾಮುಖಿ ಮಾಡಿಸುವ ಮೂಲಕ ಕೌಟುಂಬಿಕ ವ್ಯವಸ್ಥೆ ಗಟ್ಟಿಗೊಳಿಸುವ ಕಾಯಕ ನಿರಂತರ ಸಾಗಿದೆ ಎಂದು ಹೇಳಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪಟ್ಟಕ್ಕೇರಿ 25 ವರ್ಷಗಳಾಗಿದೆ. ಅಂದಿನಿಂದ ಇಲ್ಲಿಯತನಕ ಚದುರಿ ಹೋಗಿರುವ ನಮ್ಮ ಸಮಾಜವನ್ನು ಸಂಘಟಿಸುವಲ್ಲಿ ಶ್ರಮಿಸುತ್ತಿದ್ದು, ಎಲ್ಲರಿಗೂ ಗೌರವ ತರುವಲ್ಲಿ ಸಾಗುತ್ತಿದ್ದಾರೆ. ದೀಕ್ಷಾ ರಜತ ಮಹೋತ್ಸವದಲ್ಲಿ ವಧು-ವರರ ಅನ್ವೇಷಣೆಗೆ ಅವಕಾಶ ಕಲ್ಪಿಸಿದ್ದರಿಂದ ಬೇಡಿಕೆ ಹೆಚ್ಚಾಗಿ 200 ಕ್ಕೂ ಅಧಿಕ ಅನ್ವೇಷಣೆ ನಡೆಯುತ್ತಿದೆ. ಭೋವಿ ಸಮಾಜವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸ್ವಾಮೀಜಿ ಪರಿಶ್ರಮ ಅಪಾರ ಎಂದು ಗುಣಗಾನ ಮಾಡಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವಲಿಂಗಮೂರ್ತಿ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮೀಜಿ, ಕುಂಬಾರ ಗುಂಡಯ್ಯ ಮಹಾಸ್ವಾಮೀಜಿ, ವೇಮನಾನಂದ ಸ್ವಾಮೀಜಿ, ಇಮ್ಮಡಿ ಮೇದಾರ ಕೇತೇಶ್ವರ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಗವಿ ಸಿದ್ದೇಶ್ವರ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪ್ರಸನ್ನಾನಂದ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಬಸವ ಪ್ರಸಾದ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಕೆಪಿಸಿಸಿ ಕಾರ್ಯದರ್ಶಿ ನೇರಲಗುಂಟೆ ರಾಮಪ್ಪ ಇದ್ದರು.

----------------------

ಪೋಟೋ: 19 ಸಿಟಿಡಿ8

ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮೀಜಿಗಳ ದೀಕ್ಷಾ ರಜತ ಮಹೋತ್ಸವ ಪ್ರಯುಕ್ತ ವಧು-ವರರ ಅನ್ವೇಷಣೆ ಸಭಾಕಾರ್ಯಕ್ರಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.

---