ಸಾರಾಂಶ
ಏ. 14ರಿಂದ 20ರ ವರೆಗೆ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಈ ಬಾರಿ ಅಗ್ನಿ ಸುರಕ್ಷತ ಭಾರತವನ್ನು ಹುಟ್ಟು ಹಾಕಲು ಒಂದಾಗೋಣ ಎನ್ನುವ ಧ್ಯೇಯ ವಾಕ್ಯವನ್ನಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ಕುಷ್ಟಗಿ:
ಅಗ್ನಿ ಅವಘಡ ಸಂಭವಿಸಿದಾಗ ನಾಗರಿಕರು ಆತಂಕಕ್ಕೆ ಒಳಗಾಗದೆ ಸಂಯಮದಿಂದ ಇಲಾಖೆ ನೀಡಿರುವ ಸಲಹೆ-ಸೂಚನೆ ಪಾಲಿಸಬೇಕೆಂದು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ರಾಜು ನರಸಪ್ಪ ಹೇಳಿದರು.ಅಗ್ನಿಶಾಮಕ ಸೇವಾ ಸಪ್ತಾಹದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಜಾಗೃತಿಯ ಕುರಿತು ಕರಪತ್ರ ಹಂಚುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಏ. 14ರಿಂದ 20ರ ವರೆಗೆ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಈ ಬಾರಿ ಅಗ್ನಿ ಸುರಕ್ಷತ ಭಾರತವನ್ನು ಹುಟ್ಟು ಹಾಕಲು ಒಂದಾಗೋಣ ಎನ್ನುವ ಧ್ಯೇಯ ವಾಕ್ಯವನ್ನಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಪ್ತಾಹದ ಅವಧಿಯಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಸ್ ನಿಲ್ದಾಣ, ವಿವಿಧ ಸಂಘ-ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ವಾಣಿಜ್ಯ ಸಂಕಿರಣಗಳಲ್ಲಿ ಉಪನ್ಯಾಸ, ಪ್ರಾತ್ಯಕ್ಷಿಕೆ, ಅಣಕು ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ನಂತರ ಅಗ್ನಿಶಾಮಕ ಠಾಣೆ ಸಿಬ್ಬಂದಿ, ಪ್ರಮುಖ ವೃತ್ತ, ಸಾರ್ವಜನಿಕ ಆಸ್ಪತ್ರೆ, ಅಂಗಡಿ-ಮುಗ್ಗಟ್ಟುಗಳಿಗೆ ಭೇಟಿ ನೀಡಿ ಕರಪತ್ರ ವಿತರಿಸಿದರು.
ಆಕಸ್ಮಿಕ ಬೆಂಕಿ ಕುರಿತು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಸಿಲಿಂಡರ್ ಬಳಕೆ ಕುರಿತು, ಸೋರಿಕೆ ಕಂಡು ಬಂದಲ್ಲಿ ಅದರ ನಿರ್ವಹಣೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡಗಳ ಕುರಿತು ಜಾಗೃತಿ ಮೂಡಿಸಿದರು.ಅಗ್ನಿಶಾಮಕ ಠಾಣೆಯ ಕಚೇರಿಯಲ್ಲಿ ಠಾಣಾಧಿಕಾರಿ ರಾಜು ನರಸಪ್ಪ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಅಗ್ನಿ ಅವಘಡದಲ್ಲಿ ಹುತಾತ್ಮರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಾಯಿತು.