ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸೈನಿಕರು ಸಮಾಜದಿಂದ ಏನೂ ಕೇಳುವುದಿಲ್ಲ, ಅವರಿಗೆ ಮಾನ ಸನ್ಮಾನಗಳೂ ಬೇಡ, ಆದರೆ ಎಂದಿಗೂ ಸೈನಿಕರನ್ನು ಅವಹೇಳನ ಮಾತ್ರ ಮಾಡಬೇಡಿ ಎಂದು ನಿವೃತ್ತ ಯೋಧ ಕರ್ನಲ್ ಐ.ಎನ್.ರೈ ಹೇಳಿದರು.ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸೈನಿಕರು ಕಚೇರಿಗಳಿಗೆ ಬಂದಾಗ ಸಾಧ್ಯವಾದರೆ ಕೆಲಸ ಮಾಡಿಕೊಡಿ, ಹಾಗೆಂದು ತೆಗಳಲು ಹೋಗಬೇಡಿ. ಊರಿನಲ್ಲಿ ಸೈನಿಕರು ಇದ್ದಾರೆ ಎಂದರೆ, ಅದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ. ದೇಶಕ್ಕಾಗಿ ಬದುಕುವ ಸೈನಿಕರಿಗೆ ಅವಶ್ಯವಿದ್ದರೆ ಸಹಾಯ ಮಾಡಿ ಎಂದರು.ವಾರ್ಷಿಕವಾಗಿ ಎಲ್ಲಿಗೋ ಪ್ರವಾಸ ಹೋಗುವ ಬದಲು ಜಮ್ಮು-ಕಾಶ್ಮೀರ ಸೇರಿದಂತೆ ಸೈನಿಕರು ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿಸುವ ಸ್ಥಳಗಳಗೆ ಭೇಟಿ ನೀಡಿ ವಾಸ್ತವತೆಯನ್ನು ಅರಿಯಿರಿ ಎಂದು ಅವರು ಕಿವಿ ಮಾತು ಹೇಳಿದರು. ಇದೇ ಸಂದರ್ಭ ಅವರು ಕಾರ್ಗಿಲ್ ಯುದ್ಧದ ಅನುಭವ ಕಥನ ತೆರೆದಿಟ್ಟರು. ದೇಶ ರಕ್ಷಣೆ ವೇಳೆ ಹುತಾತ್ಮರಾದ ಪಾಲಿಕೆ ವ್ಯಾಪ್ತಿಯ ಯೋಧರಾದ ಹರೀಶ್ ಕುಮಾರ್ ಮತ್ತು ಮುರಳೀಧರ ಇವರ ಕುಟುಂಬಕ್ಕೆ ತಲಾ 5 ಲಕ್ಷ ರು.ಗಳ ಆರ್ಥಿಕ ನೆರವನ್ನು ಮೇಯರ್ ಸುಧೀರ್ ಶೆಟ್ಟಿ ಅವರು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ವೀರ ಮರಣ ಹೊಂದಿದ ಅಳಪೆ ಉತ್ತರ ಉಮೀಕಾನದ ಬಿಎಸ್‌ಎಫ್ ಹವಾಲ್ದಾರ್ ಹರೀಶ್ ಕುಮಾರ್ ಅವರ ಪತ್ನಿ ಗೀತಾಕುಮಾರಿ ಹಾಗೂ ಶಕ್ತಿನಗರ ಮುಗ್ರೋಡಿಯ ಪ್ಯಾರಾ ಮಿಲಿಟರಿ ಹೆಡ್ ಕಾನ್‌ಸ್ಟೇಬಲ್ ಮುರಳೀಧರ ಬಿ.ಎಸ್. ಅವರ ಪತ್ನಿ ಉಷಾಕಿರಣ್ ಅವರಿಗೆ ಚೆಕ್ ಹಸ್ತಾಂತರಿಸಿದರು. ನಿವೃತ್ತ ಯೋಧರನ್ನು ಗೌರವಿಸಲಾಯಿತು.
ಮೇಯರ್ ಸುಧೀರ್ ಶೆಟ್ಟಿ ಪ್ರಾಸ್ತಾವಿಕದಲ್ಲಿ, ಗಡಿ ಕಾಯುವ ಯೋಧರಿಂದಾಗಿ ನಾವು ಇಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಯೋಧರನ್ನು ಸದಾ ಸ್ಮರಿಸುವ, ಬೆಂಬಲಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಪಾಲಿಕೆ ವ್ಯಾಪ್ತಿಯ ನಿವಾಸಿಗಳಾಗಿದ್ದು, ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಹುತಾತ್ಮರಾದ ಎಲ್‌ಟಿ ರೊನಾಲ್ಡ್ ಕೆವಿನ್ ಸೆರಾವೊ ಹಾಗೂ ಕ್ಯಾ.ಪ್ರಾಂಜಲ್ ಕುಟುಂಬಕ್ಕೂ ತಲಾ 5 ಲಕ್ಷ ರು.ಗಳ ಆರ್ಥಿಕ ನೆರವು ನೀಡಲಾಗುವುದು. ಅಲ್ಲದೆ ಇವರಿಬ್ಬರ ನೆನಪನ್ನು ಚಿರಸ್ಥಾಯಿಯಾಗಿರುವ ನಿಟ್ಟಿನಲ್ಲಿ ಸೆರಾವೋ ಹೆಸರಲ್ಲಿ ರಸ್ತೆ ಹಾಗೂ ಪ್ರಾಂಜಲ್ ಹೆಸರಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದರು.ಉಪ ಮೇಯರ್ ಸುನಿತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಆಯುಕ್ತ ಆನಂದ್ ಅಲ್ಲದೆ ಸುಮಾರು 36ಕ್ಕೂ ಅಧಿಕ ಮಂದಿ ನಿವೃತ್ತ ಯೋಧರು ಇದ್ದರು.
ಜಗದೀಶ್ ಶೆಟ್ಟಿ ಆಶಯ ಗೀತೆ ಹಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ ಸ್ವಾಗತಿಸಿದರು. ಕಿರಣ್ ಕುಮಾರ್ ಕೋಡಿಕಲ್ ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು. ಪಾಲಿಕೆಯಲ್ಲಿ ಕಾರ್ಗಿಲ್ ಯುದ್ಧಭೂಮಿಯ ಚಿತ್ರಣ!ಕಾರ್ಗಿಲ್ ಯುದ್ಧಕ್ಕೆ 25 ವರ್ಷವಾಗಿದ್ದು, ರಜತೋತ್ಸವ ಹಿನ್ನೆಲೆಯಲ್ಲಿ ಪಾಲಿಕೆಯು ತನ್ನ ಕಚೇರಿಗೆ ಕಾರ್ಗಿಲ್ ನೆನಪಿನ ಪ್ರವೇಶ ದ್ವಾರವನ್ನು ಅಳವಡಿಸಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದೆ.
ತಿರಂಗಾ ಬಟ್ಟೆಗಳ ಮೂಲಕ ಸ್ವಾಗತ ಕಮಾನು ರಚಿಸಿದ್ದು, ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಕಾರ್ಗಿಲ್ ಯುದ್ಧಭೂಮಿಯ ಚಿತ್ರಣ, ಭಾರತ ಸೈನಿಕರು ಕೆಚ್ಚೆದೆಯಿಂದ ಹೋರಾಡುತ್ತಿರುವ ದೃಶ್ಯ, ವಿಜಯದ ಸಂಕೇತವಾಗಿ ಕಾರ್ಗಿಲ್ ಯುದ್ಧಭೂಮಿಯಲ್ಲಿ ಸೈನಿಕರಿಂದ ತಿರಂಗಾ ಹಾರಾಟದ ಚಿತ್ರಣ ಎದುರುಗೊಳ್ಳುತ್ತದೆ. ಮುಂದೆ ಹೋದಾಗ ಕಚೇರಿಯ ಒಳಭಾಗದಲ್ಲೂ ಕಾರ್ಗಿಲ್ ಯುದ್ಧಭೂಮಿಯ ಚಿತ್ರಣ, ಎರಡೂ ಬದಿಗಳಲ್ಲಿ ಹುತಾತ್ಮ ಯೋಧರಾದ ಕ್ಯಾ.ಪ್ರಾಂಜಲ್ ಮತ್ತು ಎಫ್‌ಎಲ್‌ಟಿ ಎಲ್‌ಟಿ ರೊನಾಲ್ಡ್ ಕೆವಿನ್ ಸೆರಾವೋ ಅವರ ಬೃಹತ್ ಕಟೌಟ್ ಇರಿಸಲಾಗಿದೆ.