ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಸ್ಪರ್ಧಾತ್ಮಕ ಯುಗದಲ್ಲಿ ಕಾಲಹರಣಕ್ಕೆ ಒಳಗಾದರೆ ಬಾಳು ಬೆಳಗಿಸಿಕೊಳ್ಳುವ ಅವಕಾಶಗಳಿಂದ ದೂರವಾದಂತೆ ಎಂಬ ಎಚ್ಚರಿಕೆ ವಿದ್ಯಾರ್ಥಿಗಳಲ್ಲಿ ಅತ್ಯಂತ ಅವಶ್ಯಕವಾಗಿದ್ದು, ನಾಳೆಗಾಗಿ ಇಂದೇ ಯೋಚಿಸಿ ಯೋಜಿಸಿ ನಡೆಯಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.ಬುಧವಾರ ತಾಲೂಕಿನ ಬೆಳಗಾಲಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನಾ ಕಲಿಕಾ ಕೇಂದ್ರ ಹಾಗೂ ಬೆಂಗಳೂರಿನ ಡ್ರೀಮ್ ಸ್ಕೂಲ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಭವಿಷ್ಯದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಓದು ಯಾವಾಗಲೂ ಫಲ ನೀಡುತ್ತದೆ. ಭವಿಷ್ಯಕ್ಕಾಗಿ ಅಧ್ಯಯನ ಬೇಕೇ ಬೇಕು. ಆದರೆ ಪಟ್ಟಣದ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಶೈಕ್ಷಣಿಕ ಸೌಲಭ್ಯಗಳು ಗ್ರಾಮೀಣ ಮಕ್ಕಳಿಗೂ ಸಿಗಲಿ ಎಂಬ ಉದ್ದೇಶದಿಂದ ಶಾಸಕ ಶ್ರೀನಿವಾಸ ಮಾನೆ ನಮ್ಮ ತಾಲೂಕಿನ ಎಲ್ಲ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಒಳ್ಳೆಯ ತರಬೇತಿ ವ್ಯವಸ್ಥೆ ಮಾಡಿದ್ದಾರೆ. ಇದರ ಫಲಿತಾಂಶ ಮಕ್ಕಳಿಗೆ ಒಳತು ಮಾಡುವುದೇ ಆಗಿದೆ. ನಮಗೆ ಪುಸ್ತಕ ಪ್ರೀತಿ ಇದ್ದರೆ ಹೊಸ ಯೋಜನೆ ಯೋಚನೆ ಫಲ ನೀಡಬಲ್ಲದು ಎಂದರು.ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಇದು ಸ್ಪರ್ಧೆಯ ಯುಗ. ಪರೀಕ್ಷೆಗಳು ನಿರ್ಭಯವಾಗಿರಬೇಕು. ತಂದೆ-ತಾಯಿ ಮಕ್ಕಳ ಮೇಲೆ ಇಟ್ಟುಕೊಂಡ ಭರವಸೆ ಈಡೇರಬೇಕು. ಸರ್ಕಾರ ಸಮಾಜ ನೀಡುವ ಒಳ್ಳೆಯ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಬದುಕು ರೂಪಿಸುವ ಸಂಕಲ್ಪ ನಿಮ್ಮದಾದರೆ ಎಲ್ಲವೂ ನಮ್ಮಿಂದ ಸಾಧ್ಯ. ಆದರೆ ಗ್ರಾಮೀಣ ಶಾಲಾ ಮಕ್ಕಳ ಭವಿಷ್ಯಕ್ಕಾಗಿ ಶಾಸಕ ಶ್ರೀನಿವಾಸ ಮಾನೆ ಪ್ರಾಥಮಿಕದಿಂದ ಕಾಲೇಜು ಹಂತದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಬೇಕಾಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗುತ್ತಿರುವುದು ಗಮನಾರ್ಹ ಸಂಗತಿ. ಮೌಲ್ಯ ಶಿಕ್ಷಣ ನಮ್ಮ ಮೊದಲ ಆದ್ಯತೆಯಾಗಿದ್ದು ಆದರ್ಶಗಳನ್ನಿಟ್ಟುಕೊಂಡು ಮುನ್ನಡೆಯೋಣ. ಅದಕ್ಕಾಗಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳೋಣ ಎಂದರು.
ಡ್ರೀಮ್ ಸ್ಕೂಲ್ ಫೌಂಡೇಶನ್ ಮಾರ್ಗದರ್ಶಕಿ ಮಂಗಳಾ ಮಠದ, ಪ್ರಶಾಂತ, ಮುಖ್ಯೋಪಾಧ್ಯಾಯ ಸುರೇಶ ಶೆಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಮಂಜಪ್ಪ, ಶ್ರೀನಿವಾಸ ದೀಕ್ಷಿತ, ಸಿದ್ದು ಗೌರಣ್ಣನವರ, ಸುರೇಶ ತಂಗೋಡ, ಎ.ವಿ. ಕರ್ಕಿ, ಪ್ರತಿಭಾ ಪಾಟೀಲ, ಜ್ಯೋತಿ ಎಂ., ಕಲ್ಲೇಶಪ್ಪ ಬಡಿಗೇರ, ಪ್ರಭಾವತಿ, ಮಂಜುನಾಥ ಬಾರ್ಕಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.