ನಿನ್ನ ಅಧಿಕಾರ, ಗೌಡಕಿ ದರ್ಪ ನನ್ಮುಂದೆ ಬೇಡ: ನಿರಾಣಿ

| Published : Sep 02 2024, 02:03 AM IST

ಸಾರಾಂಶ

ಹಿಂದುಳಿದವರ ಬಗ್ಗೆ, ಪಂಚಮಸಾಲಿಗಳ ಬಗ್ಗೆ ನಿನ್ನ ಗೌಡಕಿ ದರ್ಪ, ಅಧಿಕಾರದ ದರ್ಪವನ್ನು ನಮ್ಮ ಮುಂದೆ ತೋರಿಸಬೇಡ ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ ಎಂ.ಬಿ ಪಾಟೀಲ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

‘ಹಿಂದುಳಿದವರ ಬಗ್ಗೆ, ಪಂಚಮಸಾಲಿಗಳ ಬಗ್ಗೆ ನಿನ್ನ ಗೌಡಕಿ ದರ್ಪ, ಅಧಿಕಾರದ ದರ್ಪವನ್ನು ನಮ್ಮ ಮುಂದೆ ಇನ್ನು ಮುಂದೆ ತೋರಿಸಬೇಡ. ನಾನು ಒಂಬತ್ತು ವರ್ಷ ಮಂತ್ರಿ ಆಗಿದ್ದೀನಿ. ನಿನಗಿಂತ 15 ವರ್ಷ ಮೊದಲೇ ಮಂತ್ರಿ ಆಗಿದ್ದೀನಿ. ನನ್ನ ಜೀವ ಜಾಲಾಡಿಸ್ತೀನಿ ಅಂತಿಯಲ್ಲ, ನಿನ್ನ ಜೀವ ಜಾಲಾಡಿಸೋಕೆ ಸಾಕಷ್ಟಿವೆ’ ಎಂದು ಸಚಿವ ಎಂ.ಬಿ.ಪಾಟೀಲ್‌ ವಿರುದ್ಧ ಮಾಜಿ ಸಚಿವ ಮುರುಗೇಶ ನಿರಾಣಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುರುಗೇಶ ನಿರಾಣಿಯಿಂದ ಕೈಗಾರಿಕಾ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಚಿವ ಎಂ.ಬಿ.ಪಾಟೀಲ್ ಆರೋಪಕ್ಕೆ ಉತ್ತರಿಸುವ ಸಂದರ್ಭದಲ್ಲಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ ನಿರಾಣಿ, ‘ನೀರಾವರಿ ಸಚಿವನಾದಾಗ ಮತ್ತು ಈಗ ಕೈಗಾರಿಕಾ ಸಚಿವನಾದಾಗ ಒಂದೂ ಭ್ರಷ್ಟಾಚಾರ ಮಾಡಿಲ್ಲ ಅಂತ ನಿನ್ನ ತಾಯಿ-ತಂದೆ ಮೇಲೆ ಪ್ರಮಾಣ ಮಾಡಿ ಹೇಳು. ಸರ್ಕಾರದ ಆಸ್ತಿಯನ್ನು ಬೇರೆಯವರ ಹೆಸರಿನಿಂದ ನಾನು ತೆಗೆದುಕೊಂಡಿಲ್ಲ ಅಂತ ಪ್ರಮಾಣ ಮಾಡು. ನೀನು ಹೇಳಿದನ್ನು ನಾನು ಕೇಳೋಕೆ ತಯಾರಿದ್ದೇನೆ. ಇದು ನನ್ನ ಸವಾಲು. ಕಾಲ ಬರಲಿ ಎಲ್ಲವನ್ನೂ ಒಂದೊಂದಾಗಿ ಮುಂದೆ ಇಡುತ್ತೇನೆ’ ಎಂದರು.ಕಾರಜೋಳ ಗ್ರಾಮದಲ್ಲಿ 350 ಎಕರೆ ಜಮೀನನ್ನು ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡಿರಿ. ಎಸ್ಸಿ ಮತ್ತು ಎಸ್ಟಿ ಜನರಿರುವ ಊರಿನಲ್ಲಿ ಹೆಚ್ಚಿನ ಜಮೀನು ತೆಗೆದುಕೊಂಡಿದ್ದಿರಿ. ಸಕ್ಕರೆ ಕಾರ್ಖಾನೆ ಕಟ್ಟಿ ಬೇರೆ ರಾಜ್ಯದವರಿಗೆ ಮಾರಾಟ ಮಾಡಿದಿರಿ. ರೈತರಿಗೆ ಸುಳ್ಳು ಹೇಳಿ ಮೋಸ ಮಾಡಿದಿರಿ. ನಿರಾಣಿ ಯೋಗ್ಯತೆ ಏನಿದೆ ಎಂತ ಬಾಗಲಕೋಟೆ, ವಿಜಯಪುರ ಜನರಿಗೆ ಗೊತ್ತಿದೆ ಎಂದರು.ನಾವೆಲ್ಲ ದನಾ ಕಾಯೋರು ಅಂತೀರಿ. ಹೌದು, ನಾನು ದನಾ ಕಾಯೋನೆ. ನಾನು ನಿಮ್ಮ ತರಾ ಅಲ್ಲ. ಯಾರೋ ಕಟ್ಟಿರುವ ಬಿಎಲ್‌ಡಿ ಸಂಸ್ಥೆಗೆ ಹುತ್ತಿನಲ್ಲಿ ಹಾವಾಗಿ ಬಂದು ಕೂತು ಅಧ್ಯಕ್ಷನಾಗಿ ಮಜಾ ಮಾಡ್ತಿದ್ದೀಯಾ ಗೌಡ. ನಿಮ್ಮ ಬಿಎಲ್‌ಡಿಎ ಸಂಸ್ಥೆ ಬೇರೆಯವರು ಕಟ್ಟಿದ್ದು, ನೀವು ಬಂದು ಕೂತಿರಿ. ಅಲ್ಲಿ ರಾಜೀನಾಮೆ ಕೊಟ್ಟು ಹೊರ ಬಂದು ಸಂಸ್ಥೆ ಕಟ್ಟಿ ಎಂದು ಸವಾಲು ಹಾಕಿದರು.