ನದಿಗಳು ಭೂತಾಯಿಯ ರಕ್ತನಾಳಗಳು. ಅವುಗಳಿಗೆ ಘಾಸಿ ಉಂಟಾದರೆ ಮಾನವರ ಮೇಲೆ ನೇರವಾಗಿ ಪರಿಣಾಮ ಎದುರಾಗಲಿದೆ.

ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಶಿರಸಿ

ನದಿಗಳು ಭೂತಾಯಿಯ ರಕ್ತನಾಳಗಳು. ಅವುಗಳಿಗೆ ಘಾಸಿ ಉಂಟಾದರೆ ಮಾನವರ ಮೇಲೆ ನೇರವಾಗಿ ಪರಿಣಾಮ ಎದುರಾಗಲಿದ್ದು, ಪರಿಸರದ ಜತೆ ನದಿಗಳನ್ನು ರಕ್ಷಿಸುವ ಹೊಣೆ ಭೂತಾಯಿಯ ಮಕ್ಕಳಾದ ನಮ್ಮದಾಗಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಭಾನುವಾರದ ನಗರದ ಟಿಎಸ್‌ಎಸ್ ಸಭಾಂಗಣದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ತೋಟಗಾರ್ಸ್‌ ಕೋ ಆಪ್‌ ಸೇಲ್‌ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪಶ್ವಿಮ ಘಟ್ಟ ನದಿ ಕಣಿವೆಗಳ ಸಂರಕ್ಷಣೆ ಹಾಗೂ ಬೃಹತ್ ಯೋಜನೆಗಳ ಪರಿಣಾಮ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ, ಕರಾವಳಿಯಲ್ಲಿ ಕೇಣಿ ಬಂದರು, ಶರಾವತಿ ಭೂಗರ್ಭ ಯೋಜನೆಯನ್ನು ಅನುಷ್ಠಾನಗೊಳಿಸಲು ಹೊರಟಿದೆ. ನದಿ ನೀರು ಸಹಜವಾಗಿ ಹರಿದರೆ ಪರಿಸರದಲ್ಲಿ ಸಮತೋಲನೆಯಲ್ಲಿ ಇರುತ್ತದೆ. ಸಹಜವಾದ ನೀರಿನ ಹರಿವು ತಿರುವು ಮಾಡಿದರೆ ಅಸಮತೋಲನ ಉಂಟಾಗಿ ಮೀನುಗಾರಿಕೆ, ಕೃಷಿ, ಅರಣ್ಯದ ವನ್ಯಜೀವಿ, ಭೂಮಿಯ ಮೇಲೆ ಪರಿಣಾಮ ಬೀರಲಿದೆ.

ವೈಜ್ಞಾನಿಕ ಅಂಶಗಳನ್ನು ಕಲೆ ಹಾಕುವುದು ಅತ್ಯವಶ್ಯ. ಅದನ್ನು ಸರ್ಕಾರ, ನ್ಯಾಯಾಲಯ, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಚಿಂತಕರ ಮುಂದಿಟ್ಟಾಗ ಹೋರಾಟಕ್ಕೆ ಬಲ ಹೆಚ್ಚುತ್ತದೆ. ವಾತಾವರಣದಲ್ಲಿ ವೈಜ್ಞಾನಿಕ ಹೋರಾಟವು ಒಂದು ಭಾಗವಾಗಿದೆ. ದೀರ್ಘಕಾಲದ ಪ್ರಸ್ತಾವನೆಯ ಪರಿಣಾಮ ಇದ್ದು, ಪ್ರಾಮಾಣಿಕರ ಗಮನಸೆಳೆಯುವುದರ ಜತೆ ನ್ಯಾಯಾಲಯಕ್ಕೂ ಮನದಟ್ಟಾಗುತ್ತದೆ. ಪ್ರಸ್ತಾವಿತ ಯೋಜನೆಗಳಿಗೆ ಹೊಸ ಹೊಸ ಆವಿಷ್ಕಾರ ಆಗಿದ್ದು, ಆದ್ದರಿಂದ ಗೋಷ್ಠಿ ಪ್ರಸ್ತುತ ಮತ್ತು ಅವಕಶ್ಯಕವಾಗಿದೆ ಎಂದರು.

ನದಿ ಪಾತ್ರ ಬದಲಾದರೆ ದುಷ್ಪರಿಣಾಣ ಖಂಡಿತ ಎದುರಾಗುತ್ತದೆ. ಎತ್ತಿನ ಹೊಳೆ ಎತ್ತಲಾರದಷ್ಟು ಹೂಳು ತುಂಬಿದೆ. ಯೋಜನೆ ಕಾರ್ಯಗತವಾದರೂ ಅದರಿಂದ ಪ್ರಯೋಜನವಾಗಿಲ್ಲ. ರಾಜ್ಯ ಮಟ್ಟದ ವಿಚಾರ ಸಂಕಿರಣ ಸರ್ವತೋಮುಖ ಚಿಂತನೆ ಕಾರ್ಯಕ್ರಮವಾಗಿದೆ ಎಂದರು.

ಟಿಎಸ್ಎಸ್‌ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಪಶ್ಚಿಮ ಘಟ್ಟ ಉಳಿಸುವಿಕೆಗೆ ಧಾರಣಾಶಕ್ತಿಯ ಕುರಿತು ವರದಿಯಲ್ಲಿ ಅಡಿಕೆಮರಗಳ ಪರಿಸರ ರಕ್ಷಿಸುವ ಪರಿಣಾಮವನ್ನು ಸೇರಿಸಬೇಕಿದೆ. ಪರಿಸರ ಹೋರಾಟದ ಸಂಘಟನೆಗಳಿಗೆ ಟಿಎಸ್ಎಸ್ ಬೆಂಬಲವಾಗಿ ನಿಲ್ಲುತ್ತದೆ ಎಂದರು.

ಪರಿಸರಶಾಸ್ತ್ರಜ್ಞ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ, ಭೂಗರ್ಭ ಶಾಸ್ತ್ರಜ್ಞ ಡಾ. ಶ್ರೀನಿವಾಸ ರೆಡ್ಡಿ, ನೀರಾವರಿ ತಜ್ಞ ಡಾ. ರಾಜೇಂದ್ರ ಪೋದ್ದಾರ, ಪರಿಸರ ಅರ್ಥಶಾಸ್ತ್ರಜ್ಞ ಪಿ.ಎಂ. ಕುಮಾರಸ್ವಾಮಿ, ಶ್ರೀಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸ್ವಾಗತಿಸಿದರು. ಸಂಚಾಲಕ ಡಾ. ಕೇಶವ ಕೊರ್ಸೆ ಪ್ರಾಸ್ತಾವಿಕ ಮಾತನಾಡಿದರು. ಸುರೇಶ ಹಕ್ಕಿಮನೆ ನಿರೂಪಿಸಿದರು.