ವಚನಗಳು, ತತ್ವಪದಗಳು ಹಾಗೂ ವಿವಿಧ ಗ್ರಂಥಗಳನ್ನು ಅಧ್ಯಯನ ಮಾಡಿದ ಸಮುದಾಯವಾಗಿದೆ

ಹೊಸಪೇಟೆ: ದೇವದಾಸಿ ಸಮುದಾಯದ ಮಹಿಳೆಯರನ್ನು ಕನಿಕರದಿಂದ ನೋಡುವ ಬದಲು ಗೌರವದಿಂದ ಕಾಣಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ.ಶೈಲಜಾ ಇಂ. ಹಿರೇಮಠ ಹೇಳಿದರು.

ಹಂಪಿ ಕನ್ನಡ ವಿವಿ ದೃಶ್ಯಕಲಾ ವಿಭಾಗದಿಂದ ಕಲಾಕೃತಿಗಳ ರಚನೆಯ ಭಾಗವಾಗಿ ದೇವದಾಸಿ ಪರಂಪರೆ ಮತ್ತು ಸಂಸ್ಕೃತಿ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವದಾಸಿ ಸಮುದಾಯವನ್ನು ಕೇವಲ ಸಾಮಾಜಿಕ ಸಮಸ್ಯೆಯ ದೃಷ್ಟಿಯಿಂದ ನೋಡದೆ, ಅದರ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕ ಹಿನ್ನೆಲೆಯನ್ನು ಅರ್ಥೈಸಿಕೊಳ್ಳುವುದು ಅಗತ್ಯ. ಈ ಸಮುದಾಯವು ಅಕ್ಷರಜ್ಞಾನ, ಸಾಹಿತ್ಯ ಹಾಗೂ ಕಲಾ ಪರಂಪರೆಯೊಂದಿಗೆ ಆಳವಾದ ಸಂಬಂಧ ಹೊಂದಿದ್ದು, ವಚನಗಳು, ತತ್ವಪದಗಳು ಹಾಗೂ ವಿವಿಧ ಗ್ರಂಥಗಳನ್ನು ಅಧ್ಯಯನ ಮಾಡಿದ ಸಮುದಾಯವಾಗಿದೆ ಎಂದು ಹೇಳಿದರು.

ಎಲ್ಲಮ್ಮನ ಪೌರಾಣಿಕ ಕಥೆ ಹಾಗೂ ಅದರ ಸಾಂಸ್ಕೃತಿಕ ಹಿನ್ನೆಲೆಯನ್ನು ತಿಳಿದುಕೊಂಡರೆ ದೇವದಾಸಿ ಸಮುದಾಯದ ಜೀವನ ಮತ್ತು ಅನುಭವಗಳನ್ನು ಚಿತ್ರಕಲೆ ಅಥವಾ ಇತರ ಕಲಾಕೃತಿಗಳ ಮೂಲಕ ಸಮರ್ಪಕವಾಗಿ ಚಿತ್ರಿಸಲು ಸಾಧ್ಯವಾಗುತ್ತದೆ. ದೇವದಾಸಿ ಸಮುದಾಯದ ಮಹಿಳೆಯರನ್ನು ಕೇವಲ ಲೈಂಗಿಕ ದೃಷ್ಟಿಕೋನದಿಂದ ನೋಡುವುದು ತಪ್ಪು. ತಮ್ಮ ಅಧ್ಯಯನದ ಅವಧಿಯಲ್ಲಿ ಕೊನೆಯವರೆಗೂ ಕನ್ಯೆಯರಾಗಿ ಬದುಕಿದ ದೇವದಾಸಿಯರನ್ನೂ ತಾವು ಕಂಡಿರುವುದಾಗಿ ತಿಳಿಸಿದರು.

ಹಿಂದಿನ ಕಾಲದಲ್ಲಿ ದೇವದಾಸಿ ಪದ್ಧತಿ ನಿರ್ದಿಷ್ಟ ಜಾತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇತಿಹಾಸದಲ್ಲಿ ವಿವಿಧ ಕಾರಣಗಳಿಂದ, ಅದರಲ್ಲೂ ಹಿಂಸೆಗೆ ಒಳಗಾದ ಅನೇಕ ಮಹಿಳೆಯರು ನೆಮ್ಮದಿ ಹಾಗೂ ಆಶ್ರಯಕ್ಕಾಗಿ ಈ ಸಮುದಾಯವನ್ನು ಸೇರಿರುವ ಉದಾಹರಣೆಗಳು ಕಂಡುಬರುತ್ತವೆ ಎಂದರು.

ದೇವದಾಸಿ ಪರಂಪರೆ ಅರ್ಥಮಾಡಿಕೊಳ್ಳಲು ಓದುವ ಅಭ್ಯಾಸ ಹಾಗೂ ಆಳವಾದ ಅಧ್ಯಯನ ಅಗತ್ಯ. ಸಮುದಾಯದ ಬಗ್ಗೆ ಪೂರ್ವಗ್ರಹಗಳನ್ನು ಬೆಳೆಸಿಕೊಳ್ಳದೆ, ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿಯೇ ಅವರನ್ನು ಅರ್ಥೈಸಬೇಕು ಎಂದರು. ದೃಶ್ಯಕಲಾ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್‌ರಾವ್ ಬಿ. ಪಂಚಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಭಾಗಗಳ ಡೀನರು, ಬೋಧಕ, ಬೋಧಕೇತರ ಸಿಬ್ಬಂದಿ, ಅಧಿಕಾರಿಗಳು, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

ದೃಶ್ಯಕಲಾ ವಿಭಾಗದ ಅತಿಥಿ ಉಪನ್ಯಾಸಕ ಡಾ.ಕೃಷ್ಣೇಗೌಡ ಸ್ವಾಗತಿಸಿದರು. ಮಮ್ತಾಜ್ ಬಿ. ನಿರೂಪಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ದೇವದಾಸಿ ಪರಂಪರೆ ಮತ್ತು ಸಂಸ್ಕೃತಿ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ. ಶೈಲಜಾ ಇಂ. ಹಿರೇಮಠ ಮಾತನಾಡಿದರು.