ಸಾರಾಂಶ
ಎಚ್‌ಎಂಪಿವಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸೋಂಕಷ್ಟೇ. ಆರೋಗ್ಯ ಇಲಾಖೆ ನೀಡಿರುವ ಸೂಚನೆ ಪಾಲಿಸುವ ಮೂಲಕ ಈ ಸೋಂಕು ತಡೆಯಬಹುದು. ಕೆಮ್ಮ, ಜ್ವರ, ನೆಗಡಿ ಎಚ್‌ಎಂಪಿವಿ ಲಕ್ಷಣಗಳು. ಸೀನು ಮತ್ತು ಕೆಮ್ಮ ಬಂದಾಗ ಕರವಸ್ತ್ರ ಬಳಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜನರಿಗೆ ಸಲಹೆ ನೀಡಿದರು.
ಧಾರವಾಡ:
ಜಗತ್ತಿನೆಲ್ಲಡೆ ಸದ್ದು ಮಾಡುತ್ತಿರುವ ಎಚ್‌ಎಂಪಿವಿ ವೈರಸ್ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ, ಈ ಬಗ್ಗೆ ಮುನ್ನಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌ಎಂಪಿವಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸೋಂಕಷ್ಟೇ. ಆರೋಗ್ಯ ಇಲಾಖೆ ನೀಡಿರುವ ಸೂಚನೆ ಪಾಲಿಸುವ ಮೂಲಕ ಈ ಸೋಂಕು ತಡೆಯಬಹುದು. ಕೆಮ್ಮ, ಜ್ವರ, ನೆಗಡಿ ಎಚ್‌ಎಂಪಿವಿ ಲಕ್ಷಣಗಳು. ಸೀನು ಮತ್ತು ಕೆಮ್ಮ ಬಂದಾಗ ಕರವಸ್ತ್ರ ಬಳಸಲು ಅವರು ಸಲಹೆ ನೀಡಿದರು.
ಎಚ್‌ಎಂಪಿವಿ ವೈರಸ್ ಬಗ್ಗೆ ಕೇಂದ್ರ-ರಾಜ್ಯ ಸರ್ಕಾರ ಮೇಲ್ವಿಚಾರಣೆ ನಡೆಸಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೂಡ ಪ್ರತಿವಾರ ಈ ವೈರಸ್ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದರು.ಡಿಸೆಂಬರ್ ತಿಂಗಳಲ್ಲಿ 40, ಜನವರಿ ಮೊದಲ ವಾರದಲ್ಲಿ 20ಕ್ಕೂ ಅಧಿಕ ಜ್ವರ, ನೆಗಡಿ, ಕೆಮ್ಮು ಇರುವ ಪ್ರಕರಣ ಪತ್ತೆಯಾಗಿವೆ. ಆದರೆ, ಇವರಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.ಕೆಮ್ಮು, ನೆಗಡಿ, ಜ್ವರದ ಪ್ರಕರಣಗಳಿಗೆ ಮುಂಜಾಗ್ರತ ಕ್ರಮವಾಗಿ ಐಶೋಲೇಶನ್ ವಾರ್ಡ್ ವ್ಯವಸ್ಥೆ, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಮಾಡಲು ಡಿಎಚ್‌ಒ ಹಾಗೂ ಡಿಎಸ್ ಅವರಿಗೆ ಸೂಚಿಸಿದ್ದಾಗಿ ಹೇಳಿದ ಅವರು, ಸಾಕಷ್ಟು ಔಷಧಿ ಸಂಗ್ರಹ, ಬೆಡ್ ವ್ಯವಸ್ಥೆ ಮಾಡಿದೆ. ವೈದ್ಯರು ಲಭ್ಯರಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸಾವಿರ ಬೆಡ್ ವ್ಯವಸ್ಥೆ ಕೊಠಡಿ ಜತೆ ತಾಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದಾಗಿ ತಿಳಿಸಿದರು.