ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿಶೇಷಚೇತನರಿಗೆ ಅನುಕಂಪ ತೋರಿದರಷ್ಟೇ ಸಾಲದು, ಅವಕಾಶ ನೀಡಿ. ಕಾನೂನಾತ್ಮಕವಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಆರೋಗ್ಯ ಯೋಜನೆಗಳ ಸುಧಾರಣೆಯಿಂದ ಅಂಗವಿಕಲತೆ ತಾಯಿ ಗರ್ಭದಲ್ಲೆ ಕಡಿಮೆಯಾಗುತ್ತಿದೆ. ವಿಶೇಷಚೇತನರಿಗೆ ಕಾಲಕಾಲಕ್ಕೆ ಸೌಲಭ್ಯಗಳನ್ನು ತಲುಪಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕು. ತ್ರೈಮಾಸಿಕ ಕುಂದುಕೊರತೆ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು. ವಿಶೇಷಚೇತನರ ಜೊತೆಗಿರುವ ಆರೈಕೆದಾರರಿಗೂ ಸವಲತ್ತುಗಳು ದೊರೆಯಬೇಕು. ಸೌಲಭ್ಯಗಳಿಗಾಗಿ ಕಚೇರಿಗೆ ಅಲೆದಾಡಿಸಬಾರದು. ಜಿಲ್ಲಾಕೇಂದ್ರದ ಗ್ರಂಥಾಲಯ ಕಟ್ಟಡದಲ್ಲಿ ತೆರೆಯಲಾಗುವ ಬ್ರೈಲ್‌ಲಿಪಿ ಕೇಂದ್ರಕ್ಕೆ ಸಿಎಸ್‌ಆರ್ ನಿಧಿಯಿಂದ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು, ವಿಶೇಷಚೇತನರು ತಮ್ಮಲ್ಲಿರುವ ಕೀಳರಿಮೆ ಬಿಡಬೇಕು. ಸಮಾಜದಲ್ಲಿ ಇತರರಂತೆ ಪರಿಪೂರ್ಣವಾಗಿ ಬದುಕಲು ಸಾಧ್ಯವಿಲ್ಲವಾಗಿದೆ ನಿಜ, ಆದರೆ ಇದನ್ನು ಮನಗಂಡಿರುವ ಸರ್ಕಾರಗಳು ಅವರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು. ವಿಶೇಷಚೇತನರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತರಬೇತಿಯಾಗಿರುವ ಬಗ್ಗೆ ಪರಿಶೀಲಿಸಿ ವಾಹನ ಚಾಲನಾ ಪರವಾನಗಿ ನೀಡಬೇಕು ಎಂದರು.ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಾತನಾಡಿ, ಅಂಗವಿಕಲತೆಯಲ್ಲಿ 21 ಬಗೆಯ ವಿಕಲತೆಗಳಿದ್ದು, ಜಿಲ್ಲೆಯಲ್ಲಿ 17400 ವಿಶೇಷಚೇತನರನ್ನು ಗುರುತಿಸಲಾಗಿದೆ. ಈ ಪೈಕಿ 17 ಸಾವಿರಕ್ಕೂ ಹೆಚ್ಚಿನವರಿಗೆ ಯುಡಿಐಡಿ ಕಾರ್ಡ್ ನೀಡಲಾಗಿದೆ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಪ್ರತಿ ಗ್ರಾಪಂ ಮಟ್ಟದಲ್ಲಿ ಸರ್ವೇ ಮೂಲಕ ವಿಶೇಷಚೇತನರನ್ನು ಗುರುತಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಬೇಕು. ವಿಶೇಷಚೇತನ ಮಕ್ಕಳಿಗೆ ಆಟೋಟ ಚಟುವಟಿಕೆಗಳಿಗಾಗಿ ನಗರದ ಮಧ್ಯಭಾಗದ ಅರ್ಧ ಎಕರೆ ಜಾಗದಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭಾ ಉಪಾಧ್ಯಕ್ಷ ಎಚ್.ಎಸ್. ಮಮತ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ವಿಕಲತೆ ಶಾಪವಲ್ಲ. ವಿಶೇಷಚೇತನರು ಧೃತಿಗೆಡಬಾರದು. ಧೈರ್ಯವಾಗಿ ಮುನ್ನುಗ್ಗಿ ಸಾಧನೆಗೈಯ್ಯಬೇಕು ಎಂದರು. ಕಾರ್ಯಕ್ರಮದಲ್ಲಿ ವಿಶೇಷಚೇತನರ ಕಲ್ಯಾಣಕ್ಷೇತ್ರದಲ್ಲಿ ಸಾಧನೆಗೈದವರು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅರ್ಹ ವಿಶೇಷಚೇತನರಿಗೆ ಟಾಕಿಂಗ್ ಲ್ಯಾಪ್‌ಟಾಪ್, ಏರ್‌ಬೆಡ್ ಹಾಗೂ ಬ್ರೈಲ್‌ಲಿಪಿ ಕಿಟ್ ಮತ್ತು ಅಂಗಾಂಗ ದಾನ ಮಾಡಿದ ವಿಶೇಷಚೇತನರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಆರಂಭದಲ್ಲಿ ಮದ್ದೂರಿನ ಮಂಜುನಾಥ್, ತಂಡದವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮೀನಾಕ್ಷಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾ ಗ್ರಾನೈಟ್ ಮಾಲೀಕರ ಸಂಘದ ಆಧ್ಯಕ್ಷ ಜಿ.ಎಂ. ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.