ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದಿರಿ: ಮನೋಹರ್‌

| Published : May 22 2024, 12:47 AM IST

ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದಿರಿ: ಮನೋಹರ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಪಟ್ಟಣ ಪಂಚಾಯಿತಿಗೆ ಪದೇ ಪದೇ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಮರಿಯಮ್ಮನಹಳ್ಳಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್‌ ಸೂಚನೆ ನೀಡಿದ್ದಾರೆ.

ಮರಿಯಮ್ಮನಹಳ್ಳಿ: ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಪಟ್ಟಣ ಪಂಚಾಯಿತಿಗೆ ಪದೇ ಪದೇ ಅಲೆದಾಡುವುದನ್ನು ತಪ್ಪಿಸಬೇಕು. ಸಾರ್ವಜನಿಕರಿಗೆ ಸುಗಮ ಸೇವೆ ಕಲ್ಪಿಸಿಕೊಡುವ ರೀತಿಯಲ್ಲಿ ಪಪಂ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕಚೇರಿಗೆ ಸಾರ್ವಜನಿಕರನ್ನು ಅಲೆದಾಡಿಸದಂತೆ ಕೆಲಸ ಮಾಡಿಕೊಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್‌ ಸೂಚನೆ ನೀಡಿದ್ದಾರೆ.

ಇಲ್ಲಿನ ಪಪಂ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಫಾರಂ-3, ಖಾತಾ ಬದಲಾವಣೆ ಇತರ ಸಾರ್ವಜನಿಕರ ಸೇವೆಗಳನ್ನು ಮಧ್ಯವರ್ತಿಗಳ ಹಾವಳಿಯಿಂದಾಗಿ ವಿಳಂಬವಾಗಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಪರಿಹಾರ ಒದಗಿಸುವ ಕುರಿತು ನಡೆಸಿದ ಸಾರ್ವಜನಿಕರ ಸಮಸ್ಯೆಗಳ ಆಲಿಕೆಯ ಸಭೆಯ ಆನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪಪಂಗೆ ಸಂಬಂಧಿಸಿದಂತೆ ಫಾರಂ-3, ಖಾತಾ ಬದಲಾವಣೆ, ಕಟ್ಟಡ ಪರವಾನಗಿ, ಉದ್ಯಮ ಪರವಾನಗಿ ಇನ್ನಿತರ ಸಾರ್ವಜನಿಕರ ಸೇವೆಗಳನ್ನು ಮಧ್ಯವರ್ತಿಗಳ ಹಾವಳಿಯಿಂದಾಗಿ ವಿಳಂಬವಾಗಿ ಸಾರ್ವಜನಿಕರಿಗೆ ತಲುಪಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರತಿ ಸೋಮವಾರ ಜಿಲ್ಲೆಯ ಎಲ್ಲ ಪಪಂ, ಪುರಸಭೆ, ನಗರಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಸೂಚಿಸಿದ್ದಾರೆ. ಅನೇಕ ಜನರಲ್ಲಿ ಫಾರಂ-3 ನೀಡುವ ಬಗ್ಗೆ ಕೇಳುತ್ತಿದ್ದಾರೆ. ತೆರಿಗೆ ಕಟ್ಟಿದ್ದರೆ, ಅದರ ದಾಖಲೆಗಳು ಸರಿ ಇದ್ದರೆ ಅದನ್ನು ಪರಿಶೀಲಿಸಿ 15 ದಿನಗಳ ಒಳಗೆ ಫಾರಂ-3 ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗುವಂತಿಲ್ಲ ಎಂದು ಅಧಿಕಾರಿಗಳಿಗೆ ಖಡಕ್‌ ಆಗಿ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

ಮರಿಯಮ್ಮನಹಳ್ಳಿಯಲ್ಲಿ ಫಾರಂ-3 ದೊಡ್ಡ ಸಮಸ್ಯೆಯಾಗಿದೆ. ಈಗಾಗಲೇ ಯಾರ್ಯಾರು ಫಾರಂ-3 ಕೇಳಿದ್ದಾರೋ ಅವರಿಗೆ ನೀಡಬೇಕು. ಈಗ ಹೊಸದಾಗಿ ಅರ್ಜಿ ಸಲ್ಲಿಸಿಯೂ ಫಾರಂ-3 ಪಡೆದುಕೊಳ್ಳಬಹುದು. ಒಂದು ವೇಳೆ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡಿದರೆ ನಮ್ಮನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಪಪಂಗೆ ಅಲೆದಾಡುವಂತಿಲ್ಲ. ಕಡ್ಡಾಯವಾಗಿ ಪೋಸ್ಟ್‌ಗೆ ಕಳುಹಿಸಿಕೊಡಬೇಕು. ಇಲ್ಲವೇ ಕಚೇರಿಗೆ ಬಂದಾಗ ತಕ್ಷಣವೇ ತೆಗೆದುಕೊಡಬೇಕು. ಎಂದರು.

ಈಗಾಗಲೇ ತುಂಗಭದ್ರಾ ಜಲಾಶಯದಿಂದ ಮರಿಯಮ್ಮನಹಳ್ಳಿಯ ಹೊಲವಲಯದ ವೆಂಕಟಾಪುರ ರಸ್ತೆಯ ವರೆಗೆ ಪೈಪ್‌ಲೈನ್‌ ಬಂದಿದೆ. ಸುಮಾರು ₹50 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಿ 4 ತಿಂಗಳ ಒಳಗೆ ಪ್ರತಿ ಮನೆಗೂ ಕುಡಿಯುವ ನೀರು ನೀಡುತ್ತೇವೆ ಎಂದರು.

ಪಪಂ ಮುಖ್ಯಾಧಿಕಾರಿ ಖಾಜಾ ಎಂ., ಎಂಜಿನಿಯರ್‌ ಹುಸೇನ್‌ ಬಾಷಾ ಹಾಗೂ ಪಪಂ ಸಿಬ್ಬಂದಿ ಉಪಸ್ಥಿತರಿದ್ದರು.