ಆರ್‌ಎಸ್‌ಎಸ್ ಬಗ್ಗೆ ಅಜ್ಞಾನದಿಂದ ಮಾತನಾಡಬೇಡಿ

| Published : Oct 19 2025, 01:00 AM IST

ಸಾರಾಂಶ

ಯಾರೂ ಆರ್‌ಎಸ್‌ಎಸ್ ಬಗ್ಗೆ ಅಜ್ಞಾನದಿಂದ ಮಾತನಾಡಬೇಡಿ. ಅದು ರಾಷ್ಟ್ರಪ್ರೇಮ ಬೆಳೆಸುವ ಸಂಸ್ಥೆಯಾಗಿದ್ದು, ಶತಮಾನೋತ್ಸವ ಆಚರಣೆಯ ವೇಳೆ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ತಿಳಿಸಿದರು. ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಕೆಲವು ಮಂದಿ ಆರ್‌ಎಸ್‌ಎಸ್ ಬಗ್ಗೆ ವೈಚಾರಿಕ ಅಜ್ಞಾನದಿಂದ ಟೀಕೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಸಂಸ್ಥೆ ಧರ್ಮರಕ್ಷಣೆ, ರಾಷ್ಟ್ರೀಯತೆ ಮತ್ತು ಸಮಾಜ ಸೇವೆಯ ತತ್ವವನ್ನು ಬೋಧಿಸುತ್ತಿದೆ. ಅದರ ಬಗ್ಗೆ ಮಾತನಾಡಬೇಕಾದರೆ ಜವಾಬ್ದಾರಿಯಿಂದ ಮಾತನಾಡಬೇಕು. ವಿಚಾರ ತಿಳಿಯದೆ ಗಾಳಿಯಲ್ಲಿ ಗುಂಡು ಹೊಡೆಯಬಾರದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಯಾರೂ ಆರ್‌ಎಸ್‌ಎಸ್ ಬಗ್ಗೆ ಅಜ್ಞಾನದಿಂದ ಮಾತನಾಡಬೇಡಿ. ಅದು ರಾಷ್ಟ್ರಪ್ರೇಮ ಬೆಳೆಸುವ ಸಂಸ್ಥೆಯಾಗಿದ್ದು, ಶತಮಾನೋತ್ಸವ ಆಚರಣೆಯ ವೇಳೆ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ತಿಳಿಸಿದರು.

ಕುಟುಂಬ ಸಮೇತ ಆಗಮಿಸಿ ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಮಾಜಿ ಶಾಸಕ ಪ್ರೀತಂ ಗೌಡ ಅವರು ಹಾಸನಾಂಬ ಉತ್ಸವದ ವ್ಯವಸ್ಥೆ ಹಾಗೂ ರಾಷ್ಟ್ರ ಸೇವೆಯ ಪಾಠ ನೀಡುವ ಆರ್‌ಎಸ್‌ಎಸ್ ಕುರಿತು ಮಹತ್ವದ ಹೇಳಿಕೆ ನೀಡಿದ ಅವರು, ತಾಯಿ ಹಾಸನಾಂಬೆ ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉತ್ಸವದ ಹೊಸ ಕಾಯಕಲ್ಪ ಕಂಡಿದ್ದೇವೆ. ಭಕ್ತರ ಸಂಖ್ಯೆ ಹೆಚ್ಚಿದರೂ, ಸವಾಲುಗಳ ನಡುವೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಕೈಜೋಡಿಸಿ ಉತ್ಸವ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಇದೇ ವೇಳೆ ಪ್ರೀತಂ ಗೌಡ ಅವರು ತಮ್ಮ ಶಾಸಕರಾದ ಕಾಲವನ್ನು ನೆನಪಿಸಿಕೊಂಡು, ನಾನು ಶಾಸಕರಾಗಿದ್ದಾಗ ದಿನಕ್ಕೆ ೧೮-೨೦ ಗಂಟೆ ಕೆಲಸ ಮಾಡುತ್ತಿದ್ದೆ. ಆಗ ಕೆಲವು ಬದಲಾವಣೆಗಳು ಆಗಿದ್ದವು. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪ್ರಯತ್ನಗಳು ನಡೆಯುತ್ತಿವೆ. ಹಾಸನಕ್ಕೆ ಒಳ್ಳೆಯ ಹೆಸರು ಬರಲಿ ಎನ್ನುವುದು ನನ್ನ ಕೋರಿಕೆ ಎಂದು ಹೇಳಿದರು.ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಆರ್‌ಎಸ್‌ಎಸ್ ಕುರಿತು ಮಾತನಾಡಿದ ಅವರು, ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಕೆಲವು ಮಂದಿ ಆರ್‌ಎಸ್‌ಎಸ್ ಬಗ್ಗೆ ವೈಚಾರಿಕ ಅಜ್ಞಾನದಿಂದ ಟೀಕೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಸಂಸ್ಥೆ ಧರ್ಮರಕ್ಷಣೆ, ರಾಷ್ಟ್ರೀಯತೆ ಮತ್ತು ಸಮಾಜ ಸೇವೆಯ ತತ್ವವನ್ನು ಬೋಧಿಸುತ್ತಿದೆ. ಅದರ ಬಗ್ಗೆ ಮಾತನಾಡಬೇಕಾದರೆ ಜವಾಬ್ದಾರಿಯಿಂದ ಮಾತನಾಡಬೇಕು. ವಿಚಾರ ತಿಳಿಯದೆ ಗಾಳಿಯಲ್ಲಿ ಗುಂಡು ಹೊಡೆಯಬಾರದು ಎಂದು ಎಚ್ಚರಿಸಿದರು. ಆರ್‌ಎಸ್‌ಎಸ್ ಸಂಸ್ಥೆಯು ರಾಷ್ಟ್ರದ ಅಖಂಡತೆ ಕಾಪಾಡುವ, ಯುವಕರಲ್ಲಿ ದೇಶಪ್ರೇಮ ಬೆಳೆಸುವ ಕೆಲಸ ಮಾಡುತ್ತಿದೆ. ಶಾಲೆಗಳಲ್ಲಿ ಶಾಖೆ ನಿರ್ಬಂಧಿಸಿದರೆ ಆರ್‌ಎಸ್‌ಎಸ್ ಶಕ್ತಿ ಕಡಿಮೆಯಾಗುವುದಿಲ್ಲ. ರಾಷ್ಟ್ರಪತಿ, ಪ್ರಧಾನಿಯಂತಹ ನಾಯಕರೂ ಆರ್‌ಎಸ್‌ಎಸ್‌ನಿಂದಲೇ ರೂಪುಗೊಂಡವರು ಎಂದರು. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವವರು ಅದರ ಚಿಂತನೆ, ಕಾರ್ಯಪದ್ಧತಿ, ತತ್ವ ತಿಳಿದುಕೊಂಡು ಮಾತನಾಡಬೇಕು. ವೈಯಕ್ತಿಕ ಹಿತಾಸಕ್ತಿಯಿಂದ ಟೀಕೆ ಮಾಡುವುದು ಸರಿಯಲ್ಲ. ಹಾಸನಾಂಬೆ ಎಲ್ಲರಿಗೂ ಸದ್ಬುದ್ಧಿ ನೀಡಿ ದೇಶದ ಏಕತೆಗಾಗಿ ಕೆಲಸ ಮಾಡುವ ಮನೋಭಾವ ನೀಡಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಹಾಸನಾಂಬೆ ದೇವಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣೇಬೈರೇಗೌಡರು ಎದುರಾಗಿ ಕೈಮುಗಿದಾಗಿ ಪ್ರೀತಂಗೌಡರು ಕೂಡ ಕೈಮುಗಿದು ಗೌರವಿಸಿದರು.