ಸಂಚಾರಿ ನಿಯಮಗಳಿಗೆ ಇಲ್ಲಿ ಡೋಂಟ್‌ಕೇರ್!

| Published : Jun 10 2024, 02:01 AM IST / Updated: Jun 10 2024, 10:52 AM IST

ಸಾರಾಂಶ

ಕಳೆದ ಮೇ 31ರಿಂದಲೇ ಶಾಲೆಗಳು ಪ್ರಾರಂಭವಾಗಿದ್ದು, ನಿತ್ಯವೂ ಶಾಲೆಗೆ ಮಕ್ಕಳನ್ನು ಪಾಲಕರು ತಮ್ಮ ಬೈಕ್‌ನಲ್ಲಿ ಕರೆದುಕೊಂಡು ಹೋಗುವುದು, ಬರುವುದು ಸರ್ವೇ ಸಾಮಾನ್ಯ.

ಅಜೀಜ ಅಹ್ಮದ ಬಳಗಾನೂರ

ಹುಬ್ಬಳ್ಳಿ:ಸಂಚಾರಿ ನಿಯಮ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕಿದ್ದ ಪಾಲಕರೆ ಇಂದು ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಇಂಥವರಿಗೆ ತಿಳವಳಿಕೆ, ದಂಡ ವಿಧಿಸಬೇಕಿದ್ದ ಸಂಚಾರಿ ಪೊಲೀಸರು ಹಾಗೂ ಜಿಲ್ಲಾಡಳಿತ ನಿದ್ರೆಗೆ ಜಾರಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಕಳೆದ ಮೇ 31ರಿಂದಲೇ ಶಾಲೆಗಳು ಪ್ರಾರಂಭವಾಗಿದ್ದು, ನಿತ್ಯವೂ ಶಾಲೆಗೆ ಮಕ್ಕಳನ್ನು ಪಾಲಕರು ತಮ್ಮ ಬೈಕ್‌ನಲ್ಲಿ ಕರೆದುಕೊಂಡು ಹೋಗುವುದು, ಬರುವುದು ಸರ್ವೇ ಸಾಮಾನ್ಯ. ಆದರೆ, ನಿಯಮ ಮೀರಿ ನಾಲ್ಕೈದು ಮಕ್ಕಳನ್ನು ಒಂದೇ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿರುವುದು ಹೆಚ್ಚಾಗಿದೆ.

ಸಂಚಾರಿ ಪೊಲೀಸರ ಕೆಲಸವೆಂದರೆ ಬರೀ ಹೆಲ್ಮೆಟ್‌ ಧರಿಸದವರನ್ನು ಹಿಡಿದು ದಂಡ ವಸೂಲಿ ಮಾಡುವುದಷ್ಟೇ ಎಂಬಂತೆ ಭಾವಿಸಿದ್ದಾರೆ. ಆಟೋಗಳಲ್ಲಿ 10-15 ಮಕ್ಕಳನ್ನು ಕರೆದುಕೊಂಡು ಪೊಲೀಸರ ಎದುರೇ ಹೋದರೂ ಒಮ್ಮೆಯೂ ದಂಡ ವಿಧಿಸಿದ ಉದಾಹರಣೆಯೇ ಇಲ್ಲ.

ಒಂದೇ ವಾರದಲ್ಲಿ 3 ಅವಘಡ:

ಶಾಲೆ ಆರಂಭವಾದ ಒಂದೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ಮೂರು ಕಡೆಗಳಲ್ಲಿ ಅವಘಡಗಳಾಗಿವೆ. ಜೂ. 3ರಂದು ಇಲ್ಲಿನ ಕೇಶ್ವಾಪುರ ವೃತ್ತದಲ್ಲಿ ಪಾಲಕರೋರ್ವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ನಲ್ಲಿದ್ದ ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೊಸೂರು ಬಸ್‌ ನಿಲ್ದಾಣದ ಬಳಿ ಹಾಗೂ ವಿದ್ಯಾನಗರದ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು ಬಳಿಯೂ ಬೈಕ್‌ ಸ್ಕಿಡ್‌ ಆಗಿ ಬಿದ್ದು ಮಕ್ಕಳು ಗಾಯಗೊಂಡಿದ್ದಾರೆ.

ಜಾಗೃತಿ ಕಾರ್ಯವಿಲ್ಲ:

ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿ, ನಿಯಮ ಮೀರಿದವರಿಗೆ ದಂಡ ವಿಧಿಸಬೇಕಿದ್ದ ಪೊಲೀಸರು ಅವರಿಗೆ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ. ಕೆಲವು ಜನನಿಬಿಡ ಪ್ರದೇಶಗಳಲ್ಲಿ ಕೆಲವು ಆಟೋ ಚಾಲಕರು ಮಕ್ಕಳನ್ನು ಕುರಿಗಳಂತೆ ತುಂಬಿಕೊಂಡು ವೇಗವಾಗಿ ಹೋಗುತ್ತಾರೆ. ಸಿಗ್ನಲ್‌ ಕಡೆಗಳಲ್ಲಿ ನಿಲ್ಲಿಸದೇ ಚಲಾಯಿಸುತ್ತಾರೆ. ಇಂತಹ ವಾಹನ ನಿಲ್ಲಿಸಿ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಬೇಕು. ಮತ್ತೆ ಇದನ್ನೇ ಮುಂದುವರಿಸಿದ್ದೇ ಆದಲ್ಲಿ ಅಂತಹ ವಾಹನಗಳನ್ನು ಸೀಜ್‌ ಮಾಡಬೇಕು. ಆದರೆ, ಇದ್ಯಾವುದೂ ಆಗುತ್ತಿಲ್ಲ.

ಏಕೆ ಸಮಸ್ಯೆ ಹೆಚ್ಚಳ?

ಬಡವರು, ಮಧ್ಯಮ ವರ್ಗದವರಿಗೆ ಕುಟುಂಬದ ನಿರ್ವಹಣೆ ಮಾಡುವುದೇ ಕಷ್ಟಕರವಾದ ದಿನಗಳಲ್ಲಿ ಆಟೋ, ಬಸ್‌ ಬಾಡಿಗೆ ನೀಡಿ ಮಕ್ಕಳಿಗೆ ಕಳಿಸಲು ಸಾಧ್ಯವಾಗುತ್ತಿಲ್ಲ. ಆಟೋದವರು ಮಕ್ಕಳನ್ನು ಶಾಲೆಗೆ ಬಿಡಲು ಮನಬಂದಂತೆ ಬಾಡಿಗೆ ಹೇಳುತ್ತಾರೆ. ಇನ್ನು ಶಾಲಾ ಬಸ್‌ಗಳ ಬಾಡಿಗೆಯಂತೂ ಹೇಳತೀರದು. ಹಾಗಾಗಿ ಅನಿವಾರ್ಯವಾಗಿ ನಮ್ಮ ಬೈಕ್‌ನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟುಬರುವಂತಾಗಿದೆ ಎನ್ನುತ್ತಾರೆ ಪಾಲಕರು.ಪಾಲಕರು ಮಕ್ಕಳ ಜೀವದ ಬಗ್ಗೆ ಕಾಳಜಿ ಹೊಂದಿ. ಯಾರೇ ಆಗಲಿ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವುದು ಕಂಡುಬಂದಲ್ಲಿ ಅಂಥವರಿಗೆ ದಂಡ ಹಾಕುವುದು, ಅಂತಹ ವಾಹನಗಳ ಸೀಜ್‌ ಮಾಡುವಂತೆ ಸಂಚಾರಿ ಪೊಲೀಸರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.